ಉದಯವಾಹಿನಿ, ಕಾಬೂಲ್: ಅಫ್ಘಾನಿಸ್ತಾನದ ಕೆಲವು ಭಾಗಗಳಲ್ಲಿ ಕಳೆದ 24 ಗಂಟೆಗಳಲ್ಲಿ ತೀವ್ರ ಪ್ರವಾಹ, ಭೂಕುಸಿತ ಮತ್ತು ಗುಡುಗು ಸಹಿತ ಮಳೆಯಿಂದಾಗಿ 17 ಜನರು ಸಾವನ್ನಪ್ಪಿದ್ದರೆ, 26 ಜನರು ಗಾಯಗೊಂಡಿದ್ದಾರೆ. ಹೆಚ್ಚಿನ ಮಳೆಯಾಗುವ ಮುನ್ಸೂಚನೆ ಇದೆ ಎಂದು ಅಲ್ಲಿನ ಹವಾಮಾನ ಇಲಾಖೆ ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ. ಈ ಋತುವಿನಲ್ಲಿ ದೇಶದಲ್ಲಿ ಹವಾಮಾನ ವೈಪರೀತ್ಯದಿಂದ ಉಂಟಾದ ಇತ್ತೀಚಿಗೆ ಸಂಭವಿಸಿದ ಸಾವುನೋವುಗಳ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.
ಅಫ್ಘಾನ್​ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಿಬ್ಬಂದಿ ಮಳೆ ಪೀಡಿತ ಪ್ರದೇಶಗಳ ಸಮೀಕ್ಷೆ ನಡೆಸುತ್ತಿರುವುದರಿಂದ ಸಾವುನೋವುಗಳ ಸಂಖ್ಯೆ ಹೆಚ್ಚಾಗಬಹುದು ಎಂದು ಪ್ರಾಧಿಕಾರದ ವಕ್ತಾರ ಯೂಸುಫ್ ಹಮ್ಮದ್ ತಿಳಿಸಿದ್ದಾರೆ. ಅಫ್ಘಾನಿಸ್ತಾನದ 34 ರಾಜ್ಯಗಳಲ್ಲಿ ಹೆಚ್ಚಾಗಿ ದೇಶದ ಪಶ್ಚಿಮ, ಮಧ್ಯ ಮತ್ತು ವಾಯವ್ಯ ಭಾಗಗಳಲ್ಲಿ ಮಳೆ ಪರಿಣಾಮ ಬೀರಿದೆ.

ತೀವ್ರ ಹವಾಮಾನದಿಂದಾಗಿ 147 ಮನೆಗಳು ಸಂಪೂರ್ಣವಾಗಿ ಅಥವಾ ಭಾಗಶಃ ಹಾಳಾಗಿವೆ. 80 ಕಿಲೋಮೀಟರ್ ರಸ್ತೆಗಳಿಗೆ ಹಾನಿಯಾಗಿವೆ. ಕೃಷಿ ಭೂಮಿ ಮತ್ತು ನೀರಾವರಿ ಕಾಲುವೆಗಳು ಹಾಳಾಗಿವೆ. ಎಲ್ಲಾ ವ್ಯಾಪಾರ – ವ್ಯವಹಾರಗಳಿಗೂ ತೊಂದರೆ ಆಗಿದೆ ಎಂದು ಹಮ್ಮದ್ ಹೇಳಿದರು. ಒಟ್ಟಾರೆಯಾಗಿ, 530 ಕುಟುಂಬಗಳು ಪರಿಣಾಮ ಬೀರಿವೆ ಎಂದು ಅವರು ಹೇಳಿದರು.

