ಉದಯವಾಹಿನಿ, ಹೈದರಾಬಾದ್​(ತೆಲಂಗಾಣ): ಇಲ್ಲಿನ ದಂತವೈದ್ಯರಾದ ಡಾ.ಸರ್ಜಿವ್​ ಸಿಂಗ್​ ಯಾದವ್ ಅವರು ರೋಗಿಗಳ ದಂತಪಂಕ್ತಿಗಳನ್ನು ಅಂದಗೊಳಿಸುವುದರ ಜೊತೆಗೆ, ಕಳೆದ ಐದು ದಶಕಗಳಿಂದ ನಿಸ್ವಾರ್ಥವಾಗಿ ರಕ್ತದಾನ ಮಾಡುವ ಮೂಲಕ ಅನೇಕರ ಜೀವ ಕಾಪಾಡಿದ್ದಾರೆ.
ಹೈದರಾಬಾದ್‌ನ ಒಸ್ಮಾನಿಯಾ ಸರ್ಕಾರಿ ದಂತ ಕಾಲೇಜಿನ ಪ್ರಾಂಶುಪಾಲರಾಗಿರುವ ಡಾ.ಯಾದವ್​ ಅವರು ಅಗತ್ಯ ಇರುವರಿಗೆ ರಕ್ತದಾನ ಮಾಡಲು ಸದಾ ಮುಂದಿರುತ್ತಾರೆ. ಯಾವುದೇ ಸಮಯದಲ್ಲಿ ಕರೆ ಬಂದರೂ ಅಳುಕಿಲ್ಲದೆ ಹೋಗಿ ರಕ್ತದಾನ ಮಾಡುತ್ತಾರೆ. ಹೀಗೆ, ಕಳೆದ 48 ವರ್ಷಗಳಿಂದ 107 ಬಾರಿ ರಕ್ತದಾನ ಮಾಡಿದ್ದಾರೆ.

63 ವಯಸ್ಸಿನ ಯಾದವ್​ ಶಿಸ್ತು ಮತ್ತು ಉತ್ಸಾಹದ ಜೀವನ ಸಾಗಿಸುತ್ತಿದ್ದಾರೆ. ತಮ್ಮ ಆರೋಗ್ಯಯುತ ಜೀವನಶೈಲಿಯಿಂದಾಗಿ ಈ ವಯಸ್ಸಿನಲ್ಲೂ ರಕ್ತದಾನ ಮಾಡಲು ಸಾಧ್ಯವಾಗುತ್ತಿದೆ ಎನ್ನುತ್ತಾರೆ ಅವರು. ತಮ್ಮ ಆರೋಗ್ಯದ ಗುಟ್ಟು ಹಂಚಿಕೊಳ್ಳುತ್ತಾ, ಬೆಳಗ್ಗೆದ್ದು ಪ್ರತಿನಿತ್ಯ ಯೋಗ ಅಥವಾ ಲಘು ವ್ಯಾಯಾಮ ಮಾಡುತ್ತೇನೆ. ನನ್ನ ಆಹಾರ ಪದ್ದತಿ ಸರಳ, ಸಮತೋಲಿತವಾಗಿದೆ ಎಂದು ಹೇಳುತ್ತಾರೆ.

ಬೆಳಗ್ಗೆ ಉಪಹಾರಕ್ಕೆ ಸಿರಿಧಾನ್ಯದ ಆಹಾರ ಮತ್ತು ಹಣ್ಣು, ಮಧ್ಯಾಹ್ನದ ಊಟಕ್ಕೆ ಅನ್ನ, ಚಪಾತಿ, ದಾಲ್​, ಹಸಿರು ತರಕಾರಿ ಮತ್ತು ಸಲಾಡ್​ ಸೇವಿಸುತ್ತೇನೆ. ರಾತ್ರಿ ಊಟಕ್ಕೂ ಹಗುರ ಮತ್ತು ಸುಲಭವಾಗಿ ಜೀರ್ಣವಾಗುವ ಆಹಾರ ಸೇವಿಸುತ್ತೇನೆ. ಕಳೆದ 25 ವರ್ಷದಿಂದ ಮಾಂಸಾಹಾರ ತ್ಯಜಿಸಿದ್ದು, ಇದರಿಂದ ನನಗೆ ಯಾವುದೇ ಆರೋಗ್ಯ ಸಮಸ್ಯೆಯಾಗಿಲ್ಲ ಎಂದು ತಿಳಿಸಿದ್ದಾರೆ.
ಯಾದವ್​ ಅವರ ಈ ಸೇವೆಯನ್ನು ಸಹೋದ್ಯೋಗಿಗಳು, ವಿದ್ಯಾರ್ಥಿಗಳು ಶ್ಲಾಘಿಸಿದ್ದು, “ಡಾ.ಯಾದವ್ ಅವರು ಕೇವಲ ದಂತ ವೈದ್ಯಕೀಯವನ್ನು ಮಾತ್ರ ಕಲಿಸುವುದಿಲ್ಲ, ಮಾನವೀಯತೆಯನ್ನೂ ಕಲಿಸುತ್ತಾರೆ” ಎನ್ನುತ್ತಾರೆ.ರಕ್ತದಾನ ಸೇವೆಗೆ ಮುಂದಾಗಿರುವ ಕುರಿತು ಮಾತನಾಡಿದ ಅವರು, “ರಕ್ತದ ಕೊರತೆ ರೋಗಿಯನ್ನು ಅಪಾಯಕ್ಕೆ ಸಿಲುಕಿಸುತ್ತದೆ. ಇದನ್ನರಿತು ರಕ್ತದಾನ ಮಾಡಲು ಶುರು ಮಾಡಿದೆ” ಎಂದು ಹೇಳಿದ್ದಾರೆ.

Leave a Reply

Your email address will not be published. Required fields are marked *

error: Content is protected !!