ಉದಯವಾಹಿನಿ, ಬೈರುತ್(ಲೆಬನಾನ್​): ಇರಾನ್​ನ ನೆರಳಾಗಿ ಕೆಲಸ ಮಾಡುವ ಹಿಜ್ಬುಲ್ಲಾ ಉಗ್ರರ ತಾಣ ಲೆಬನಾನ್​ ಮೇಲೆ ಶನಿವಾರ ಇಸ್ರೇಲ್​ ನಡೆಸಿದ ವಾಯುದಾಳಿಯಲ್ಲಿ ಮೂವರು ಪತ್ರಕರ್ತರು ಸಾವಿಗೀಡಾಗಿದ್ದಾರೆ. ಇವರು ಯುದ್ಧ ವರದಿಗಾರಿಕೆ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.
ಹಿಜ್ಬುಲ್ಲಾ ಸಂಘಟನೆಯೇ ನಡೆಸುವ ಅಲ್-ಮನಾರ್ ಟಿವಿ ಹಿರಿಯ ವರದಿಗಾರ ಅಲಿ ಶೋಯಿಬ್, ಬೈರುತ್ ಮೂಲದ ಪ್ಯಾನ್ ಅರಬ್ ಅಲ್ ಮಯಾದೀನ್ ಟಿವಿಯ ವರದಿಗಾರ್ತಿ ಫಾತಿಮಾ ಫ್ಟೌನಿ ಮತ್ತು ಇನ್ನೊಬ್ಬ ಪತ್ರಕರ್ತ ದಾಳಿಯಲ್ಲಿ ಬಲಿಯಾದವರು ಎಂದು ಗುರುತಿಸಲಾಗಿದೆ.
ದಕ್ಷಿಣ ಲೆಬನಾನ್​ ಮೇಲೆ ಇಸ್ರೇಲ್​ ದಾಳಿಯಲ್ಲಿ ನಮ್ಮ ಹಿರಿಯ ವರದಿಗಾರ ಶೋಯಿಬ್​ ಅವರು ಯುದ್ಧ ಮಾಹಿತಿ ನೀಡುವಾಗ ಬಲಿಯಾಗಿದ್ದಾರೆ ಎಂದು ಅಲ್ ಮನಾರ್ ಸಂಸ್ಥೆ ತಿಳಿಸಿದೆ. ಅವರು ಕಳೆದ ಮೂರು ದಶಕಗಳಿಂದ ನಮ್ಮ ಉದ್ಯೋಗಿಯಾಗಿದ್ದರು ಎಂದಿದೆ. ಇತ್ತ, ಬೈರುತ್ ಮೂಲದ ಪ್ಯಾನ್-ಅರಬ್ ಅಲ್-ಮಯಾದೀನ್ ಟಿವಿ ವರದಿಗಾರ್ತಿ ಫಾತಿಮಾ ಫ್ಟೌನಿ ಜೆಜ್ಜೈನ್‌ನಲ್ಲಿ ನಡೆದ ಇನ್ನೊಂದು ವೈಮಾನಿಕ ದಾಳಿಯಲ್ಲಿ ಸಾವನ್ನಪ್ಪಿದ್ದಾರೆ. ಅವರು ಈ ದಾಳಿಗೂ ಮೊದಲು ನೇರ ವರದಿಯೊಂದಿಗೆ ಮಾಹಿತಿ ಹಂಚಿಕೊಂಡಿದ್ದರು ಎಂದು ಮಯಾದೀನ ಸಂಸ್ಥೆ ಹೇಳಿದೆ.

