ಉದಯವಾಹಿನಿ, ಲಕ್ನೋ: ಬೆಂಗಳೂರಿನಿಂದ ವಾರಣಾಸಿಗೆ ಹೋಗುತ್ತಿದ್ದ ಇಂಡಿಗೋ ವಿಮಾನದಲ್ಲಿ ಎಮರ್ಜೆನ್ಸಿ ಡೋರ್‌ ತೆಗೆಯಲು ಪ್ರಯಾಣಿಕನೊಬ್ಬ ಯತ್ನಿಸಿದ ಘಟನೆ ನಡೆದಿದೆ. ವಿಚಾರಣೆ ವೇಳೆ ಆತ ʻನನಗೆ ದೆವ್ವ ಹಿಡಿದಿದೆʼ ಎಂದು ಹೇಳಿಕೊಂಡಿದ್ದಾನೆ.
ಎಮರ್ಜೆನ್ಸಿ ಡೋರ್‌ ತೆಗೆಯಲು ಯತ್ನಿಸಿದ ಪ್ರಯಾಣಿಕನನ್ನು ಉತ್ತರ ಪ್ರದೇಶದ ಮೌ ಜಿಲ್ಲೆಯ ನಿವಾಸಿ ಮೊಹಮ್ಮದ್ ಅದ್ನಾನ್ ಎಂದು ಗುರುತಿಸಲಾಗಿದೆ. ಮಾ.28ರಂದು ಇಂಡಿಗೋ ವಿಮಾನ 6E-185 ರಾತ್ರಿ 8:15ರ ಸುಮಾರಿಗೆ ಬೆಂಗಳೂರಿನಿಂದ ಹೊರಟಿತ್ತು. ಪ್ರಯಾಣ ಆರಂಭಗೊಂಡ ಕೇವಲ 15 ನಿಮಿಷಗಳಲ್ಲಿ ಅದ್ನಾನ್ ಎಮರ್ಜೆನ್ಸಿ ಡೋರ್‌ ತೆಗೆಯಲು ಯತ್ನಿಸಿದ್ದ. ಈ ವೇಳೆ, ಅಧಿಕಾರಿಗಳು ಆತನಿಗೆ ಎಚ್ಚರಿಕೆ ನೀಡಿದ್ದರು. ವಾರಣಾಸಿಯ ಲಾಲ್ ಬಹದ್ದೂರ್ ಶಾಸ್ತ್ರಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ರಾತ್ರಿ 10:20ರ ಸುಮಾರಿಗೆ ವಿಮಾನ ಲ್ಯಾಂಡಿಂಗ್‌ಗೆ ಸಿದ್ಧವಾಗಿದ್ದಾಗಲೂ ಅದ್ನಾನ್ ವಿಮಾನದ ಎಮರ್ಜೆನ್ಸಿ ಡೋರ್‌ ತೆಗೆಯಲು ಯತ್ನಿಸಿದ್ದಾನೆ. ಈ ವೇಳೆ ವಿಮಾನ 500 ಅಡಿಗಳ ಎತ್ತರದಲ್ಲಿತ್ತು. ತಕ್ಷಣ ಪೈಲಟ್ ಲ್ಯಾಂಡಿಂಗ್ ಪ್ರಯತ್ನವನ್ನು ರದ್ದುಗೊಳಿಸಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.‌ ಬಳಿಕ ವಿಮಾನವು ರಾತ್ರಿ 10:35 ಕ್ಕೆ ಲ್ಯಾಂಡ್‌ ಮಾಡಲಾಯಿತು.
ಲ್ಯಾಂಡಿಂಗ್‌ ಬಳಿಕ ಅದ್ನಾನ್‌ನನ್ನು ತಕ್ಷಣವೇ ವಿಮಾನಯಾನ ಸಂಸ್ಥೆಯ ಭದ್ರತಾ ಸಿಬ್ಬಂದಿ ಮತ್ತು ಸಿಐಎಸ್ಎಫ್‌ಗೆ ಹಸ್ತಾಂತರಿಸಲಾಯಿತು. ಬಳಿಕ ಪೊಲೀಸರಿಗೆ ಮಾಹಿತಿ ನೀಡಿ ಪ್ರಕರಣ ದಾಖಲಿಸಲಾಯಿತು. ವಿಮಾನ ನಿಲ್ದಾಣದಲ್ಲಿ ಭದ್ರತಾ ಸಿಬ್ಬಂದಿ ಮತ್ತು ಪೊಲೀಸ್ ಅಧಿಕಾರಿಗಳು ವಿಚಾರಣೆ ನಡೆಸಿದಾಗ, ಅದ್ನಾನ್ ಆರಂಭದಲ್ಲಿ ತಾನು ಈ ರೀತಿ ಏಕೆ ವರ್ತಿಸಿದೆ ಎಂದು ತಿಳಿದಿಲ್ಲ. ತನಗೆ ʻದೆವ್ವ ಹಿಡಿದಿದೆʼ ಎಂದು ಹೇಳಿಕೊಂಡಿದ್ದಾನೆ. ಪೊಲೀಸ್ ಠಾಣೆಯಲ್ಲಿ ವಿಚಾರಣೆ ನಡೆಸಿದಾಗ, ನಾನು ಗೋವಾದಿಂದ ಹಿಂತಿರುಗುತ್ತಿದ್ದೇನೆ. ನಾನು ಎಳೆಯುತ್ತಿದ್ದ ಹ್ಯಾಂಡಲ್ ತುರ್ತು ನಿರ್ಗಮನದ ಬಾಗಿಲಿನದ್ದು ಎಂದು ತಿಳಿದಿರಲಿಲ್ಲ ಎಂದು ಹೇಳಿಕೊಂಡಿದ್ದಾನೆ. ಅದ್ನಾನ್ ಕುಟುಂಬಕ್ಕೆ ಪೊಲೀಸರು ಮಾಹಿತಿ ನೀಡಿದ್ದು, ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ

Leave a Reply

Your email address will not be published. Required fields are marked *

error: Content is protected !!