ಉದಯವಾಹಿನಿ,  ಕುವೈತ್: ಕುವೈತ್‌ನ ವಿದ್ಯುತ್ ಉತ್ಪಾದನೆ ಮತ್ತು ನೀರು ನಿರ್ಲವಣೀಕರಣ ಘಟಕದ ಸೇವಾ ಕಟ್ಟಡದ ಮೇಲೆ ಭಾನುವಾರ ಸಂಜೆ ಇರಾನ್ ನಡೆಸಿದ ದಾಳಿಯಲ್ಲಿ ಭಾರತೀಯ ಕಾರ್ಮಿಕನೊಬ್ಬ ಸಾವನ್ನಪ್ಪಿದ್ದಾನೆ ಎಂದು ಕುವೈತ್‌ನ ವಿದ್ಯುತ್, ನೀರು ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ ಸೋಮವಾರ ಬೆಳಗ್ಗೆ ತಿಳಿಸಿದೆ. ಸೋಮವಾರ ಬಿಡುಗಡೆ ಮಾಡಿದ ಅಧಿಕೃತ ಹೇಳಿಕೆಯಲ್ಲಿ, ಈ ದಾಳಿಯು ಕುವೈತ್ ವಿರುದ್ಧದ ಇರಾನಿನ ಆಕ್ರಮಣದ ಭಾಗವಾಗಿದೆ ಎಂದು ಸಚಿವಾಲಯ ಖಂಡಿಸಿದೆ. ದಾಳಿಯಿಂದ ಗಮನಾರ್ಹ ಹಾನಿಯನ್ನುಂಟಾಗಿದ್ದು, ಒಬ್ಬ ಕಾರ್ಮಿಕ ಸಾವಿಗೀಡಾಗಿದ್ದಾನೆ. ಇನ್ನೂ ಗುರುತು ಪತ್ತೆಯಾಗಿಲ್ಲ ಎಂದು ತಿಳಿಸಲಾಗಿದೆ.
ಸಚಿವಾಲಯದ ಅಧಿಕೃತ ವಕ್ತಾರ ಎಂಜಿನಿಯರ್ ಫಾತಿಮಾ ಅಬ್ಬಾಸ್ ಜೋಹರ್ ಹಯಾತ್, ಭಾನುವಾರ ಸಂಜೆ, ಕುವೈತ್ ರಾಜ್ಯದ ವಿರುದ್ಧ ಇರಾನಿನ ಆಕ್ರಮಣದ ಭಾಗವಾಗಿ ವಿದ್ಯುತ್ ಉತ್ಪಾದನೆ ಮತ್ತು ನೀರು ನಿರ್ಲವಣೀಕರಣ ಘಟಕಗಳೊಂದರ ಸೇವಾ ಕಟ್ಟಡದ ಮೇಲೆ ದಾಳಿ ನಡೆದಿದೆ. ಘಟನೆಯಲ್ಲಿ ಭಾರತೀಯ ಪ್ರಜೆಯಾಗಿದ್ದ ಕಾರ್ಮಿಕ ಸಾವನ್ನಪ್ಪಿದ್ದಾರೆ. ಅಲ್ಲದೆ, ಗಮನಾರ್ಹ ಹಾನಿಯನ್ನುಂಟಾಗಿದೆ ಎಂದು ತಿಳಿಸಿದ್ದಾರೆ.
ಘಟನೆ ಬೆನ್ನಲ್ಲೇ, ತುರ್ತು ತಂಡಗಳು ಮತ್ತು ತಾಂತ್ರಿಕ ಸಿಬ್ಬಂದಿ ಸ್ಥಳಕ್ಕೆ ತಕ್ಷಣ ಧಾವಿಸಿ ರಕ್ಷಣಾ ಕಾರ್ಯ ಕೈಗೊಂಡಿದ್ದಾರೆ. ಪರಿಸ್ಥಿತಿ ನಿರ್ವಹಿಸಲು ಮತ್ತು ವಿದ್ಯುತ್ ಮತ್ತು ನೀರು ಸೇವೆಗಳು ಯಾವುದೇ ಅಡೆತಡೆಯಿಲ್ಲದೆ ಮುಂದುವರೆಯಲು ಸೂಕ್ತ ತುರ್ತು ಕ್ರಮ ಆರಂಭಿಸಿದ್ದಾರೆ. ಸುರಕ್ಷಿತೆಗಾಗಿ ಸಂಬಂಧಪಟ್ಟ ಅಧಿಕಾರಿಗಳು, ಭದ್ರತಾ ಸಂಸ್ಥೆಗಳು ಮತ್ತು ಇತರ ಸಂಬಂಧಿತ ಇಲಾಖೆಗಳೊಂದಿಗೆ ನಿಕಟವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ವಕ್ತಾರರು ಹೇಳಿದ್ದಾರೆ.
