ಉದಯವಾಹಿನಿ, ಮುಂಬೈ(ಮಹಾರಾಷ್ಟ್ರ): ರೇಮಂಡ್ ಗ್ರೂಪ್‌ನ ಮಾಜಿ ಅಧ್ಯಕ್ಷರು, ಪದ್ಮಭೂಷಣ ಪ್ರಶಸ್ತಿ ಪುರಸ್ಕೃತ ವಿಜಯಪತ್ ಸಿಂಘಾನಿಯಾ(87) ಅವರು ಶನಿವಾರ ಸಂಜೆ ಇಲ್ಲಿ ನಿಧನ ಹೊಂದಿದ್ದಾರೆ.
ಮಗ, ಸಮೂಹದ ಹಾಲಿ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ(ಎಂ.ಡಿ) ಗೌತಮ್ ಸಿಂಘಾನಿಯಾ ಅವರು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ನಿಧನ ವಾರ್ತೆಯನ್ನು ತಿಳಿಸಿದ್ದಾರೆ.
“ಸಿಂಘಾನಿಯಾ ಮುಂಬೈನಲ್ಲಿ ನಿಧನರಾದರು. ಪಾರ್ಥಿವ ಶರೀರದ ಅಂತ್ಯಕ್ರಿಯೆ ಭಾನುವಾರ ನಡೆಯಲಿದೆ” ಎಂದು ರೇಮಂಡ್ ಗ್ರೂಪ್ ವಕ್ತಾರರು ಹೇಳಿದ್ದಾರೆ.
ಉದ್ಯಮಿ ಮಾತ್ರವಲ್ಲ ಸಾಹಸಿ: ವಿಜಯಪತ್ ಸಿಂಘಾನಿಯಾ ಓರ್ವ ಉತ್ಸಾಹಿ ಪೈಲಟ್ ಕೂಡಾ ಆಗಿದ್ದವರು. ಬಿಸಿ ಗಾಳಿಯ ಬಲೂನ್‌ನಲ್ಲಿ ಅತಿ ಎತ್ತರಕ್ಕೇರಿದ ವಿಶ್ವ ದಾಖಲೆಯನ್ನೂ ಇವರು ಹೊಂದಿದ್ದರು.
2000ರವರೆಗೆ ಎರಡು ದಶಕಗಳ ಕಾಲ ರೇಮಂಡ್ ಗ್ರೂಪ್‌ನ ಅಧ್ಯಕ್ಷರಾಗಿ ಸಂಸ್ಥೆಯನ್ನು ಮುನ್ನಡೆಸಿದ ಇವರು ತರುವಾಯ ಸಂಸ್ಥೆಯ ನಿಯಂತ್ರಣವನ್ನು ಪುತ್ರ ಗೌತಮ್‌ಗೆ ಹಸ್ತಾಂತರಿಸಿದ್ದರು. ಅಷ್ಟೇ ಅಲ್ಲದೇ, ಕಂಪನಿಯ ತಮ್ಮ ಪೂರ್ಣ ಶೇ.37 ಪಾಲನ್ನು ಮಗನಿಗೆ ವರ್ಗಾಯಿಸಿದ್ದರು.
ಅಪ್ಪ-ಮಗನ ನಡುವಿನ ವ್ಯಾಜ್ಯ: ವಿಜಯಪತ್ ಸಿಂಘಾನಿಯಾ ಮತ್ತು ಮಗನ ನಡುವಿನ ಕಾನೂನು ವ್ಯಾಜ್ಯ ಕೆಲವು ವರ್ಷಗಳ ಹಿಂದೆ ಭಾರಿ ಸುದ್ದಿಯಾಗಿತ್ತು. ತದ ನಂತರದಲ್ಲಿ ಸಮಸ್ಯೆಗಳು ಇತ್ಯರ್ಥವಾಗಿದ್ದವು.
