ಉದಯವಾಹಿನಿ, ನಲ್ಗೊಂಡ(ತೆಲಂಗಾಣ): ತಂದೆ, ತಾಯಿಗೆ ಮಕ್ಕಳೇ ಸರ್ವಸ್ವ. ತಮ್ಮ ಜೀವ-ಜೀವನ ಒತ್ತೆಯಿಟ್ಟಾದರೂ ಮಕ್ಕಳನ್ನು ಪೋಷಿಸುತ್ತಾರೆ. ಸುಶಿಕ್ಷಿತರಾಗಿ ಸಮಾಜದಲ್ಲಿ ಉತ್ತಮ ಹುದ್ದೆಗೇರಲೆಂದು ಎಷ್ಟೇ ಕಷ್ಟವಾದರೂ ಶಿಕ್ಷಣ ಕಲಿಸುತ್ತಾರೆ. ತಾವು ಉಪವಾಸ ಮಾಡಿ, ಮಕ್ಕಳ ಹೊಟ್ಟೆ ತುಂಬಿಸುತ್ತಾರೆ. ಇಷ್ಟೆಲ್ಲ ತ್ಯಾಗ ಮಾಡುವ ಹೆತ್ತವರಿಗೆ ತಮ್ಮ ಕೊನೆಗಾಲದಲ್ಲಿ ಮಕ್ಕಳು ಆಸರೆಯಾಗುವ ನಿರೀಕ್ಷೆ ಇರುತ್ತದೆ. ಆದರೆ ಇಳಿವಯಸ್ಸಿನಲ್ಲಿ ಆಸರೆಯಾಗಬೇಕಾದ ಮಕ್ಕಳೇ ಕೈಬಿಟ್ಟರೆ? ಇಂಥದ್ದೊಂದು ಹೃದಯವಿದ್ರಾವಕ ಘಟನೆ ತೆಲಂಗಾಣದ ನಲ್ಗೊಂಡದಲ್ಲಿ ನಡೆದಿದೆ.
ಇದು 72 ವರ್ಷದ ಮರೋಜು ಓಂಕಾರಂ ಮತ್ತು ಅವರ 65 ವರ್ಷದ ಈಶ್ವರಮ್ಮ ದಂಪತಿಯ ವ್ಯಥೆ. ನಲ್ಗೊಂಡ ಜಿಲ್ಲೆಯ ಶಾಲಿಗೌರರಾಮ್ ಮಂಡಲದ ರಾಮಾಂಜಿಪುರಂ ಗ್ರಾಮದ ವೃದ್ಧ ದಂಪತಿಗೆ ಐದು ಜನ ಗಂಡು ಮಕ್ಕಳಿದ್ದರೂ ಇವರು ಸಹಾಯಕ್ಕಾಗಿ ಅಂಗಲಾಚುತ್ತಿದ್ದಾರೆ.

ಜೀವನಕ್ಕಾಗುವಷ್ಟು ಕೃಷಿ ಭೂಮಿ ಹೊಂದಿದ್ದ ದಂಪತಿ ಐದೂ ಜನ ಗಂಡು ಮಕ್ಕಳನ್ನು ಬಹಳ ಜತನದಿಂದ ಬೆಳೆಸಿ, ಶಿಕ್ಷಣವನ್ನೂ ಕೊಡಿಸಿದ್ದರು. ಇಳಿವಯಸ್ಸಿನಲ್ಲಿ ಒಬ್ಬರಾದರೂ ತಮಗೆ ಆಧಾರವಾಗಲಿ ಎಂದು ಆಶಿಸಿದ್ದರು. ಆದರೀಗ ಐವರಲ್ಲಿ ಯಾರೂ ಕೂಡಾ ಇವರನ್ನು ಪೋಷಿಸುತ್ತಿಲ್ಲ. ಇವರತ್ತ ತಿರುಗಿಯೂ ನೋಡುತ್ತಿಲ್ಲ. ಇದರಿಂದ ಹಳ್ಳಿಯಲ್ಲೇ ಒಬ್ಬಂಟಿಯಾಗಿ ನೋವು ಅನುಭವಿಸುತ್ತಿದ್ದಾರೆ.”ಮಕ್ಕಳಿಗಾಗಿ ಬದುಕಿದೆವು. ಹಗಲು ರಾತ್ರಿ ಕೆಲಸ ಮಾಡಿದೆವು. ನಮ್ಮಲ್ಲಿದ್ದ ಎಲ್ಲವನ್ನೂ ಅವರಿಗೆ ನೀಡಿದೆವು” ಎಂದು ನೆನೆಸಿಕೊಂಡು ಓಂಕಾರಂ ಕಣ್ಣೀರಿಡುತ್ತಾರೆ.ಪುತ್ರರಿಗೆ ಜಮೀನು ಹಂಚಿದ ಪೋಷಕರು: 2019ರಲ್ಲಿ ದಂಪತಿ ತಮ್ಮ ಪುತ್ರರಿಗೆ 5 ಎಕರೆ ಮತ್ತು 20 ಗುಂಟೆ ಭೂಮಿಯನ್ನು ಸಮಾನವಾಗಿ ಹಂಚಿದ್ದರು. ಒಂದು ಎಕರೆಯನ್ನು ಮಾತ್ರ ತಮ್ಮ ಹೆಸರಲ್ಲಿಟ್ಟುಕೊಂಡಿದ್ದರು. ಇದೀಗ ಆ ಒಂದು ಎಕರೆ ಜಮೀನನ್ನೂ ತಮಗೆ ಕೊಡುವಂತೆ ಮಕ್ಕಳು ಒತ್ತಾಯಿಸುತ್ತಿದ್ದಾರೆ.
15 ವರ್ಷಗಳಿಂದ ಒಂಟಿಯಾಗಿರುವ ದಂಪತಿ: ಜಮೀನು ಪಾಲು ಮಾಡಿಕೊಟ್ಟ ಬಳಿಕ ಮಕ್ಕಳೆಲ್ಲ ಹೆತ್ತವರಿಂದ ದೂರವಾಗಿ ಬೇರೆ ಬೇರೆ ಕಡೆ ವಾಸಿಸುತ್ತಿದ್ದಾರೆ. ಇದರಿಂದಾಗಿ ಕಳೆದ 15 ವರ್ಷಗಳಿಂದ ಹಳ್ಳಿಯಲ್ಲಿ ಇವರದು ಒಂಟಿ ವಾಸ. ಮಕ್ಕಳು ಈಗ ನಮಗೆ ವರ್ಷಕ್ಕೆ 8,000 ರೂಪಾಯಿ ಮಾತ್ರ ನೀಡುತ್ತಿದ್ದು, ಇದು ನಮ್ಮ ಔಷಧಿಗಳಿಗೂ ಸಾಲುತ್ತಿಲ್ಲ ಎಂದು ವೃದ್ಧರು ಗೋಳಾಡುತ್ತಾರೆ.”ಹೃದಯ ಕಾಯಿಲೆ ಮತ್ತು ವಯೋಸಹಜ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದೇವೆ. ಮಕ್ಕಳು ನೀಡುವ ಹಣ ಔಷಧಿಗಳಿಗೂ ಸಾಕಾಗುವುದಿಲ್ಲ. ಗಂಡನ ಚಿಕಿತ್ಸೆಗೆ ಹಣ ಹೊಂದಿಸಲು ಚಿನ್ನದ ಕಿವಿಯೋಲೆಗಳನ್ನು ಒತ್ತೆ ಇಡಬೇಕಾಯಿತು” ಎಂದು ಈಶ್ವರಮ್ಮ ಅಲವತ್ತುಕೊಂಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!