ಉದಯವಾಹಿನಿ, ಸೇಂಟ್‌ ಪೌಲ್‌: ಇರಾನ್ ಮೇಲಿನ ಯುದ್ಧ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಕ್ರಮಗಳನ್ನು ವಿರೋಧಿಸಿ ಅಮೆರಿಕ ಹಾಗೂ ಯುರೋಪಿನ ಹಲವೆಡೆ ಜನರು ಶನಿವಾರ ಬೃಹತ್ ಪ್ರತಿಭಟನೆಗಳನ್ನು ಆಯೋಜಿಸಿ, ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಟ್ರಂಪ್‌ ಅವರ ವಲಸೆ ನೀತಿಗಳನ್ನು ಖಂಡಿಸಿ ಮಿನ್ನೆಸೋಟದಲ್ಲಿ ಬೃಹತ್‌ ಪ್ರತಿಭಟನಾ ರ‍್ಯಾಲಿ ನಡೆದಿದ್ದು, ಸಹಸ್ರ ಸಂಖ್ಯೆಯಲ್ಲಿ ಜನರು ಭಾಗಿಯಾಗಿ ಬೆಂಬಲ ನೀಡಿದ್ದಾರೆ. ಅಮೆರಿಕದ ಖ್ಯಾತ ಗಾಯಕ ಬ್ರ್ಯೂಸ್‌ ಸ್ಪ್ರಿಂಗ್‌ಸ್ಟಿನ್ ಕೂಡ ಪ್ರತಿಭಟನಯಲ್ಲಿ ಭಾಗವಹಿಸುವ ಮೂಲಕ ಬೆಂಬಲ ವ್ಯಕ್ತಪಡಿಸಿದ್ದಾರೆ.
ನ್ಯೂಯಾರ್ಕ್​ನಲ್ಲಿ ಲಕ್ಷ ಲಕ್ಷ ಮಂದಿ ಭಾಗಿ: ನ್ಯೂಯಾರ್ಕ್‌ ನಗರದಿಂದ ನಡೆದ ಪ್ರತಿಭಟನೆಯಲ್ಲಿ ಸುಮಾರು 85 ಲಕ್ಷ ಮಂದಿ ಪಾಲ್ಗೊಂಡಿದ್ದರು ಎಂದು ತಿಳಿದುಬಂದಿದೆ. ಈ ಮೂಲಕ ಟ್ರಂಪ್ ನೀತಿಗಳ ವಿರುದ್ಧ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

ಅಮೆರಿಕದ 50 ರಾಜ್ಯಗಳಲ್ಲೂ ಪ್ರತಿಭಟನೆ: ಅಮೆರಿಕದ 50 ರಾಜ್ಯಗಳಲ್ಲೂ ಪ್ರತಿಭಟನಾ ರ‍್ಯಾಲಿ ನಡೆದಿವೆ. ಟ್ರಂಪ್ ವಿರುದ್ಧ ನೋ ಕಿಂಗ್ಸ್‌ ಹೆಸರಲ್ಲಿ ಒಟ್ಟು 3,100 ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೇವೆ ಎಂದು ಆಯೋಜಕರು ಮಾಹಿತಿ ನೀಡಿದ್ದಾರೆ. ಹಾಗೆಯೇ ಈ ಮೊದಲು ಜೂನ್‌ನಲ್ಲಿ ನಡೆದ ಪ್ರತಿಭಟನೆಯಲ್ಲಿ 50 ಲಕ್ಷ ಜನ, ಅಕ್ಟೋಬರ್‌ನಲ್ಲಿ ನಡೆದ ರ‍್ಯಾಲಿಯಲ್ಲಿ 70 ಲಕ್ಷ ಜನರು ಭಾಗಿಯಾಗಿದ್ದರು ಎಂದು ಆಯೋಜಕರು ತಿಳಿಸಿದ್ದಾರೆ.

ಯುರೋಪ್​ನಲ್ಲೂ ಪ್ರತಿಭಟನೆ: ಟ್ರಂಪ್ ವಿರುದ್ಧ ಅಮೆರಿಕ ಅಷ್ಟೇ ಅಲ್ಲ ಯುರೋಪ್ ನಲ್ಲೂ ಆಕ್ರೋಶ ವ್ಯಕ್ತವಾಗಿದೆ. ಲ್ಯಾಟಿನ್‌ ಅಮೆರಿಕ, ಆಸ್ಟ್ರೇಲಿಯಾ ಸೇರಿದಂತೆ 12ಕ್ಕೂ ಹೆಚ್ಚು ದೇಶಗಳಲ್ಲಿ ನೋ ಕಿಂಗ್ಸ್‌ ರ‍್ಯಾಲಿ ನಡೆಸಿದ್ದೇವೆ ಎಂದು ಆಯೋಜಕರು ಹೇಳಿದ್ದಾರೆ.ಆರ್ಮ್‌ಸ್ಟರ್‌ಡಮ್, ಮ್ಯಾಡ್ರಿಡ್, ರೋಮ್ ಸೇರಿದಂತೆ ಯುರೋಪಿನ ಹಲವು ನಗರಗಳಲ್ಲಿ ಟ್ರಂಪ್ ವಿರುದ್ಧ ಶನಿವಾರ ಪ್ರತಿಭಟನೆಗಳ ನಡೆದಿವೆ. ಈ ಪ್ರತಿಭಟನೆಗಳಿಗೆ ಭಾರೀ ಪೊಲೀಸ್ ಭದ್ರತೆ ಕೂಡ ನೀಡಲಾಗಿತ್ತು. ಟ್ರಂಪ್ ಅವರ 79ನೇ ಹುಟ್ಟುಹಬ್ಬದ ವೇಳೆ ಕಳೆದ ಜೂನ್‌ನಲ್ಲಿ ನೊ ಕಿಂಗ್ಸ್ ಹೆಸರಲ್ಲಿ ಮೊದಲ ಬಾರಿಗೆ ಪ್ರತಿಭಟನೆ ಕೈಗೊಳ್ಳಲಾಗಿತ್ತು. ಆ ವೇಳೆ ನ್ಯೂಯಾರ್ಕ್‌ನಿಂದ ಸ್ಯಾನ್ ಫ್ರಾನ್ಸಿಸ್ಕೊವರೆಗೆ ಹಲವರು ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *

error: Content is protected !!