ಉದಯವಾಹಿನಿ, ದುಬೈ (ಯುಎಇ): ಡ್ರೋನ್ ದಾಳಿಯಿಂದ ಕುವೈತ್ ತೈಲ ಟ್ಯಾಂಕರ್ ಅಲ್ ಸಲ್ಮಿಯಲ್ಲಿ ಕಾಣಿಸಿಕೊಂಡ ಬೆಂಕಿಯನ್ನು ಯಶಸ್ವಿಯಾಗಿ ನಂದಿಸಲಾಗಿದೆ ಎಂದು ದುಬೈ ಮಾಧ್ಯಮ ಕಚೇರಿ ಮಂಗಳವಾರ ತಿಳಿಸಿದೆ. ಇದರಿಂದಾಗಿ ಹಡಗಿನ ಹಲ್(ತಳಭಾಗ) ಹಾನಿಯಾಗಿದೆ ಮತ್ತು ತೈಲ ಸೋರಿಕೆಯಾಗುವ ಸಾಧ್ಯತೆಯ ಬಗ್ಗೆ ಕಳವಳ ವ್ಯಕ್ತವಾಗಿದೆ. ಟ್ಯಾಂಕರ್ ಅಲ್ ಸಲ್ಮಿ ಕುವೈತ್ ಮತ್ತು ಸೌದಿ ಅರೇಬಿಯಾದಿಂದ ಚೀನಾದ ಕ್ವಿಂಗ್ಡಾವೊಗೆ 2 ಮಿಲಿಯನ್ ಬ್ಯಾರೆಲ್ ತೈಲವನ್ನು ಸಾಗಿಸುತ್ತಿತ್ತು. ಅದೃಷ್ಟವಶಾತ್, ಎಲ್ಲ 24 ಸಿಬ್ಬಂದಿ ಸುರಕ್ಷಿತವಾಗಿದ್ದಾರೆ ಮತ್ತು ಅವರಿಗೆ ಗಾಯಗಳಾಗಿರುವ ಬಗ್ಗೆ ವರದಿಯಾಗಿಲ್ಲ.
ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ದುಬೈ ಮಾಧ್ಯಮ ಕಚೇರಿ, “ರಕ್ಷಣಾ ತಂಡಗಳು ಕುವೈತ್ ತೈಲ ಟ್ಯಾಂಕರ್ನಲ್ಲಿ ಕಾಣಿಸಿಕೊಂಡ ಬೆಂಕಿಯನ್ನು ಯಶಸ್ವಿಯಾಗಿ ನಂದಿಸಿವೆ ಎಂದು ದುಬೈ ಅಧಿಕಾರಿಗಳು ದೃಢಪಡಿಸಿದ್ದಾರೆ. ತಂಡಗಳು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವುದನ್ನು ಮುಂದುವರಿಸಿವೆ. ಹೆಚ್ಚಿನ ಮಾಹಿತಿ ಲಭ್ಯವಾದ ತಕ್ಷಣವೇ ಹಂಚಿಕೊಳ್ಳಲಾಗುವುದು ಎಂದು ತಿಳಿಸಿದೆ.
ವಾಯು ರಕ್ಷಣಾ ವ್ಯವಸ್ಥೆ ಹೊಡೆದುರುಳಿಸಿದ ಅವಶೇಷಗಳಿಂದ ಅಲ್ ಬಡಾದಲ್ಲಿರುವ ಯಾರು ವಾಸವಿರದ ಮನೆಯೊಂದರಲ್ಲಿ ಬೆಂಕಿ ಹೊತ್ತಿಕೊಂಡಿದ್ದು, ದುಬೈನ ಅಧಿಕಾರಿಗಳು ಬೆಂಕಿ ನಂದಿಸಲು ಅಗತ್ಯ ಕ್ರಮ ಕೈಗೊಂಡಿದ್ದಾರೆ. ಮನೆಯ ಸುತ್ತಮುತ್ತಲಿನ ವ್ಯಕ್ತಿಗಳಲ್ಲಿ ನಾಲ್ವರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ವರದಿಯಾಗಿದೆ” ಎಂದು ಹೇಳಿದೆ.
ಯುನೈಟೆಡ್ ಅರಬ್ ಎಮಿರೇಟ್ಸ್‌ನ ಬಂದರಿನಲ್ಲಿ ಲಂಗರು ಹಾಕಿದ್ದಾಗ ಇರಾನಿನ ದಾಳಿಯಿಂದ ಅಲ್ ಸಲ್ಮಿ ಟ್ಯಾಂಕರ್ಗೆ ಹಾನಿಯಾಗಿದೆ ಮತ್ತು ಹಡಗಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ಕುವೈತ್ ಪೆಟ್ರೋಲಿಯಂ ಕಾರ್ಪೊರೇಷನ್ (ಕೆಪಿಸಿ) ತಿಳಿಸಿದೆ. ದುಬೈನಲ್ಲಿ ಸೋಮವಾರ ಸ್ಥಳೀಯ ಸಮಯ ಸಂಜೆ 6 ರಿಂದ 7 ಗಂಟೆಗೆ ಪ್ರಾರಂಭವಾಗಿ ಮಂಗಳವಾರ ಬೆಳಗಿನ ಜಾವ 1 ರಿಂದ 2 ಗಂಟೆಯವರೆಗೆ ಹಲವಾರು ಬಾರಿ ಜೋರಾದ ಸ್ಫೋಟಗಳು ಕೇಳಿಬಂದಿವೆ ಎಂದು ಮಾಹಿತಿ ನೀಡಿದೆ.
