ಉದಯವಾಹಿನಿ, ವಿಶಾಖಪಟ್ಟಣ (ಆಂಧ್ರ ಪ್ರದೇಶ): ಕಳೆದ ಒಂದು ತಿಂಗಳಿನಿಂದ ಅಮೆರಿಕ – ಇಸ್ರೇಲ್-ಇರಾನ್ ಯುದ್ಧ ತೀವ್ರಗೊಂಡಿರುವುದಿರಂದ ಎಲ್ಲೆಡೆ ಅಡುಗೆ ಅನಿಲ ಕೊರತೆ ಉಂಟಾಗಿದೆ. ಗೃಹ ಬಳಕೆಯ ಸಿಲಿಂಡರ್ ದೊರೆಯುತ್ತಿದ್ದರೆ, ವಾಣಿಜ್ಯ ಸಿಲಿಂಡರ್ಗಳ ಕೊರತೆ ಎದ್ದು ಕಾಣುತ್ತಿದೆ. ಕೆಲವೆಡೆ ಅಕ್ರಮವಾಗಿ ಹೆಚ್ಚೆಚ್ಚು ಹಣ ಕೊಟ್ಟು ಖರೀದಿಸುತ್ತಿರುವ ಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
ಪಶ್ಚಿಮ ಏಷ್ಯಾದ ಈ ಯುದ್ಧದ ಬಿಕ್ಕಟ್ಟು ಭಾರತೀಯರ ಮೇಲೂ ಪರಿಣಾಮ ಬೀರಿದೆ. ಈ ಮಧ್ಯೆ ಸಿಲಿಂಡರ್ ಪೂರೈಸುವ ವ್ಯಕ್ತಿಯೋರ್ವ 30 ಎಲ್ಪಿಜಿ ಸಿಲಿಂಡರ್ಗಳೊಂದಿಗೆ ಪರಾರಿ ಆಗಿರುವ ವಿಚಿತ್ರ ಘಟನೆ ಆಂಧ್ರಪ್ರದೇಶದಲ್ಲಿ ಶನಿವಾರ ಬೆಳಕಿಗೆ ಬಂದಿದೆ. ಆರೋಪಿ ವಿರುದ್ಧ ಪ್ರಕರಣ ದಾಖಲಾಗಿದ್ದು, ಪೊಲೀಸರು ಆತನ ಪತ್ತೆಗೆ ತನಿಖೆ ಕೈಗೊಂಡಿದ್ದಾರೆ.
ಗಜುವಾಕ ಪೊಲೀಸರಿಗೆ ಬಂದಿರುವ ದೂರಿನ ಪ್ರಕಾರ, ಚಿನಗಂಟ್ಯಾಡದಲ್ಲಿರುವ ಮಣಿಕಂಠ ಗ್ಯಾಸ್ ಎಜನ್ಸಿಯಲ್ಲಿ ಈ ಘಟನೆ ನಡೆದಿದೆ. ಸರ್ಕಲ್ ಇನ್ಸ್‌ಪೆಕ್ಟರ್ ಅಲಹರಿ ಪಾರ್ಥಸಾರಥಿ ಅವರ ಪ್ರಕಾರ, ವೈ. ಅಪ್ಪಾ ರಾವ್ ಎಂಬ ವ್ಯಕ್ತಿ ಕಳೆದ ಎರಡು ವರ್ಷಗಳಿಂದ ಎಜನ್ಸಿಯಲ್ಲಿ ಗ್ಯಾಸ್ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದರು. ಗ್ರಾಹಕರೊಂದಿಗೆ ತಾನು ಬೆಳೆಸಿಕೊಂಡ ನಂಬಿಕೆಯನ್ನೇ ಬಂಡವಾಳವಾಗಿಸಿಕೊಂಡ ಈತ ಗ್ಯಾಸ್ ಸಿಲಿಂಡರ್‌ಗಳನ್ನು ತಲುಪಿಸುವ ನೆಪದಲ್ಲಿ ಅವರಿಂದ ಒಟಿಪಿಗಳನ್ನು (ಒನ್-ಟೈಮ್ ಪಾಸ್‌ವರ್ಡ್) ಸಂಗ್ರಹಿಸಿದ್ದಾರೆ ಎಂದು ವರದಿಯಾಗಿದೆ. ಒಟಿಪಿಗಳನ್ನು ಪಡೆದಿದ್ದರೂ, ತುಂಬಿದ ಸಿಲಿಂಡರ್‌ಗಳನ್ನು ಹಲವಾರು ಗ್ರಾಹಕರಿಗೆ ತಲುಪಿಸಿಲ್ಲ. ಒಟಿಪಿಗಳನ್ನು ಹಂಚಿಕೊಂಡ ನಂತರವೂ ಗ್ರಾಹಕರು ತಮ್ಮ ಸಿಲಿಂಡರ್‌ಗಳನ್ನು ಸ್ವೀಕರಿಸದಿದ್ದಾಗ, ಅವರು ಅನುಮಾನಾಸ್ಪದರಾಗಿ ವಿಚಾರಿಸಲು ಗ್ಯಾಸ್ ಎಜನ್ಸಿಯನ್ನು ಸಂಪರ್ಕಿಸಿದ್ದರು. ಎಜನ್ಸಿ ಸಿಬ್ಬಂದಿ ತಮ್ಮ ದಾಖಲೆಗಳ ಪ್ರಕಾರ, ಸಿಲಿಂಡರ್‌ಗಳನ್ನು ಈಗಾಗಲೇ ತಲುಪಿಸಲಾಗಿದೆ ಎಂದು ಗ್ರಾಹಕರಿಗೆ ತಿಳಿಸಿದರು. ಈ ವಿಚಾರ ಗ್ರಾಹಕರನ್ನು ಆಘಾತ ಮತ್ತು ಗೊಂದಲಕ್ಕೆ ದೂಡಿತು.
