ಉದಯವಾಹಿನಿ,  ಈಜಿಪ್ಟ್​ ವಿದೇಶಾಂಗ ಸಚಿವ ಬದ್ರ್ ಅಬ್ದೆಲಟ್ಟಿ ಅವರನ್ನು ಸ್ವಾಗತಿಸುವಾಗ ಪಾಕಿಸ್ತಾನದ ಉಪ ಪ್ರಧಾನಿ ಹಾಗೂ ವಿದೇಶಾಂಗ ಸಚಿವರೂ ಆಗಿರುವ ಇಶಾಕ್ ದಾರ್ ಕಾಲು ಜಾರಿ ಬಿದ್ದ ಘಟನೆ ಇಂದು ನಡೆದಿದೆ. ಇಸ್ಲಾಮಾಬಾದ್‌ನ ವಿದೇಶಾಂಗ ಸಚಿವಾಲಯದಲ್ಲಿ ದಾರ್ ಅವರು ಗಣ್ಯರನ್ನು ಸ್ವಾಗತಿಸಲು ಮುಂದಾದರು. ಈಜಿಪ್ಟ್​​ ವಿದೇಶಾಂಗ ಸಚಿವರ ಜೊತೆ ನಡೆದು ಹೋಗುತ್ತಿರುವಾಗ ಅಚಾನಕ್ಕಾಗಿ ಕಾಲು ಜಾರಿ ಬೀಳುತ್ತಾರೆ. ಇದರ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್​ ಆಗಿದೆ.

ಶಿಷ್ಟಾಚಾರ ಪಾಲನೆಯ ವೇಳೆ ನಡೆದ ಈ ಘಟನೆಯಿಂದ ಅಲ್ಲಿದ್ದವರೂ ಅರೆಕ್ಷಣ ಅಚ್ಚರಿಪಟ್ಟರು. ಭದ್ರತಾ ಸಿಬ್ಬಂದಿ ಮತ್ತು ಇತರರು ತಕ್ಷಣವೇ ದಾರ್ ಅವರ ಬಳಿಗೆ ತೆರಳಿ ಅವರನ್ನು ಮೇಲಕ್ಕೆ ಎತ್ತಿಕೊಂಡರು. ಪಾಕ್​ನಲ್ಲಿ ಈಜಿಪ್ಟ್​, ಸೌದಿ, ಟರ್ಕಿ ಸಚಿವರು: ಪಶ್ಚಿಮ ಏಷ್ಯಾದಲ್ಲಿನ ಬೆಳವಣಿಗೆಗಳ ಕುರಿತು ಚರ್ಚಿಸಲು ಸೌದಿ, ಈಜಿಪ್ಟ್​ ಮತ್ತು ಟರ್ಕಿಯ ವಿದೇಶಾಂಗ ಸಚಿವರು ಪಾಕಿಸ್ತಾನದಲ್ಲಿದ್ದಾರೆ. ಇಸ್ರೇಲ್​ ಮತ್ತು ಅಮೆರಿಕ ವಿರುದ್ಧದ ಸಂಘರ್ಷದಲ್ಲಿ ಯುಎಸ್​ ನೀಡಿರುವ 15 ಅಂಶಗಳ ಶಾಂತಿ ಯೋಜನೆಯನ್ನು ಇರಾನ್​ ತಿರಸ್ಕರಿಸಿದೆ. ಇದರಿಂದ, ಕದನ ವಿರಾಮ ಪ್ರಸ್ತಾಪವನ್ನು ಮತ್ತಷ್ಟು ದೂರಕ್ಕೆ ತಳ್ಳಿದಂತಾಗಿದೆ.
ಪಾಕಿಸ್ತಾನದ ಮಧ್ಯಸ್ತಿಕೆಯಲ್ಲಿ ಯುದ್ಧ ನಿಲುಗಡೆ ಯತ್ನ ಸಾಗುತ್ತಿದೆ ಎಂಬ ಮಾತುಗಳ ನಡುವೆ ಮೂರು ರಾಷ್ಟ್ರಗಳ ವಿದೇಶಾಂಗ ಸಚಿವರು ಪಾಕಿಸ್ತಾನಕ್ಕೆ ಆಗಮಿಸಿರುವುದು ಮಹತ್ವ ಪಡೆದುಕೊಂಡಿದೆ. ಆದರೆ, ಪಾಕ್​ ಮಧ್ಯಸ್ತಿಕೆ ವಹಿಸುತ್ತಿದೆ ಎಂಬುದನ್ನು ಅಮೆರಿಕ ನಿರಾಕರಿಸಿದೆ. ಈ ನಡುವೆ ಪಾಕಿಸ್ತಾನ ವಿದೇಶಾಂಗ ಸಚಿವಾಲಯ ತನ್ನ ಎಕ್ಸ್ ​ಖಾತೆಯಲ್ಲಿ ಪೋಸ್ಟೊಂದನ್ನು ಹಂಚಿಕೊಂಡಿದೆ. “ಪಾಕಿಸ್ತಾನ-ಈಜಿಪ್ಟ್ ದ್ವಿಪಕ್ಷೀಯ ಸಂಬಂಧಗಳ ಕುರಿತು ಉತ್ಪಾದಕ ಚರ್ಚೆಗಳನ್ನು ನಡೆಸಲಾಯಿತು. ಎರಡೂ ರಾಷ್ಟ್ರಗಳ ನಡುವಿನ ಸಂಬಂಧಗಳನ್ನು ಮತ್ತಷ್ಟು ಬಲಪಡಿಸಲು, ಆರ್ಥಿಕ ಸಹಕಾರವನ್ನು ಹೆಚ್ಚಿಸಲು ಮತ್ತು ಪರಸ್ಪರ ಆಸಕ್ತಿಯ ಪ್ರಾದೇಶಿಕ ಮತ್ತು ಜಾಗತಿಕ ವಿಷಯಗಳ ಕುರಿತು ಸಮನ್ವಯದಿಂದ ಸಾಗಲು ತಮ್ಮ ಬದ್ಧತೆ ತೋರಿಸಿದವು” ಎಂದು ಬರೆದುಕೊಂಡಿದೆ.