ಸೋಮವಾರ ದೇಶದ ಪೂರ್ವ ಮತ್ತು ಮಧ್ಯ ಭಾಗಗಳ ಮೇಲೆ ಭಾರಿ ಮಳೆಯಾಗುವ ಮುನ್ಸೂಚನೆ ನೀಡಲಾಗಿದ್ದು, ಆ ಪ್ರದೇಶಗಳಲ್ಲಿಯೂ ಪ್ರವಾಹ ಉಂಟಾಗುವ ಸಾಧ್ಯತೆ ಇದೆ ಎಂದು ಹಮ್ಮದ್ ಎಚ್ಚರಿಸಿದ್ದಾರೆ. ನದಿ ದಡಗಳು ಮತ್ತು ಪ್ರವಾಹದ ಅಪಾಯವಿರುವ ಪ್ರದೇಶಗಳಿಂದ ದೂರ ಇರುವಂತೆ ವಿಪತ್ತು ನಿರ್ವಹಣಾ ಪ್ರಾಧಿಕಾರವು ಅಲ್ಲಿನ ನಿವಾಸಿಗಳಿಗೆ ಅತ್ತ ತೆರಳದಂತೆ ಮುನ್ನೆಚ್ಚರಿಕೆ ನೀಡಿದೆ ಮತ್ತು ಅವರಿಗೆ ಸಹಾಯವನ್ನು ಒದಗಿಸಲು ಸಿದ್ಧರಾಗಿರುವಂತೆ ಸ್ಥಳೀಯ ಅಧಿಕಾರಿಗಳಿಗೆ ಆದೇಶಿಸಿದೆ. ಈ ವರ್ಷದ ಆರಂಭದಲ್ಲಿ, ಭಾರಿ ಹಿಮಪಾತ ಮತ್ತು ಹಠಾತ್ ಪ್ರವಾಹಗಳು ದೇಶಾದ್ಯಂತ ಡಜನ್​ಗಟ್ಟಲೇ ಜನರ ಸಾವಿಗೆ ಕಾರಣವಾದವು. ಅಫ್ಘಾನಿಸ್ತಾನವು ತೀವ್ರ ಹವಾಮಾನ ವೈಪರೀತ್ಯಗಳಿಗೆ ಹೆಚ್ಚು ಗುರಿಯಾಗುತ್ತದೆ, ಹಿಮ ಮತ್ತು ಭಾರಿ ಮಳೆಯು ಹಠಾತ್ ಪ್ರವಾಹವನ್ನು ಉಂಟುಮಾಡುತ್ತದೆ, ಆಗಾಗ್ಗೆ ಏಕಕಾಲದಲ್ಲಿ ನೂರಾರು ಜನರು ಸಾವನ್ನಪ್ಪುವ ಘಟನೆಗಳು ನಡೆಯುತ್ತವೆ. 2024 ರಲ್ಲಿ, ಹಠಾತ್ ಪ್ರವಾಹದಿಂದ 300ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದರು.

ದಶಕಗಳ ಸಂಘರ್ಷ, ಕಳಪೆ ಮೂಲಸೌಕರ್ಯ, ಹೆಣಗಾಡುತ್ತಿರುವ ಆರ್ಥಿಕತೆ, ಅರಣ್ಯನಾಶ ಮತ್ತು ಹವಾಮಾನ ಬದಲಾವಣೆಯಿಂದ ತೀವ್ರಗೊಳ್ಳುತ್ತಿರುವ ಪರಿಣಾಮಗಳು ವಿಪತ್ತು ಸಮಸ್ಯೆಯನ್ನು ಹೆಚ್ಚಿಸಿವೆ, ವಿಶೇಷವಾಗಿ ದೂರದ ಪ್ರದೇಶಗಳಲ್ಲಿ ಅನೇಕ ಮನೆಗಳು ಮಣ್ಣಿನಿಂದ ನಿರ್ಮಿಸಲ್ಪಟ್ಟಿರುವುದರಿಂದ ಹಠಾತ್ ಪ್ರವಾಹ ಅಥವಾ ಭಾರಿ ಹಿಮಪಾತದಿಂದ ಸೀಮಿತ ರಕ್ಷಣೆಯನ್ನು ಮಾತ್ರ ಒದಗಿಸುತ್ತವೆ.

Leave a Reply

Your email address will not be published. Required fields are marked *

error: Content is protected !!