ಉದಯವಾಹಿನಿ, ಸಂತ ಕಬೀರ್ ನಗರ(ಉತ್ತರ ಪ್ರದೇಶ): ಇಲ್ಲಿನ ಪ್ರಸಿದ್ಧ ವೃಂದಾವನದ ಸಂತ ಪ್ರೇಮಾನಂದ್ ಜೀ ಮಹಾರಾಜರ ಮೇಲಿನ ಅಪಾರ ಭಕ್ತಿ ಮತ್ತು ನಂಬಿಕೆಯಿಂದಾಗಿ ಬಿಹಾರದ ಜೈ ಶಾ ಮತ್ತು ಸಾವಿತ್ರಿ ದೇವಿ ದಂಪತಿ ಬಹುದೂರದ ದಂಡಾವತ್ ಯಾತ್ರೆ ಕೈಗೊಂಡಿದ್ದಾರೆ.
ದಂಪತಿ ಬಿಹಾರದಿಂದ ವೃಂದಾವನಕ್ಕೆ 1,007 ಕಿಲೋ ಮೀಟರ್ ಪ್ರಯಾಣವನ್ನು ದಂಡಾವತ್ (ಮಲಗುತ್ತಾ ನಮಸ್ಕರಿಸುತ್ತಾ) ಮಾಡುವ ಮೂಲಕ ಕ್ರಮಿಸುತ್ತಿದ್ದಾರೆ. ಇವರು ಸಂತ ಕಬೀರ್ ನಗರದ ಗಡಿ ತಲುಪಿದಾಗ, ಅಲ್ಲಿಯ ಸ್ಥಳೀಯರು ಹೂವಿನ ಹಾರಗಳೊಂದಿಗೆ ಆತ್ಮೀಯವಾಗಿ ಸ್ವಾಗತಿಸಿದರು.
ಮಾತನಾಡಿದ ಜೈ ಶಾ, “ನಾವು ಬಿಹಾರ ಬಿಟ್ಟು ಸುಮಾರು ಎರಡು ತಿಂಗಳುಗಳಾಗಿವೆ. ನಿಧಾನವಾಗಿ, ದೃಢನಿಶ್ಚಯದ ಪ್ರಯಾಣದ ಮೂಲಕ ಮುಂದಿನ ನಾಲ್ಕು ತಿಂಗಳಲ್ಲಿ ಶ್ರೀಕೃಷ್ಣನ ನಗರ ವೃಂದಾವನ ತಲುಪುತ್ತೇವೆ. ದಾರಿಯುದ್ದ ನಾವು ಎದುರಿಸುತ್ತಿರುವ ಎಲ್ಲಾ ತೊಂದರೆಗಳು ಮಹಾರಾಜ ಜಿ ಮೇಲಿನ ಪ್ರೀತಿಯಿಂದಾಗಿ ಗೌಣವಾಗಿವೆ” ಎಂದು ಹೇಳಿದರು.
ಜೈ ಶಾ ಹಾಗು ಸಾವಿತ್ರಿ ಅವರು ಜೊತೆಗೆ ಪ್ರತಿದಿನ ನಿಗದಿತ ದೂರವನ್ನು ಕ್ರಮಿಸುತ್ತಿದ್ದಾರೆ. ರಾತ್ರಿ ವಿಶ್ರಾಂತಿ ಪಡೆದ ನಂತರ ಮರುದಿನ ಪ್ರಯಾಣ ಪುನರಾರಂಭಿಸುತ್ತಾರೆ.
ಸಾವಿತ್ರಿ ದೇವಿ ಮಾತನಾಡಿ, “ನಮ್ಮ ಭಕ್ತಿ ನಮಗೆ ಶಕ್ತಿ ಮತ್ತು ಧೈರ್ಯ ನೀಡುತ್ತಿದೆ. ನಾವು ದಂಡಾವತ್ ಯಾತ್ರೆ ಮಾಡುವ ಮೂಲಕ ವೃಂದಾವನ ತಲುಪಲು ನಿರ್ಧರಿಸಿದ್ದೇವೆ. ಈ ಪ್ರತಿಜ್ಞೆಯನ್ನು ನಾವು ಯಾವುದೇ ಬೆಲೆ ತೆತ್ತಾದರೂ ಪೂರೈಸಬೇಕು. ಭಕ್ತಿ ಮತ್ತು ನಂಬಿಕೆ ಅತ್ಯಂತ ಮಹತ್ವದ ಅಡೆತಡೆಗಳನ್ನು ನಿವಾರಿಸಬಲ್ಲದು” ಎಂದರು.
