
ಉದಯವಾಹಿನಿ, ಮಾಸ್ಕೋ: ರಷ್ಯಾದ An-26 ಸೇನಾ ವಿಮಾನ ಪತನಗೊಂಡಿದ್ದು, 29 ಪ್ರಯಾಣಿಕರು ಸಾವನ್ನಪ್ಪಿದ್ದಾರೆ. ತಾಂತ್ರಿಕ ದೋಷದಿಂದಾಗಿ ಈ ಅವಘಡ ಸಂಭವಿಸಿದೆ ಎಂದು ಶಂಕಿಸಲಾಗಿದೆ ಎಂದು ಅಲ್ಲಿನ ರಕ್ಷಣಾ ಸಚಿವಾಲಯ ಮಾಹಿತಿ ನೀಡಿದೆ.
ರಕ್ಷಣಾ ಸಚಿವಾಲಯದ ಪ್ರಕಾರ, ಸ್ಥಳೀಯ ಕಾಲಮಾನ ಸಂಜೆ 6 ಗಂಟೆಗೆ ಆಂಟೊನೊವ್ ಡಿಸೈನ್ ಬ್ಯೂರೋ An-26 ವಿಮಾನವು ಕ್ರೈಮಿಯಾದ ಪರ್ಯಾಯ ದ್ವೀಪದ ಮೇಲೆ ಹಾರಾಟ ನಡೆಸಿತ್ತು. ಈ ವೇಳೆ ರೇಡಾರ್‌ನಿಂದ ಸಂಪರ್ಕ ಕಳೆದುಕೊಂಡು ತಾಂತ್ರಿಕ ದೋಷದಿಂದಾಗಿ ಬಂಡೆಗೆ ಅಪ್ಪಳಿಸಿದೆ. ಪರಿಣಾಮ ವಿಮಾನದಲ್ಲಿದ್ದ 29 ಜನರು ಸಾವನ್ನಪ್ಪಿದ್ದಾರೆ. ಸ್ಥಳದಲ್ಲಿ ಶೋಧ ಕಾರ್ಯ ನಡೆಯುತ್ತಿದ್ದು, ಮಾಹಿತಿ ಪ್ರಕಾರ ಆರು ಸಿಬ್ಬಂದಿ ಹಾಗೂ 23 ಪ್ರಯಾಣಿಕರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
1960ರ ದಶಕದ ಅಂತ್ಯದಿಂದ ಸೇವೆ ಸಲ್ಲಿಸುತ್ತಿರುವ, ದಶಕಗಳಷ್ಟು ಹಳೆಯದಾದ An-26 ವಿಮಾನ ಸರಕು ಸಾಗಿಸಲು ಹಾಗೂ ಹೆಚ್ಚೆಂದರೆ 40 ಪ್ರಯಾಣಿಕರನ್ನು ಸಾಗಿಸಬಲ್ಲದಾಗಿತ್ತು. ಸದ್ಯ ವಿಮಾನ ಪತನಗೊಂಡ ಕ್ರೈಮಿಯಾ ಪರ್ಯಾಯ ದ್ವೀಪವನ್ನು 2014ರಲ್ಲಿ ಉಕ್ರೇನ್‌ನಿಂದ ರಷ್ಯಾ ವಶಪಡಿಸಿಕೊಂಡಿತ್ತು. ಇದಕ್ಕೂ ಮುನ್ನ 2022ರಲ್ಲಿ ಉಕ್ರೇನ್‌ನ ಜಪೋರಿಝಿಯಾ ಪ್ರದೇಶದಲ್ಲಿ ಅಪಘಾತಕ್ಕೀಡಾಗಿ ಓರ್ವ ವ್ಯಕ್ತಿ ಸಾವನ್ನಪ್ಪಿದ್ದರು.
2020ರಲ್ಲಿ ಉಕ್ರೇನ್‌ನಲ್ಲಿ ತರಬೇತಿ ಹಾರಾಟದ ಸಮಯದಲ್ಲಿ ಅಪಘಾತಕ್ಕೀಡಾಗಿ ವಿಮಾನದಲ್ಲಿದ್ದ 27 ಜನರ ಪೈಕಿ ಓರ್ವ ವ್ಯಕ್ತಿ ಬದುಕುಳಿದಿದ್ದರು.
2020ರಲ್ಲಿ ದಕ್ಷಿಣ ಸುಡಾನ್‌ನಲ್ಲಿ ಅಪಘಾತಕ್ಕೀಡಾಗಿ ಐದು ರಷ್ಯನ್ನರು ಸೇರಿದಂತೆ ಎಂಟು ಜನರು ಸಾವನ್ನಪ್ಪಿದ್ದರು. 2017ರಲ್ಲಿ ಪಶ್ಚಿಮ ಆಫ್ರಿಕಾದ ಐವರಿ ಕೋಸ್ಟ್‌ನಲ್ಲಿ ಲ್ಯಾಂಡ್ ಆಗುವಾಗ ಅಪಘಾತಕ್ಕೀಡಾಗಿ ವಿಮಾನದಲ್ಲಿದ್ದ 10 ಜನರ ಪೈಕಿ ನಾಲ್ವರು ಸಾವನ್ನಪ್ಪಿದ್ದರು.
