ಉದಯವಾಹಿನಿ, ಟೆಹ್ರಾನ್(ಇರಾನ್): ಮಧ್ಯ ಪ್ರಾಚ್ಯದಲ್ಲಿರುವ ಅಮೆರಿಕದ ಟೆಕ್ ದೈತ್ಯ ಕಂಪನಿಗಳ ಪ್ರಾದೇಶಿಕ ಕಚೇರಿಗಳನ್ನು ನಾಶಪಡಿಸುವುದಾಗಿ ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನ್ ಗಾರ್ಡ್ಸ್ ಕಾರ್ಪ್ಸ್ (IRGC) ಗಂಭೀರ ಬೆದರಿಕೆ ಹಾಕಿದೆ. ಈ ಕಚೇರಿಗಳು ತಮ್ಮ ದೇಶದ ವಿರುದ್ಧ ಗೂಢಚಾರಿಕೆ ನಡೆಸುತ್ತಿವೆ ಎಂದು ಅದು ಹೇಳಿದೆ. ಹಾಗಾಗಿ, ಶೀಘ್ರದಲ್ಲೇ ಈ ಕಚೇರಿಗಳಲ್ಲಿ ಕೆಲಸ ಮಾಡುವ ಸಿಬ್ಬಂದಿ ಕಚೇರಿಗಳನ್ನು ತೊರೆಯಬೇಕು ಎಂದು ಗಡುವು ನೀಡಿದೆ.
18 ಪ್ರಮುಖ ಅಮೆರಿಕದ ಕಂಪನಿಗಳ ಕಚೇರಿಗಳನ್ನು ಟಾರ್ಗೆಟ್ ಮಾಡಲಾಗುವುದು. ಕಾರ್ಯಾಚರಣೆಯಲ್ಲಿ ಅವುಗಳ ಮೂಲಸೌಕರ್ಯವನ್ನು ಧ್ವಂಸ ಮಾಡುವುದಾಗಿ ತಿಳಿಸಿದೆ.
ಇರಾನ್ ಸರ್ಕಾರಿ ಮಾಧ್ಯಮದ ಪ್ರಕಾರ, ಈ ಕಂಪನಿಗಳು ಗೂಢಚರ್ಯೆ ಸೇವೆಗಳನ್ನು ಒದಗಿಸುವ ಮೂಲಕ ಇರಾನ್‌ನೊಳಗೆ ಯುಎಸ್-ಇಸ್ರೇಲ್ ಭಯೋತ್ಪಾದನಾ ಕಾರ್ಯಾಚರಣೆಗಳಿಗೆ ಸಕ್ರಿಯವಾಗಿ ನೆರವಾಗಿವೆ ಎಂದು ಹೇಳಿದೆ.
ಈ ಸಂಬಂಧ IRGC ಮಂಗಳವಾರ ಔಪಚಾರಿಕ ಹೇಳಿಕೆ ಬಿಡುಗಡೆ ಮಾಡಿತ್ತು. ಅಮೆರಿಕದ ಕಂಪನಿಗಳು ನಮ್ಮ ದಾಳಿಗಳಿಗೆ ಸಿದ್ಧರಾಗಬೇಕು. ಏಪ್ರಿಲ್ 1ರಂದು ಇರಾನ್ ಪ್ರತೀಕಾರದ ದಾಳಿ ಆರಂಭಿಸಲಿದ್ದು, ಅವು ವಿನಾಶಕಾರಿಯಾಗಿರುತ್ತವೆ ಎಂದಿದೆ. ತನ್ನ ಹಿಟ್ ಲಿಸ್ಟ್‌ನಲ್ಲಿ ದೊಡ್ಡ ತಂತ್ರಜ್ಞಾನ ಸಂಸ್ಥೆಗಳಾದ ಆ್ಯಪಲ್, ಗೂಗಲ್, ಮೆಟಾ, ಮೈಕ್ರೋಸಾಫ್ಟ್, ಹೆಚ್‌ಪಿ, ಇಂಟೆಲ್, ಐಬಿಎಂ ಮತ್ತು ಸಿಸ್ಕೊ ಕಂಪನಿಗಳನ್ನು ಸೇರಿಸಿದೆ. ಇದರ ಜೊತೆಗೆ ಟೆಸ್ಲಾ, Nvidia, ಒರಾಕಲ್, ಜೆ.ಪಿ ಮಾರ್ಗನ್ ಮತ್ತು ಬೋಯಿಂಗ್‌ನಂತಹ ಇತರ ಜಾಗತಿಕ ದೈತ್ಯ ಕಂಪನಿಗಳಿವೆ. IRGC ಇವುಗಳನ್ನು ಅಮೆರಿಕದ ಯುದ್ದೋನ್ಮಾದ ಸರ್ಕಾರದ ಬೇಹುಗಾರಿಕಾ ಘಟಕಗಳೆಂದು ಗುರುತಿಸಿದೆ. ಈ ಕಂಪನಿಗಳ ಕೃತಕ ಬುದ್ಧಿಮತ್ತೆ (ಎಐ) ಮತ್ತು ಇಂಟರ್ನೆಟ್ ಸಂವಹನ ತಂತ್ರಜ್ಞಾನ (ಐಸಿಟಿ) ಸೇವೆಗಳು ಅಮೆರಿಕದ ಸೇನಾ ಕಾರ್ಯಾಚರಣೆಗಳನ್ನು ವಿನ್ಯಾಸಗೊಳಿಸುವಲ್ಲಿ ಹಾಗು ಇರಾನ್‌ನೊಳಗೆ ಅಮೆರಿಕ-ಇಸ್ರೇಲ್ ಹತ್ಯೆ ಗುರಿಗಳನ್ನು ಪತ್ತೆ ಹಚ್ಚುವಲ್ಲಿ ಪ್ರಮುಖವಾಗಿ ನೆರವಾಗಿವೆ ಎಂದು ಆರೋಪಿಸಿದೆ.
