ಉದಯವಾಹಿನಿ, ಜೋಧಪುರ (ರಾಜಸ್ಥಾನ): ಪೊಲೀಸ್ ಅಧಿಕಾರಿಗಳಿಗೆ ದರ್ಪ ಜಾಸ್ತಿ. ಏನೇ ಮಾಡಿದರೂ ಕೊಬ್ಬಿನಿಂದ ನಡೆದುಕೊಳ್ಳುತ್ತಾರೆ. ಅವರಿಗಿಂತ ಕಿರಿಯರನ್ನು ಕನಿಷ್ಠವಾಗಿ ಕಾಣುತ್ತಾರೆ ಎಂಬೆಲ್ಲ ಆರೋಪಗಳು ಕೇಳಿಬರುತ್ತಿರುತ್ತವೆ. ಖಾಕಿ ಬಟ್ಟೆ ಧರಿಸಿದ ತಕ್ಷಣ ದೌಲತ್ತು ತಾನಾಗಿಯೇ ಬರುತ್ತದೆ ಎಂಬುದೂ ವಾದದ ಸರಣಿ.
ಆದರೆ, ಇಲ್ಲೊಬ್ಬ ಅಧಿಕಾರಿ ಅಧಿಕಾರ ಸ್ವೀಕಾರ ವೇಳೆ ನಡೆದುಕೊಂಡ ರೀತಿ ಮೆಚ್ಚುಗೆಗೆ ಕಾರಣವಾಗಿದೆ. ಅವರ ಸರಳ ನಡೆಯು ಮಾದರಿಯಾಗಿದೆ. ಪೊಲೀಸ್ ಅಧಿಕಾರಿಯೊಬ್ಬರು ಇಷ್ಟು ಸರಳವಾಗಿ ನಡೆದುಕೊಳ್ಳುತ್ತಾರಾ ಎಂಬ ಪ್ರಶ್ನೆಯನ್ನೂ ಮೂಡಿಸುತ್ತದೆ. ರಾಜಸ್ಥಾನದ ಜೋಧಪುರ ಗ್ರಾಮೀಣ ಠಾಣೆಗೆ ಪೊಲೀಸ್ ವರಿಷ್ಠಾಧಿಕಾರಿಯಾಗಿ (ಎಸ್ಪಿ) ನೇಮಿತವಾಗಿರುವ ಪಿ.ಡಿ. ನಿತ್ಯಾ ಅವರೇ ಸರಳತೆ ಮೆರೆದ ಅಧಿಕಾರಿ. ಅವರು ಇತ್ತೀಚೆಗೆ ಠಾಣೆಯ ಚಾರ್ಚ್ ತೆಗೆದುಕೊಂಡರು. ಕಚೇರಿಗೆ ಮೊದಲ ಬಾರಿಗೆ ಆಗಮನ ಮತ್ತು ಅಧಿಕಾರ ಸ್ವೀಕಾರಕ್ಕಾಗಿ ಅಲ್ಲಿನ ಸಿಬ್ಬಂದಿ ಅವರನ್ನು ಬರಮಾಡಿಕೊಳ್ಳಲು ಭರ್ಜರಿ ಸಿದ್ಧತೆ ನಡೆಸಿದ್ದರು. ಅದರಂತೆ, ಠಾಣೆಯ ಮುಂದೆ ರೆಡ್ ಕಾರ್ಪೆಟ್ ಹಾಕಿದ್ದರು. ಜೊತೆಗೆ ಗಾರ್ಡ್ ಆಫ್ ಆನರ್ ನೀಡಲು ಪೊಲೀಸ್ ಕಾನ್ಸ್ಟೇಬಲ್ಸ್ ಸಜ್ಜಾಗಿದ್ದರು.
ರೆಡ್ ಕಾರ್ಪೆಟ್ ತುಳಿಯದ ಅಧಿಕಾರಿಣಿ: ಠಾಣೆಯ ಮುಂದೆ ತಮ್ಮ ವಾಹನದಲ್ಲಿ ಬಂದಿಳಿದ ಎಸ್ಪಿ ನಿತ್ಯಾ ಅವರು ರೆಡ್ ಕಾರ್ಪೆಟ್ ಅನ್ನು ತುಳಿಯದೇ, ಪಕ್ಕದಲ್ಲಿ ನಡೆದು ಹೋದರು. ಬಳಿಕ, ಗಾರ್ಡ್ ಆಫ್ ಆನರ್ ನೀಡುವ ಸ್ಥಳದಲ್ಲಿ ಇಟ್ಟಿದ್ದ ಎತ್ತರದ ಫಲಕವನ್ನು ಪಕ್ಕಕ್ಕೆ ತಳ್ಳಿ ನೆಲದ ಮೇಲೆಯೇ ನಿಂತು ಗೌರವ ವಂದನೆ ಸ್ವೀಕರಿಸಿದರು. ಇದು ಅಲ್ಲಿದ್ದವರನ್ನು ಆಶ್ಚರ್ಯಚಕಿತರನ್ನಾಗಿ ಮಾಡಿತು. ಅಧಿಕಾರಿಣಿಯ ಸರಳತೆಯ ವಿಡಿಯೋ ಇದೀಗ ಸಾಮಾಜಿಕ ಮಾಧ್ಯಮಗಳಲ್ಲಿ ಧೂಳೆಬ್ಬಿಸುತ್ತಿದೆ. ಇದಲ್ವಾ ನಿಜವಾದ ‘ಪೊಲೀಸ್ಗಿರಿ’ ಎಂದು ನೆಟ್ಟಿಗರು ಉದ್ಗರಿಸುತ್ತಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ಎಸ್ಪಿ ನಿತ್ಯಾ ಅವರು, “ನಾನು ಸಾಮಾನ್ಯ ಅಧಿಕಾರಿಯಾಗಿ ನಿಯಮಿತವಾಗಿ ಪೊಲೀಸ್ ಠಾಣೆಗೆ ಭೇಟಿ ನೀಡಿದೆ. ರೆಡ್ ಕಾರ್ಪೆಟ್ ಹಾಸು, ವಿಶೇಷ ವಂದನಾ ಸ್ವೀಕಾರ ಸ್ಥಳದ ವ್ಯವಸ್ಥೆ ಬೇಕಾಗಿರಲಿಲ್ಲ. ಅಲ್ಲಿ ನಾನು ಮಾಡಿದ್ದು ಸಾಮಾನ್ಯ ಸಂಗತಿಯಾಗಿತ್ತು. ಅದರಲ್ಲಿ ವಿಶೇಷತೆ ಏನಿಲ್ಲ ಎಂಬುದು ನನ್ನ ಭಾವನೆ. ಈ ಮೂಲಕ ನಾನು ಏನೋ ಸಂದೇಶ ನೀಡಬೇಕು ಎಂಬುದೂ ನನ್ನ ಉದ್ದೇಶವಾಗಿರಲಿಲ್ಲ ಎಂದು ಅವರು ತಿಳಿಸಿದ್ದಾರೆ.