ಜನರು ಶಾಂತವಾಗಿರಬೇಕು, ವದಂತಿಗಳನ್ನು ನಂಬಬಾರದು ಮತ್ತು ಮಾಹಿತಿಗಾಗಿ ಅಧಿಕೃತ ಮೂಲಗಳನ್ನು ಮಾತ್ರ ಫಾಲೋ ಮಾಡಬೇಕು. ಹೆಚ್ಚಿನ ಮಾಹಿತಿಯನ್ನು ಹಂಚಿಕೊಳ್ಳಲಾಗುವುದು ಎಂದು ಸಚಿವಾಲಯ ಹೇಳಿದೆ.
ಕುವೈತ್‌ನ ವಿದ್ಯುತ್ ಮತ್ತು ನೀರಿನ ವ್ಯವಸ್ಥೆಗಳ ಸುರಕ್ಷತೆ ಮತ್ತು ಸ್ಥಿರತೆ ಕಾಪಾಡಿಕೊಳ್ಳುವುದು ಪ್ರಮುಖ ಆದ್ಯತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಉದ್ವಿಗ್ನತೆಯ ನಡುವೆಯೂ, ಅಗತ್ಯ ಸೇವೆ ಮುಂದುವರೆಸಲು ಮತ್ತು ಯಾವುದೇ ಮುಂದಿನ ತುರ್ತು ಪರಿಸ್ಥಿತಿಗಳಿಗೆ ಸಿದ್ಧರಾಗಿರಲು ತಾಂತ್ರಿಕ ತಂಡಗಳು ದಿನದ 24 ಗಂಟೆಯೂ ಕೆಲಸ ಮಾಡುತ್ತಿವೆ ಎಂದು ಸಚಿವಾಲಯ ತಿಳಿಸಿದೆ. ಏತನ್ಮಧ್ಯೆ, ಕುವೈತ್‌ನ ರಕ್ಷಣಾ ಸಚಿವಾಲಯವು ಕಳೆದ 24 ಗಂಟೆಗಳಲ್ಲಿ ಹಲವಾರು ವೈಮಾನಿಕ ಬೆದರಿಕೆಗಳನ್ನು ತಡೆಹಿಡಿದಿದೆ ಎಂದು ತಿಳಿಸಿದೆ. ವಕ್ತಾರ ಕರ್ನಲ್ ಸೌದ್ ಅಲ್-ಅಟ್ವಾನ್ ಅವರ ಪ್ರಕಾರ, ದೇಶವು 14 ಬ್ಯಾಲಿಸ್ಟಿಕ್ ಕ್ಷಿಪಣಿಗಳು ಮತ್ತು 12 ಪ್ರತಿಕೂಲ ಡ್ರೋನ್‌ಗಳನ್ನು ಪತ್ತೆಹಚ್ಚಿ ನಿಗ್ರಹಿಸಿದೆ. ಕುವೈತ್ ಸಶಸ್ತ್ರ ಪಡೆಗಳ ನೆಲೆಯನ್ನು ಗುರಿಯಾಗಿಸಿಕೊಂಡು ನಡೆದ ಈ ಸ್ಪೋಟಗಳಲ್ಲಿ 10 ಮಂದಿ ಸಿಬ್ಬಂದಿಗೆ ಗಾಯಗಳಾಗಿವೆ ಮತ್ತು ಅಪಾರ ಹಾನಿಯನ್ನುಂಟಾಗಿದೆ.ಮತ್ತೊಂದು ಘಟನೆಯಲ್ಲಿ, ಖಾಸಗಿ ಲಾಜಿಸ್ಟಿಕ್ಸ್ ಕಂಪನಿಗೆ ಸೇರಿದ ಶೇಖರಣಾ ಸೌಲಭ್ಯಗಳಿಗೂ ಸಹ ಹಾನಿಯಾಗಿದೆ. ಆದರೆ ಅಲ್ಲಿ ಯಾವುದೇ ಸಾವು-ನೋವುಗಳು ವರದಿಯಾಗಿಲ್ಲ.ಫೆಬ್ರವರಿ 28ರಂದು ಯುಎಸ್, ಇಸ್ರೇಲ್ ಮತ್ತು ಇರಾನ್ ನಡುವೆ ಯುದ್ಧ ಪ್ರಾರಂಭವಾದಾಗಿನಿಂದ, ಕುವೈತ್ 307 ಬ್ಯಾಲಿಸ್ಟಿಕ್ ಕ್ಷಿಪಣಿಗಳು, ಎರಡು ಕ್ರೂಸ್ ಕ್ಷಿಪಣಿಗಳು ಮತ್ತು 616 ಡ್ರೋನ್‌ಗಳನ್ನು ಎದುರಿಸಿದೆ.

Leave a Reply

Your email address will not be published. Required fields are marked *

error: Content is protected !!