ಉದಯವಾಹಿನಿ,  ಜಾಗತಿಕ ಯುದ್ಧ, ಬೆಲೆ ಏರಿಕೆಗಳ ನಡುವೆ ಅಮೆರಿಕ ಮೂಲದ ಐಟಿ ದಿಗ್ಗಜ ಕಂಪನಿಯಾಗಿರುವ ಒರಾಕಲ್ ಇದೀಗ ಉದ್ಯೋಗಿಗಳನ್ನು ವಜಾ ಮಾಡುವ ಮೂಲಕ ಸುದ್ದಿಯಾಗಿದೆ. ಒರಾಕಲ್​ ಜಾಗತಿಕವಾಗಿ ಉದ್ಯೋಗ ವಜಾಕ್ಕೆ ಮುಂದಾಗಿದ್ದು, ಇದರ ಪರಿಣಾಮ ಭಾರತೀಯ ಉದ್ಯೋಗಿಗಳ ಮೇಲೂ ಬೀರಿದೆ.
ಒರಾಕಲ್​, ಭಾರತದಲ್ಲಿ ತನ್ನ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ 12 ಸಾವಿರ ಉದ್ಯೋಗಿಗಳನ್ನು ವಜಾ ಮಾಡಿದ್ದು, ಮತ್ತೊಂದು ತಿಂಗಳ ಒಳಗೆ ಮತ್ತಷ್ಟು ಸಿಬ್ಬಂದಿಗಳನ್ನು ವಜಾಗೊಳಿಸುವ ನಿರೀಕ್ಷೆ ಇದೆ. ಈ ಸಂಸ್ಥೆ ಜಾಗತಿಕವಾಗಿ ಇದೀಗ 30 ಸಾವಿರ ಉದ್ಯೋಗಿಗಳನ್ನು ಕೆಲಸದಿಂದ ಕಿತ್ತುಹಾಕಿದೆ ಎಂದು ವರದಿಯಾಗಿದೆ. ಸಂಸ್ಥೆಯಿಂದ ವಜಾಗೊಂಡಿರುವ ಇಬ್ಬರು ಉದ್ಯೋಗಿಗಳು ಮಾತನಾಡಿ, ಭಾರತದಲ್ಲಿ 12ಸಾವಿರ ಉದ್ಯೋಗಿಗಳನ್ನು ಕಡಿತಗೊಳಿಸಿದೆ. ಸಂಸ್ಥೆ ಮತ್ತೊಂದು ತಿಂಗಳಿನಲ್ಲಿ ಮತ್ತೊಂದು ಸುತ್ತಿನ ವಜಾಗೊಳಿಸುವ ಪ್ರಕ್ರಿಯೆಯನ್ನು ನಡೆಸುವ ಯೋಜನೆ ರೂಪಿಸಿದೆ. ವಜಾಗೊಂಡಿರುವ ಸಿಬ್ಬಂದಿಗಳು ಸೇರಿದಂತೆ ಭಾರತದಲ್ಲಿ ಒಟ್ಟು 30 ಸಾವಿರ ಉದ್ಯೋಗಿಗಳನ್ನು ಹೊಂದಿದ್ದು, ಈ ಬೆಳವಣಿಗೆ ಕುರಿತು ಹೇಳಿಕೆ ನೀಡಲು ಸಂಸ್ಥೆ ನಿರಾಕರಿಸಿದೆ.

