ಉದಯವಾಹಿನಿ, ಮೈಸೂರು: ನ್ಯಾಯ ವಿತರಣೆಯಲ್ಲಿ ಪೊಲೀಸರು ಯಾವುದೇ ಕಾರಣಕ್ಕೂ ರಾಜಿಯಾಗಬಾರದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.ಮೈಸೂರು ಘಟಕದ 46ನೇ ತಂಡದ ಸಿವಿಲ್ ಪೊಲೀಸ್ ಉಪ ನಿರೀಕ್ಷಕ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥ ಸಂಚಲನದಲ್ಲಿ ಪಾಲ್ಗೊಂಡ ಸಿಎಂ, ಎಲ್ಲರಿಗೂ ವೃತ್ತಿಪರ ಯಶಸ್ಸನ್ನು ಕೋರಿ ಶುಭಹಾರೈಸಿ ಮಾತನಾಡಿದರು. ಎಲ್ಲರಿಗೂ ರಕ್ಷಣೆ, ಸಮಾನ ಅವಕಾಶಗಳು ದೊರೆಯಬೇಕು:
ಪೊಲೀಸ್ ಸೇವೆಯಲ್ಲಿ ಶಿಸ್ತು ಸಂಯಮ, ಪ್ರಾಮಾಣಿಕತೆ, ಮಾನವೀಯತೆ ಬಹಳ ಮುಖ್ಯ. ಸಮಾಜದಲ್ಲಿನ ಜಾತಿ ವ್ಯವಸ್ಥೆಯಿದ್ದು, ದೀನ ದಲಿತರ, ಅಶಕ್ತರ, ಮಹಿಳೆಯರ ರಕ್ಷಣೆ ಮಾಡುವುದು ಪೊಲೀಸರ ಜವಾಬ್ದಾರಿ. ಮಧ್ಯರಾತ್ರಿಯಲ್ಲಿ ಮಹಿಳೆಯರು ನಿರ್ಭೀತಿಯಿಂದ ಓಡಾಡುವಂತಾದಾಗ ಮಾತ್ರ, ನಿಜಅರ್ಥದಲ್ಲಿ ಸ್ವಾತಂತ್ರ‍್ಯ ದೊರೆತಂತೆ ಎಂದು ಮಹಾತ್ಮ ಗಾಂಧಿಯವರು ಹೇಳಿದ್ದರು. ಸಮಾಜದ ಪ್ರತಿಯೊಬ್ಬರಿಗೂ ಆರ್ಥಿಕ, ಸಾಮಾಜಿಕ ಸಮಾನತೆ ದೊರೆಯಬೇಕು. ಆದ್ದರಿಂದ ನ್ಯಾಯವನ್ನು ಎತ್ತಿಹಿಡಿಯುವ ಕೆಲಸದಲ್ಲಿ ಪೊಲೀಸರು ಯಾವುದೇ ಕಾರಣಕ್ಕೂ ರಾಜಿಯಾಗಬಾರದು. ಎಲ್ಲರಿಗೂ ರಕ್ಷಣೆ, ಸಮಾನ ಅವಕಾಶಗಳು ದೊರೆಯಬೇಕು. ಪೊಲೀಸರು ಸರ್ಕಾರದ ಪ್ರತಿನಿಧಿಯಾಗಿ ಕರ್ತವ್ಯ ನಿರ್ವಹಿಸಬೇಕಲ್ಲದೇ, ಕಾನೂನು ಸುವ್ಯವಸ್ಥೆಯನ್ನು ಕಾಯುವಲ್ಲಿ ಮಹತ್ವದ ಪಾತ್ರ ವಹಿಸಬೇಕು ಎಂದರು.
