ಉದಯವಾಹಿನಿ, ಮಾಧೇಪುರ, ಬಿಹಾರ: ಕಾರೊಂದು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ನದಿಗೆ ಉರುಳಿದ ಪರಿಣಾಮ ಕನಿಷ್ಠ ಮೂವರು ಸಾವನ್ನಪ್ಪಿದ್ದು, ಇನ್ನೋರ್ವ ಯುವಕ ನಾಪತ್ತೆಯಾಗಿರುವ ಘಟನೆ ಬಿಹಾರದ ಮಾಧೇಪುರದಲ್ಲಿ ಶುಕ್ರವಾರ ತಡರಾತ್ರಿ ನಡೆದಿದೆ. ಈ ಬಗ್ಗೆ ಇಲ್ಲಿನ ಪೊಲೀಸರು ಮಾಹಿತಿ ನೀಡಿದ್ದಾರೆ. ಗ್ವಾಲ್ಪಾರಾದ ದಿನಭದ್ರಿ ಜಾತ್ರೆಯಲ್ಲಿ ಭಾಗವಹಿಸಿ ಹಿಂತಿರುಗುತ್ತಿದ್ದಾಗ ಅರಾರ್ ಘಾಟ್ ಸೇತುವೆಯ ಮೇಲೆ ಈ ಅಪಘಾತ ಸಂಭವಿಸಿದೆ. ಕಾಣೆಯಾದ ಯುವಕನಿಗಾಗಿ ರಕ್ಷಣಾ ತಂಡಗಳು ಇನ್ನೂ ಹುಡುಕಾಟ ನಡೆಸುತ್ತಿವೆ.
ಪೊಲೀಸರ ಪ್ರಕಾರ, ಬೆಳಗಿನ ಜಾವ 1.00 ಗಂಟೆ ಸುಮಾರಿಗೆ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ನಂತರ ಕಾರು ನಿಯಂತ್ರಣ ತಪ್ಪಿ ನದಿಯ 20 ಅಡಿ ಆಳಕ್ಕೆ ಬಿದ್ದಿದೆ. ಸ್ಥಳೀಯರು ಅಪಘಾತದ ಬಗ್ಗೆ ನಮಗೆ ಮಾಹಿತಿ ನೀಡಿದರು, ನಂತರ ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಯಿತು. ಕಾಣೆಯಾದ ಯುವಕನನ್ನು ಹುಡುಕಲು ಪೊಲೀಸರು ಮತ್ತು ಎಸ್‌ಡಿಆರ್‌ಎಫ್ ತಂಡಗಳು ಪ್ರಸ್ತುತ ನದಿಯಲ್ಲಿ ಶೋಧ ನಡೆಸುತ್ತಿವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಮೃತರನ್ನು ಮಾಧೇಪುರದ ಸ್ಟೇಷನ್ ಚೌಕ್ ನಿವಾಸಿ ಘನಶ್ಯಾಮ್ ಕುಮಾರ್ (28), ಸಹರ್ಸಾ ಜಿಲ್ಲೆಯ ಮೋಕ್ಮಾ ಪ್ರದೇಶದ ನಿವಾಸಿ ಅಂಕಿತ್ ಕುಮಾರ್ (26), ಮತ್ತು ಸೌರ್ ಬಜಾರ್ ಪೊಲೀಸ್ ಠಾಣೆ ವ್ಯಾಪ್ತಿಯ ಫೋರ್ಸಹಾ ನಿವಾಸಿ ವಸಂತ್ ಕುಮಾರ್ (23) ಎಂದು ಗುರುತಿಸಲಾಗಿದೆ. ಕಾಣೆಯಾದ ಯುವಕನನ್ನು ಜೈಪಾಲಪಟ್ಟಿ ನಿವಾಸಿ ಸಾಗರ್ ಕುಮಾರ್ ಎಂದು ಗುರುತಿಸಲಾಗಿದೆ.
ಮೃತರಲ್ಲಿ ಅಂಕಿತ್ ಬಿಇಡಿ. ಮತ್ತು ಸಿಟಿಇಟಿ-ಅರ್ಹ ಅಭ್ಯರ್ಥಿಯಾಗಿದ್ದರು. ಅವರು ಬಿಪಿಎಸ್‌ಸಿ ಶಿಕ್ಷಕರ ನೇಮಕಾತಿ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದರು. ವಸಂತ್ ಎರಡನೇ ವರ್ಷದ ಬಿಇಡಿ ವಿದ್ಯಾರ್ಥಿಯಾಗಿದ್ದ. ಕಾರು ಚಾಲಕ ಘನಶ್ಯಾಮ್ ಈತ ಆತನ ಕುಟುಂಬದಲ್ಲಿ ಏಕೈಕ ಪುತ್ರ. ಈ ನಾಲ್ವರು ಆಪ್ತರಾಗಿದ್ದರು. ಘಟನೆಗೆ ಸುಮಾರು ಒಂದು ಗಂಟೆ ಮೊದಲು, ಬೆಳಗ್ಗೆ 12:00ರ ಸುಮಾರಿಗೆ, ಮಾಧೇಪುರದಿಂದ ಗ್ವಾಲ್ಪಾರಕ್ಕೆ ಪ್ರಯಾಣಿಸುತ್ತಿದ್ದಾಗ, ಘನಶ್ಯಾಮ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಲೈವ್ ವಿಡಿಯೋ ಮಾಡಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಘನಶ್ಯಾಮ್ ಕಾರು ಚಾಲನೆ ಮಾಡುತ್ತಿರುವುದು ವಿಡಿಯೋದಲ್ಲಿ ಕಂಡು ಬಂದಿದೆ. ಹಾಗೇ ವಿಡಿಯೋದಲ್ಲಿ ಕಾರು ಅತಿ ವೇಗದಲ್ಲಿ ಚಲಿಸುತ್ತಿರುವುದು ಗಮನಕ್ಕೆ ಬಂದಿದೆ.
