ಉದಯವಾಹಿನಿ, ಪುಣೆ, ಮಹಾರಾಷ್ಟ್ರ: ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾದ ಯುವತಿಯನ್ನು ಪ್ರೇಮ ವಿವಾಹವಾದ ವ್ಯಕ್ತಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ಪತ್ನಿ ಜೊತೆಗಿನ ನಿರಂತರ ಜಗಳವೇ ಸಾವಿಗೆ ಕಾರಣ ಎನ್ನಲಾಗುತ್ತಿದೆ. ಮಹಾರಾಷ್ಟ್ರದ ಪುಣೆಯ ಅಂಬೆಗಾಂವ್​ನಲ್ಲಿ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.ಜಂಭುಲ್ವಾಡಿ ನಿವಾಸಿ ಮೊಹಮ್ಮದ್ ಸಾದ್ ಆಸಿಫ್ ಸಯ್ಯದ್ (20) ಆತ್ಮಹತ್ಯೆಗೆ ಶರಣಾದ ವ್ಯಕ್ತಿ. ಈತ ಮೂಲತಃ ನಾಸಿಕ್ ಜಿಲ್ಲೆಯ ಮಾಲೆಗಾಂವ್​ನ​ ನಯಾಪುರದವ ಎಂದು ತಿಳಿದುಬಂದಿದೆ. ಸದ್ಯ ಆಟೋ ಚಾಲಕನಾಗಿ ಕೆಲಸ ಮಾಡುತ್ತಿದ್ದ.
ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಸಯ್ಯದ್ ವಿಡಿಯೋ ರೆಕಾರ್ಡ್ ಮಾಡಿ, ಅದನ್ನು ತನ್ನ ಊರಿನ ಸ್ನೇಹಿತನಿಗೆ ಕಳುಹಿಸಿದ್ದಾನೆ ಎನ್ನಲಾಗಿದೆ. ಪತ್ನಿ ಜೊತೆಗಿನ ನಿರಂತರ ಜಗಳ ಮತ್ತು ಅತ್ತೆ ಮಾವನ ಕಿರುಕುಳದಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಸಯ್ಯದ್ ವಿಡಿಯೋದಲ್ಲಿ ಆರೋಪಿಸಿದ್ದಾನೆ ಎಂದು ತಿಳಿದುಬಂದಿದೆ.
ವಿಡಿಯೋ ಆಧರಿಸಿ ಅಂಬೆಗಾಂವ್ ಪೊಲೀಸರು, ಮೃತನ ಪತ್ನಿ ಮತ್ತು ಅವರ ಕುಟುಂಬಸ್ಥರು ಸೇರಿದಂತೆ 7 ಜನರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಪೈಕಿ ಐವರನ್ನು ಪೊಲೀಸರು ಬಂಧಿಸಿ, ತನಿಖೆ ನಡೆಸುತ್ತಿದ್ದಾರೆ.ಆತ್ಮಹತ್ಯೆಗೂ ಮುನ್ನ ಮಾಡಿದ ವಿಡಿಯೋದಲ್ಲೇನಿದೆ? ಪ್ರಾಣ ಕಳೆದುಕೊಳ್ಳುವ ಮುನ್ನ ಮೊಹಮ್ಮದ್ ವಿಡಿಯೊ ರೆರ್ಕಾರ್ಡ್ ಮಾಡಿ ತನ್ನೂರಿನ ಸ್ನೇಹಿತನಿಗೆ ಕಳುಹಿಸಿದ್ದಾನೆ. ಈ ವಿಡಿಯೋದಲ್ಲಿ ವೈವಾಹಿಕ ಕಲಹ, ಅತ್ತೆ ಮಾವನ ಕಿರುಕುಳದಿಂದ ಬೇಸತ್ತಿರುವ ಬಗ್ಗೆ ಹೇಳಿಕೊಂಡಿದ್ದಾನೆ ಎಂದು ತಿಳಿದುಬಂದಿದೆ.

ಸಾಮಾಜಿಕ ಜಾಲತಾಣದಲ್ಲಿ ಪರಿಚಯ, ಲವ್, ಮದುವೆ: ಸಾಮಾಜಿಕ ಜಾಲತಾಣ ಮೂಲಕ ಮೊಹಮ್ಮದ್​ಗೆ ಯುವತಿಯ ಪರಿಚಯವಾಗಿತ್ತು. ಬಳಿಕ ಈ ಪರಿಚಯ ಪ್ರೇಮಕ್ಕೆ ತಿರುಗಿದ್ದರಿಂದ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಬಳಿಕ ಜೀವನೋಪಾಯಕ್ಕಾಗಿ ಪುಣೆಗೆ ದಂಪತಿ ಶಿಫ್ಟ್ ಆಗಿದ್ದರು. ಇಲ್ಲಿ ಮೊಹಮ್ಮದ್ ಆಟೋ ಚಾಲಕನಾಗಿ ಕೆಲಸ ಆರಂಭಿಸಿದ್ದ. ಮೊದಮೊದಲು ಚೆನ್ನಾಗಿಯೇ ಇದ್ದ ದಂಪತಿಯ ಮಧ್ಯೆ ಬಳಿಕ ಭಿನ್ನಾಭಿಪ್ರಾಯ ಮೂಡಿ, ಜಗಳಕ್ಕೆ ಕಾರಣವಾಗಿತ್ತು. ನಂತರ ಅತ್ತೆ ಮಾವನ ಕೂಡ ಮೊಹಮ್ಮದ್​ಗೆ ಕಿರುಕುಳ ನೀಡಲು ಆರಂಭಿಸಿದ್ದರು ಎಂದು ಹೇಳಲಾಗಿದೆ. ಇದರಿಂದ ಬೇಸತ್ತ ಈತ ಮಾರ್ಚ್​ 12 ರಂದು ರಾತ್ರಿ 2.30ಕ್ಕೆ ಆಟೋದಲ್ಲೇ ಆತ್ಮಹತ್ಯೆಗೆ ಯತ್ನಿಸಿದ್ದ. ಆದರೆ ಸ್ಥಳೀಯರು ನೋಡಿ, ತಕ್ಷಣವೇ ಆಸ್ಪತ್ರೆಗೆ ದಾಖಲಿಸಿದ್ದರು. ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಈತ ಚಿಕಿತ್ಸೆಗೆ ಸ್ಪಂದಿಸದೇ ಮಾರ್ಚ್ 18 ರಂದು ಮೃತಪಟ್ಟಿದ್ದಾನೆ. ಆ ಬಳಿಕ ಪ್ರಕರಣದ ತನಿಖೆ ತೀವ್ರಗೊಂಡಿದೆ.

Leave a Reply

Your email address will not be published. Required fields are marked *

error: Content is protected !!