ಉದಯವಾಹಿನಿ, ರಾಮನಗರ (ಉತ್ತರಾಖಂಡ): ಅಳಿವಿನಂಚಿನಲ್ಲಿರುವ ಅಪರೂಪದ ಬಿಳಿ ರಣಹದ್ದುಗಳು ಕಾರ್ಬೆಟ್ ಪಕ್ಕದಲ್ಲಿರುವ ರಾಮನಗರ ಅರಣ್ಯ ವಿಭಾಗದ ಟೆಡಾ ಪ್ರದೇಶದಲ್ಲಿ ಕಂಡು ಬಂದಿದೆ. ಖ್ಯಾತ ವನ್ಯಜೀವಿ ಛಾಯಾಗ್ರಾಹಕ ದೀಪ್ ರಾಜ್ವರ್ ಅವರ ಕ್ಯಾಮರಾ ಕಣ್ಣಿನಲ್ಲಿ ಈ ರಣಹದ್ದುಗಳು ಸೆರೆಯಾಗಿದ್ದು, ಇದು ವನ್ಯಜೀವಿ ಪ್ರಿಯರು ಮತ್ತು ತಜ್ಞರಲ್ಲಿ ಸಂತಸ ಮೂಡಿಸಿದೆ. ಈ ರಣಹದ್ದುಗಳ ಕುರಿತು ಮಾತನಾಡಿರುವ ಛಾಹಗ್ರಾಹಕ ದೀಪ್ ರಾಜ್ವರ್, ಈ ರಣಹದ್ದುಗಳು ಕ್ಯಾಮರಾ ಕಣ್ಣಿಗೆ ಸೆರೆಯಾಗುವುದು ಸವಾಲಿನ ಸಂಗತಿಯಾಗಿದೆ. ಕಾರಣ ಇತ್ತೀಚಿನ ವರ್ಷದಲ್ಲಿ ಇವುಗಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಇಳಿಕೆ ಕಂಡು ಬಂದಿವೆ. ಈ ಬಿಳಿ ರಣ ಹದ್ದುಗಳು ಅಪರೂಪದ್ದಾಗಿವೆ. 2017ರಲ್ಲಿ ಈ ರೀತಿಯ ರಣಹದ್ದು ಕಾರ್ಬೆಟ್ ಹುಲಿ ಸಂರಕ್ಷಿತಾರಣ್ಯದಲ್ಲಿ ಜಿರ್ನಾ ವಲಯದಲ್ಲಿ ಕಂಡಿತ್ತು. 2021ರಲ್ಲಿ ಟೆಡಾ ಪ್ರದೇಶದಲ್ಲಿ ಕಾಣಿಸಿಕೊಂಡಿತ್ತು. ಇದೀಗ ಈ ಹದ್ದುಗಳು ಮತ್ತೆ ಕಂಡು ಬಂದಿದ್ದು, ಒಟ್ಟಿಗೆ 6 ರಣಹದ್ದುಗಳು ಕಂಡಿರುವುದು ವಿಶೇಷವಾಗಿದೆ. ಇವುಗಳ ಸಂರಕ್ಷಣೆ ಮಾಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಈ ರಣಹದ್ದುಗಳು ಪರಿಸರವನ್ನು ಶುಚಿಯಾಗಿಡುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಸದ್ದ ಪ್ರಾಣಿಗಳನ್ನು ತಿನ್ನುವ ಇವು ಪರಿಸರ ಸ್ವಚ್ಚಗೊಳಿಸುತ್ತದೆ. ಈ ಹಿಂದೆ ಕೂಡ ಈ ರಣಹದ್ದುಗಳ ಕ್ರಮವಾಗಿ 5 ಮತ್ತು 7ಸಂಖ್ಯೆಯಲ್ಲಿ ಕಂಡಿದೆ. ಇದೀಗ ಮತ್ತೆ 6 ರಣಹದ್ದುಗಳು ಕಂಡಿದೆ. ಈ ಕುರಿತು ಮಾತನಾಡಿರುವ ಪಕ್ಷಿ ತಜ್ಞ ಸುಮಂತ ಘೋಷ್, ವಿಶ್ವದ ಅತಿ ಹೆಚ್ಚು ಬೇಟೆಯಾಡುವ ಪಕ್ಷಿಗಳಲ್ಲಿ ರಣಹದ್ದುಗಳು ಕೂಡಾ ಇವೆ. ಈ ಮೊದಲು ಅಂದಾಜು ಸುಮಾರು 45 ಮಿಲಿಯನ್ನಷ್ಟು ರಣಹದ್ದುಗಳಿದ್ದವು ಇತ್ತೀಚಿನ ದಶಕಗಳಲ್ಲಿ ಅವುಗಳ ಸಂಖ್ಯೆ ತೀವ್ರವಾಗಿ ಕಡಿಮೆಯಾಗಿದೆ. ಇದಕ್ಕೆ ಕಾರಣ ಪ್ರಾಣಿಗಳಿಗೆ ನೀಡುತ್ತಿರುವ ನೋವು ನಿವಾರಕಗಳು, ವಿಶೇಷವಾಗಿ ನಾನ್ ಸ್ಟೆರಾಯ್ಡ್ ಉರಿಯೂತದ ಔಷಧಗಳನ್ನು ಸೇವಿಸಿದ ಪ್ರಾಣಿಗಳನ್ನು ಈ ಪಕ್ಷಿಗಳು ತಿಂದಾಗ ರಣಹದ್ದುಗಳಲ್ಲಿ ಗಂಭೀರ ಆರೋಗ್ಯ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಹೀಗಾಗಿ ಅವು ಸಾವನ್ನಪ್ಪುತ್ತಿದ್ದು, ಸಂತಿತಿ ಕ್ಷೀಣಿಸುತ್ತಾ ಸಾಗುತ್ತಿದೆ.
ಭಾರತದಲ್ಲಿ ರಣಹದ್ದುಗಳ ಸಂಖ್ಯೆಯಲ್ಲಿ 99.9 ಪ್ರತಿಶತ ಇಳಿಕೆ ಕಂಡು ಬಂದಿದೆ. ಈ ಹಿಂದೆ ಪ್ರಭೇದವು ಮರಗಳಲ್ಲಿ ಗೂಡುಕಟ್ಟುತ್ತಿದ್ದವು. ಆದರೆ, ಇತರ ರಣಹದ್ದು ಪ್ರಭೇದಗಳು ಬಂಡೆಗಳ ಮೇಲೆ ಗೂಡುಕಟ್ಟುತ್ತವೆ. ಕಾರ್ಬೆಟ್ ಹುಲಿ ಮೀಸಲು ಪ್ರದೇಶದ ನಿರ್ದೇಶಕ ಡಾ. ಸಾಕೇತ್ ಬಡೋಲಾ ಈ ಬಗ್ಗೆ ಮಾತನಾಡಿದ್ದು, ಕಳೆದ ಕೆಲವು ದಶಕಗಳಲ್ಲಿ ಹಲವಾರು ರಣಹದ್ದು ಪ್ರಭೇದಗಳು ಶೇ 95 ರಷ್ಟು ಕ್ಷೀಣಿಸಿವೆ. ಕಾರ್ಬೆಟ್‌ನಂತಹ ಸಂರಕ್ಷಿತ ಅರಣ್ಯ ಪ್ರದೇಶದಂತಹ ಕೆಲವೇ ಪ್ರದೇಶದಲ್ಲಿ ರಣಹದ್ದುಗಳನ್ನು ಕಾಣಬಹುದಾಗಿದೆ. ಬಿಳಿ ರಣಹದ್ದುಗಳಂತಹ ಅಪರೂಪದ ಪ್ರಭೇದಗಳು ಇನ್ನೂ ಕಾರ್ಬೆಟ್‌ನ ದಟ್ಟವಾದ ಕಾಡುಗಳಲ್ಲಿ ಕಂಡುಬರುತ್ತವೆ. ಟೆಡಾ ಪ್ರದೇಶದಲ್ಲಿ ಅವುಗಳ ಆಗಾಗ್ಗೆ ಕಾಣಸಿಗುವುದು ಆರೋಗ್ಯಕರ ಪರಿಸರ ವ್ಯವಸ್ಥೆಯನ್ನು ಸೂಚಿಸುತ್ತವೆ. ಇವುಗಳ ಸಂರಕ್ಷಣಾ ಪ್ರಯತ್ನಗಳು ಪರಿಣಾಮಕಾರಿ ಸಾಧ್ಯವಾಗಬೇಕಿದೆ ಎಂದರು.
