ಉದಯವಾಹಿನಿ, ಶಿವಮೊಗ್ಗ: ಭದ್ರಾವತಿಯ ಕಾಗೇಹಳ್ಳದ ಬಳಿ ಖಾಸಗಿ ಬಸ್ಸೊಂದು ಚಾಲಕನ ನಿಯಂತ್ರಣ ತಪ್ಪಿ ಸೇತುವೆಯಿಂದ ಕೆಳಗೆ ಬಿದ್ದಿದೆ. ಈ ಅಪಘಾತದಲ್ಲಿ ಮೂವರು ಪ್ರಯಾಣಿಕರ ಕೈ, ಕಾಲು ಮುರಿದಿದ್ದು, ಉಳಿದವರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ತಿಳಿದು ಬಂದಿದೆ.
ದಾವಣಗೆರೆಯಿಂದ ಭದ್ರಾವತಿಗೆ ಬಸ್ ಬರುತ್ತಿತ್ತು. ಕಾಗೇಹಳ್ಳದ ಬಳಿ ಬಸ್ ಚಾಲಕನ ನಿಯಂತ್ರಣ ತಪ್ಪಿ ಸೇತುವೆಯಿಂದ ಹಳ್ಳಕ್ಕೆ ಬಿದ್ದಿದೆ. ಇಂದು (ಮಾ.30) ಮಧ್ಯಾಹ್ನ ಸುಮಾರು 12:30ರ ಸುಮಾರಿಗೆ ಈ ಅಪಘಾತ ಸಂಭವಿಸಿದೆ. ಚಾಲಕ, ಕಂಡಕ್ಟರ್ ಸೇರಿ ಒಟ್ಟು 35 ಜನ ಪ್ರಯಾಣಿಕರು ಬಸ್ ನಲ್ಲಿ ಇದ್ದರು. ಇದರಲ್ಲಿ ಮೂವರಿಗೆ ಕೈ ಮತ್ತು ಕಾಲುಗಳು ಮುರಿದಿದೆ. ಉಳಿದವರೆಗೆ ಸಣ್ಣಪುಟ್ಟ ಗಾಯಗಳಾಗಿವೆ. ಗಾಯಾಳುಗಳಿಗೆ ಭದ್ರಾವತಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಭದ್ರಾವತಿ ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಚಾಲಕನ ಅತಿ ವೇಗವೇ ಈ ಅಪಘಾತಕ್ಕೆ ಕಾರಣ ಎನ್ನಲಾಗಿದೆ.
