ಉದಯವಾಹಿನಿ, ಭಾರತೀಯ ಸೇನೆಯ ಬಲವನ್ನು ಮತ್ತಷ್ಟು ಹೆಚ್ಚಿಸುವ ಭಾಗವಾಗಿ ಕ್ಷಿಪಣಿ ನಿರೋಧಕ ಎಸ್ 400, ಸಾರಿಗೆ ವಿಮಾನಗಳು ಮತ್ತು ಇತರ ಶಸ್ತ್ರಾಸ್ತ್ರಗಳನ್ನು 2.38 ಲಕ್ಷ ಕೋಟಿ ರೂಪಾಯಿ ವೆಚ್ಚದಲ್ಲಿ ರಷ್ಯಾದಿಂದ ಖರೀದಿಸಲು ಅನುಮೋದನೆ ಸಿಕ್ಕಿದೆ. ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ನೇತೃತ್ವದಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ಭೂಸೇನೆ, ವಾಯುಸೇನೆ, ಕರಾವಳಿ ಪಡೆಗಳಿಗೆ ಅಗತ್ಯವಿರುವ ವಿವಿಧ ಶಸ್ತ್ರಾಸ್ತ್ರಗಳು ಮತ್ತು ಅವುಗಳ ವ್ಯವಸ್ಥೆಯನ್ನು ಖರೀದಿಸಲು ರಕ್ಷಣಾ ಸ್ವಾಧೀನ ಮಂಡಳಿಯು (ಡಿಎಸಿ) ಶುಕ್ರವಾರ ಒಪ್ಪಿಗೆ ನೀಡಿದೆ. 2025-26ನೇ ಸಾಲಿನ ಹಣಕಾಸು ವರ್ಷದಲ್ಲಿ ರಕ್ಷಣಾ ಖರೀದಿಗೆ ಸಂಬಂಧಿಸಿದಂತೆ ಇದು ದಾಖಲೆಯ ವರ್ಷವಾಗಿದೆ. ಈವರೆಗೆ ಒಟ್ಟು 55 ಪ್ರಸ್ತಾವನೆಗಳಲ್ಲಿ 6.73 ಲಕ್ಷ ಕೋಟಿ ರೂಪಾಯಿ ಮೌಲ್ಯದ ಖರೀದಿಗೆ ಅಗತ್ಯ ಅನುಮೋದನೆ ನೀಡಲಾಗಿದೆ. ಅದರಲ್ಲೂ ಈ ವರ್ಷವೊಂದರಲ್ಲೇ 2.28 ಲಕ್ಷ ಕೋಟಿ ರೂಪಾಯಿ ಮೊತ್ತದ ಖರೀದಿಗೆ ಒಪ್ಪಿಗೆ ಸಿಕ್ಕಿದ್ದು, ಅತ್ಯಧಿಕ ಮೊತ್ತದ ಒಪ್ಪಂದ ಇದಾಗಿದೆ. ರಷ್ಯಾದಿಂದ ಏನೆಲ್ಲಾ ಖರೀದಿಸುವ ಯೋಜನೆ: ಭಾರತದ ಭೂಸೇನೆ, ವಾಯುಪಡೆ ಮತ್ತು ಕರಾವಳಿ ಪಡೆಗಳ ರಕ್ಷಣಾ ವ್ಯವಸ್ಥೆಗೆ ಬೇಕಾದ ಶಸ್ತ್ರಾಸ್ತ್ರಗಳನ್ನು ಖರೀದಿಸಲು ಕೇಂದ್ರ ಸರ್ಕಾರ ಯೋಜಿಸಿದೆ. ಇದರಲ್ಲಿ 5 ಎಸ್-400 ಕ್ಷಿಪಣಿ ನಿರೋಧಕ ವ್ಯವಸ್ಥೆಗಳು, 60 ಮಧ್ಯಮ ಸಾರಿಗೆ ವಿಮಾನಗಳು ಹಾಗೂ ಇತರ ಶಸ್ತ್ರಾಸ್ತ್ರಗಳು ಇವೆ.
ಸೋವಿಯತ್ ಒಕ್ಕೂಟ ಇದ್ದಾಗ ತೆಗೆದುಕೊಂಡಿದ್ದ AN-32 ಮತ್ತು IL-76 ವಿಮಾನಗಳು ಹಳೆಯದಾಗಿದ್ದು, ಅವುಗಳನ್ನು ಬದಲಿಸಲು ಹೊಸ ಸಾರಿಗೆ ವಿಮಾನಗಳನ್ನು ಖರೀದಿಸಲಾಗುತ್ತಿದೆ. ಅದರಲ್ಲಿ 12 ವಿಮಾನಗಳನ್ನು ರಷ್ಯಾದಲ್ಲಿ ತಯಾರಿಸಿ ತಂದರೆ, ಉಳಿದ 48 ವಿಮಾನಗಳನ್ನು ಭಾರತದಲ್ಲಿ ಉತ್ಪಾದಿಸಲು ಒಪ್ಪಂದ ಮಾಡಿಕೊಳ್ಳಲಾಗುವುದು ಎಂದು ಸರ್ಕಾರದ ಮೂಲಗಳು ತಿಳಿಸಿವೆ. ಆಪರೇಷನ್ ಸಿಂಧೂರ್ ಹೀರೋ ಎಸ್-400: ಪಾಕಿಸ್ತಾನದ ವಿರುದ್ಧ ನಡೆಸಿದ ಆಪರೇಷನ್ ಸಿಂಧೂರ್ ಕಾರ್ಯಾಚರಣೆಯ ವೇಳೆ ಹೀರೋ ಆಗಿ ಮೆರೆದಿದ್ದ ಕ್ಷಿಪಣಿ ನಿರೋಧಕ ವ್ಯವಸ್ಥೆಯಾದ ಎಸ್-400 ವ್ಯವಸ್ಥೆಯನ್ನು ಮತ್ತಷ್ಟು ಹೆಚ್ಚಿಸಲು ಭಾರತೀಯ ಸೇನೆ ಮುಂದಾಗಿದೆ. ಹೀಗಾಗಿ, ಇನ್ನೂ 5 ಎಸ್- 400 ವ್ಯವಸ್ಥೆಯನ್ನು ಖರೀದಿಸಲು ನಿರ್ಧಾರಕ್ಕೆ ಬರಲಾಗಿದೆ. 2018 ರಲ್ಲಿ S-400 ವಾಯು ರಕ್ಷಣಾ ಕ್ಷಿಪಣಿ ವ್ಯವಸ್ಥೆಗಳ ಐದು ಘಟಕಗಳನ್ನು ಖರೀದಿಸಲು 5 ಬಿಲಿಯನ್ ಅಮೆರಿಕನ್ ಡಾಲರ್ ಒಪ್ಪಂದಕ್ಕೆ ಭಾರತ ಸಹಿ ಹಾಕಿತ್ತು.