ವೈಮಾನಿಕ ದಾಳಿಯಲ್ಲಿ ಪತ್ರಕರ್ತರ ಸಾವನ್ನು ಲೆಬನಾನ್​ ಸರ್ಕಾರ ಖಂಡಿಸಿದೆ. ಇಸ್ರೇಲ್​ ಯುದ್ಧ ನೀತಿಯನ್ನು ಮರೆತು ಸಾಮಾನ್ಯ ಜನರ ಮೇಲೆ ದಾಳಿ ಮಾಡುತ್ತಿದೆ. ಯುದ್ಧ ವರದಿಗಾರಿಕೆ ಮಾಡುವ ಪತ್ರಕರ್ತರನ್ನು ರಕ್ಷಿಸುವ ಕಾನೂನುಗಳು ಮತ್ತು ಒಪ್ಪಂದವನ್ನು ಈ ದಾಳಿ ಉಲ್ಲಂಘಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದೆ. ಇಸ್ರೇಲ್​ ಹೇಳಿದ್ದೇನು?: ತನ್ನ ದಾಳಿಯಲ್ಲಿ ಪತ್ರಕರ್ತರ ಸಾವನ್ನು ಇಸ್ರೇಲ್ ಸಮರ್ಥಿಸಿಕೊಂಡಿದೆ. ಅಲ್-ಮನಾರ್ ಟಿವಿ ಹಿರಿಯ ವರದಿಗಾರ ಅಲಿ ಶೋಯಿಬ್ ಹಿಜ್ಬುಲ್ಲಾ ಉಗ್ರರಿಗೆ ನೆರವಾಗುತ್ತಿದ್ದ. ಆತ ಭಯೋತ್ಪಾದಕರ ಜೊತೆ ನಂಟು ಹೊಂದಿದ್ದ. ಇಸ್ರೇಲ್​ ಪಡೆಗಳ ಬಗ್ಗೆ ಅವರಿಗೆ ಮಾಹಿತಿ ನೀಡುತ್ತಿದ್ದ ಎಂದು ಆರೋಪಿಸಿದೆ. ಆದರೆ, ತಾನು ಬಿಡುಗಡೆ ಮಾಡಿದ ಹೇಳಿಕೆಯನ್ನು ಇನ್ನಿಬ್ಬರು ಪತ್ರಕರ್ತರ ಬಗ್ಗೆ ಉಲ್ಲೇಖಿಸಿಲ್ಲ.
ಈ ಹಿಂದೆ ಗಾಜಾದಲ್ಲಿ ಹಮಾಸ್​ ಉಗ್ರರು ಪತ್ರಕರ್ತರ ಸೋಗಿನಲ್ಲಿ ನಮ್ಮ ವಿರುದ್ಧ ಕೆಲಸ ಮಾಡುತ್ತಿದ್ದರು. ಅದೇ ರೀತಿ ಲೆಬನಾನ್​ನಲ್ಲಿ ನಮ್ಮ ಪಡೆಗಳ ಬಗ್ಗೆ ರಹಸ್ಯ ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಅಂಥವರನ್ನು ಹುಡುಕಿ ದಾಳಿ ಮಾಡಲಾಗಿದೆ ಎಂದು ಇಸ್ರೇಲ್​ ಹೇಳಿದೆ. ಇದಕ್ಕೂ ಮೊದಲು ಇಸ್ರೇಲ್​ ದಾಳಿ ನಡೆಸಿ ಅಲ್​ ಮನಾರ್​ ಟಿವಿಯ ಪ್ರಧಾನ ಕಚೇರಿ ಮತ್ತು ಅಲ್​ ನೂರ್​ ರೇಡಿಯೋ ಕೇಂದ್ರವನ್ನು ಉಡಾಯಿಸಿತ್ತು. ಈ ವೇಳೆ ಅಲ್-ಮನಾರ್ ಟಿವಿಯ ರಾಜಕೀಯ ವಿಶ್ಲೇಷಕ ಮೊಹಮ್ಮದ್ ಶೆರ್ರಿ ಮತ್ತು ಆತನ ಪತ್ನಿ ಸಾವಿಗೀಡಾಗಿದ್ದರು. ಇಸ್ರೇಲ್​ ದಾಳಿಗೆ ಒಟ್ಟು 5 ಮಂದಿ ಪತ್ರಕರ್ತರು ಸಾವನ್ನಪ್ಪಿದ್ದಾರೆ.

Leave a Reply

Your email address will not be published. Required fields are marked *

error: Content is protected !!