ತನ್ನ ಎಲ್ಲಾ ಸಿಬ್ಬಂದಿಗೆ ಇಮೇಲ್​ ಸಂದೇಶ ಕಳುಹಿಸಿರುವ ಸಂಸ್ಥೆ, ನಿರ್ದಿಷ್ಟ ಸಾಂಸ್ಥಿಕ ಬದಲಾವಣೆಗಳಿಂದ ಈ ಬದಲಾವಣೆ ನಡೆಸಲಾಗುತ್ತಿದ್ದು, ಸುಗಮ ಕಾರ್ಯಾಚರಣೆ ಗುರಿಯೊಂದಿಗೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಪರಿಣಾಮವಾಗಿ ದುರದೃಷ್ಟವಶಾತ್, ನೀವು ಪ್ರಸ್ತುತ ಹೊಂದಿರುವ ಹುದ್ದೆಯು ಅನಗತ್ಯವಾಗುತ್ತದೆ ಎಂದು ತಿಳಿಸಲಾಗಿದೆ.  ವಜಾಗೊಳಿಸಿರುವ ಉದ್ಯೋಗಿಗಳು ಸಂಸ್ಥೆಯಲ್ಲಿ ಒಂದು ವರ್ಷದ ಹುದ್ದೆ ಪೂರ್ಣಗೊಳಿಸಿದ್ದರೆ, ಅವರಿಗೆ 15ದಿನದ ವೇತನ ಸೇರಿದಂತೆ ಸೌಲಭ್ಯ ನೀಡಿದೆ. ವಜಾಗೊಳಿಸುವ ದಿನಾಂಕದವರೆಗೆ ಒಂದು ತಿಂಗಳ ಪಾವತಿಸದ ವೇತನ, ರಜೆಯ ನಗದು, ಅರ್ಹತೆಯ ಆಧಾರದ ಮೇಲೆ ಗ್ರಾಚ್ಯುಟಿ ಮತ್ತು ಒಂದು ತಿಂಗಳ ನೋಟಿಸ್ ಅವಧಿಗೆ ವೇತನವನ್ನು ನೀಡಿದೆ.  ಸಂಸ್ಥೆಯಿಂದ ಸ್ವಯಂಪ್ರೇರಣೆಯಿಂದ ಮತ್ತು ಸೌಹಾರ್ದಯುತವಾಗಿ ಕಂಪನಿಗೆ ರಾಜೀನಾಮೆ ನೀಡುವವರಿಗೆ ಎರಡು ತಿಂಗಳ ಸಂಬಳವನ್ನು ಪಾವತಿ ಮಾಡಲಿದೆ. ಒರಾಕಲ್‌ನ ಮಾಜಿ ಉದ್ಯೋಗಿ ಮೇರುಗು ಶ್ರೀಧರ್ ಆರೋಪಿಸಿದಂತೆ, ಭಾರತದಲ್ಲಿರುವ ಕಂಪನಿಗಳಲ್ಲಿನ 16 ಗಂಟೆಗಳ ಕೆಲಸದ ಶಿಫ್ಟ್ ವಿರುದ್ಧ ಪ್ರತಿಭಟಿಸಿದ್ದಕ್ಕಾಗಿ ಸೆಪ್ಟಂಬರ್‌ನಲ್ಲಿ ತಮ್ಮನ್ನು ವಜಾಗೊಳಿಸಲಾಗಿದೆ. ಮಾನವ ಸಂಪನ್ಮೂಲದಲ್ಲಿರುವ ನನ್ನ ಸ್ನೇಹಿತರನ್ನು ಸಂಪರ್ಕಿಸಿದೆ. ಅಮೆರಿಕದಲ್ಲಿ ಆ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ನಾಗರಿಕರನ್ನು ಕೆಲಸದಿಂದ ತೆಗೆದುಹಾಕುವುದು ಕಷ್ಟಸಾಧ್ಯ. ಏಕೆಂದರೆ ಈ ವಿಚಾರದಲ್ಲಿ ಅಲ್ಲಿನ ಸ್ಥಳೀಯ ಕಾನೂನುಗಳು ತುಂಬಾ ಕಟ್ಟುನಿಟ್ಟಾಗಿವೆ. ಆದ್ರೆ ಭಾರತೀಯರ ಮೇಲೆ ಇದು ಹೆಚ್ಚಿನ ಪರಿಣಾಮ ಬೀರಿದೆ ಎಂದಿದ್ದಾರೆ.

Leave a Reply

Your email address will not be published. Required fields are marked *

error: Content is protected !!