ಸೇನಾ ಮುಖ್ಯಸ್ಥನ ತಡೆದಿದ್ದ ಸಿಬ್ಬಂದಿ: ಜರ್ಮನಿಯ ಮ್ಯೂನಿಚ್​​ನಲ್ಲಿ ನಡೆದ ಭದ್ರತಾ ಸಮ್ಮೇಳನದಲ್ಲಿ ಭಾಗಿಯಾಗಲು ತೆರಳಿದ್ದ ಮುನೀರ್‌ರನ್ನು ಅಲ್ಲಿನ ಮಹಿಳಾ ಭದ್ರತಾ ಸಿಬ್ಬಂದಿ ತಡೆದು, ಐಡಿ ಕಾರ್ಡ್​ ತೋರಿಸುವಂತೆ ಸೂಚಿಸಿದ್ದಾರೆ. ಈ ಅಚಾನಕ್​ ಘಟನೆಯಿಂದ ಪಾಕಿಸ್ತಾನದ ಸೇನಾ ಮುಖ್ಯಸ್ಥ ಜಾಗತಿಕ ಮಟ್ಟದಲ್ಲಿ ಮುಜುಗರ ಎದುರಿಸುವಂತಾಗಿದೆ.ಈ ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ವೈರಲ್​ ಆಗುತ್ತಿದೆ. ಪಾಕಿಸ್ತಾನದ ಸೇನಾ ಮುಖ್ಯಸ್ಥ ವಿಶ್ವ ವೇದಿಕೆಗಳಲ್ಲಿ ಅಪರಿಚಿತ ವ್ಯಕ್ತಿ ಎಂದು ಕಾಲೆಳೆಯಲಾಗುತ್ತಿದೆ. ಇದೇ ವಿಷಯವಾಗಿ ಟ್ರೋಲ್ ಕೂಡ​ ಮಾಡಲಾಗುತ್ತಿದೆ.

Leave a Reply

Your email address will not be published. Required fields are marked *

error: Content is protected !!