ಅದರಲ್ಲಿ ಮೂರು ಘಟಕಗಳು ಭಾರತಕ್ಕೆ ಬಂದಿವೆ. ಇನ್ನೂ ಎರಡು ಬರಬೇಕಿದೆ. ಅದರ ಜೊತೆಗೆ ಇನ್ನೂ 5 ಘಟಕಗಳನ್ನು ಖರೀದಿಸಲು ಅನುಮೋದನೆ ಸಿಕ್ಕಿದೆ ಎಂದು ಮೂಲಗಳು ತಿಳಿಸಿವೆ.ಯಾವ ವಿಭಾಗಕ್ಕೆ ಏನು ಸಿಗಲಿದೆ?: ಈ ಒಪ್ಪಂದದ ಪೈಕಿ ಭಾರತೀಯ ವಾಯುಪಡೆಗೆ, ಮಧ್ಯಮ ಸಾರಿಗೆ ವಿಮಾನಗಳು, ಎಸ್ -400 ದೀರ್ಘ ಶ್ರೇಣಿಯ ಕ್ಷಿಪಣಿ ನಿರೋಧಕ ವ್ಯವಸ್ಥೆ, ರಿಮೋಟ್ ಪೈಲಟ್ ಮಾಡಿದ ಸ್ಟ್ರೈಕ್ ವಿಮಾನಗಳು ಮತ್ತು ಸು-30 ಏರೋ ಎಂಜಿನ್ ಅಗ್ರಿಗೇಟ್ಸ್ ಖರೀದಿಗೆ ಅನುಮೋದಿಸಲಾಗಿದೆ.ಎಸ್ -400 ವ್ಯವಸ್ಥೆಯು ಶತ್ರುಗಳು ಹಾರಿಬಿಡುವ ಕ್ಷಿಪಣಿಗಳನ್ನು ಧ್ವಂಸ ಮಾಡಲು ಮತ್ತು ಅವುಗಳ ಮೇಲೆ ನಿಗಾ ಇಡಲು ಬಳಸಿದರೆ, ರಿಮೋಟ್ ಪೈಲಟ್ ಮಾಡಿದ ಸ್ಟ್ರೈಕ್ ವಿಮಾನಗಳು ಆಕ್ರಮಣಕಾರಿ ಪ್ರತಿದಾಳಿ ಮತ್ತು ಸಂಘಟಿತ ವಾಯು ಕಾರ್ಯಾಚರಣೆಗಳನ್ನು ಕೈಗೊಳ್ಳಲು ಅನುವು ಮಾಡಿಕೊಡುತ್ತದೆ. ರಹಸ್ಯ ಗುಪ್ತಚರ ಮತ್ತು ಕಣ್ಗಾವಲು ಚಟುವಟಿಕೆಗಳನ್ನು ಸಹ ಇದು ಒದಗಿಸುತ್ತದೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.
ಇನ್ನೂ, ಭೂಸೇನೆಗೆ ವಾಯು ರಕ್ಷಣಾ ಟ್ರ್ಯಾಕ್ಡ್ ವ್ಯವಸ್ಥೆ, ಶಸ್ತ್ರಸಜ್ಜಿತ ಟ್ಯಾಂಕ್ ಮದ್ದುಗುಂಡುಗಳು, ರೇಡಿಯೋ ರಿಲೇ, ಧನುಷ್ ಗನ್ ವ್ಯವಸ್ಥೆ ಮತ್ತು ರನ್‌ವೇ ಸ್ವತಂತ್ರ ವೈಮಾನಿಕ ಕಣ್ಗಾವಲು ವ್ಯವಸ್ಥೆಗೆ ಅನುಮೋದನೆ ನೀಡಲಾಗಿದೆ.ಇತ್ತ, ಭಾರತೀಯ ಕರಾವಳಿ ಕಾವಲು ಪಡೆಗಾಗಿ, ಹೆವಿ ಡ್ಯೂಟಿ ಏರ್ ಕುಶನ್ ವಾಹನಗಳ ಖರೀದಿಗೆ ಅನುಮೋದನೆ ನೀಡಲಾಗಿದೆ.
