ಉದಯವಾಹಿನಿ, ಟೆಹ್ರಾನ್ (ಇರಾನ್​): ಮಧ್ಯಪ್ರಾಚ್ಯದಲ್ಲಿನ ಬಿಕ್ಕಟ್ಟು 33ನೇ ದಿನಕ್ಕೆ ಕಾಲಿಟ್ಟಿದ್ದು, ಇರಾನ್ ಜೊತೆಗಿನ ಯುದ್ಧ ಎರಡು ಅಥವಾ ಮೂರು ವಾರಗಳಲ್ಲಿ ಮುಗಿಯುವ ಸಾಧ್ಯತೆ ಇದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ತಿಳಿಸಿದ್ದಾರೆ. ಶ್ವೇತಭವನದಲ್ಲಿ ದೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, ಇರಾನ್​ ಕುರಿತು ಮಹತ್ವದ ಹೇಳಿಕೆ ನೀಡಿದರು. ಈ ವೇಳೆ ಅಮೆರಿಕ ಬಹುಶಃ ಇನ್ನೆರಡು ಅಥವಾ ಮೂರು ವಾರಗಳಲ್ಲಿ ಇರಾನ್​ ತೊರೆಯಬಹುದು. ಅದಕ್ಕೂ ಮೊದಲು ನಾವು ಒಪ್ಪಂದ ಮಾಡಿಕೊಳ್ಳುವ ಸಾಧ್ಯತೆ ಇದೆ ಎಂದರು.ಹಾರ್ಮುಜ್​ ಜಲಸಂಧಿ ಜವಾಬ್ದಾರಿ ಅಮೆರಿಕದ್ದಲ್ಲ: ಇರಾನ್​ ಹಿಡಿತದಲ್ಲಿರುವ ಜಾಗತಿಕ ತೈಲದ ಐದನೇ ಒಂದು ಭಾಗ ಸಾಮಾನ್ಯವಾಗಿ ಹಾದುಹೋಗುವ ಹಾರ್ಮುಜ್‌ ಜಲಸಂಧಿ ಕುರಿತು ಪ್ರತಿಕ್ರಿಯಿಸಿದ ಅವರು, ಹಾರ್ಮುಜ್ ಜಲಸಂಧಿಯಲ್ಲ ತೈಲ ಹಡಗು ಮಾರ್ಗವನ್ನು ಸುರಕ್ಷಿತಗೊಳಿಸುವ ಜವಾಬ್ದಾರಿ ಅಮೆರಿಕದ ಬದಲು ಈ ಮಾರ್ಗದ ಮೇಲೆ ಅವಲಂಬಿತವಾಗಿರುವ ದೇಶಗಳ ಮೇಲಿರಬೇಕು. ಜಲಸಂಧಿಯಲ್ಲಿ ಏನಾಗುತ್ತದೆ ಎಂಬುದಕ್ಕೆ ನಮಗೆ ಸಂಬಂಧವಿಲ್ಲ ಎಂದು ಹೇಳಿದ್ದಾರೆ.ನಿಮ್ಮ ತೈಲವನ್ನು ನೀವು ಪಡೆಯಬೇಕು. ನಮ್ಮ ಜೊತೆ ನೀವು ಇಲ್ಲ, ಅದರಂತೆ ನಾವು ಕೂಡ ನಿಮಗೆ ಸಹಾಯ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.ಈ ಬೆಳವಣಿಗೆ ನಡುವೆ ಮಾತನಾಡಿರುವ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು, ಇರಾನ್ ವಿರುದ್ಧದ ಜಂಟಿ ಅಭಿಯಾನವು ಮಧ್ಯಪ್ರಾಚ್ಯದ ಮುಖವನ್ನೇ ಬದಲಾಯಿಸಿದೆ. ಇರಾನ್ ರಾಜಧಾನಿ ಟೆಹ್ರಾನ್‌ನಲ್ಲಿ ಭಯೋತ್ಪಾದಕ ಆಡಳಿತವನ್ನು ಹತ್ತಿಕ್ಕುವುದನ್ನು ಮುಂದುವರಿಸುತ್ತೇವೆ ಎಂದು ಹೇಳಿದ್ದಾರೆ.ಮತ್ತೊಂದೆಡೆ ಸಂದರ್ಶನದಲ್ಲಿ ಮಾತನಾಡಿರುವ ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಗ್ಚಿ ಅಮೆರಿಕದ ರಾಯಭಾರಿ ಸ್ಟೀವ್ ವಿಟ್ಕಾಫ್ ಅವರಿಂದ ಮೊದಲಿನಂತೆ ನೇರವಾಗಿ ಸಂದೇಶಗಳು ಬರುತ್ತಿವೆ. ಇದರರ್ಥ ನಾವು ಮಾತುಕತೆಯಲ್ಲಿದ್ದೇವೆ ಎಂದಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಈ ನಡುವೆ ಲೆಬನಾನ್‌ನಲ್ಲಿ, ದಕ್ಷಿಣ ಬೈರುತ್ ಮತ್ತು ಹತ್ತಿರದ ಪ್ರದೇಶದಲ್ಲಿ ಇಸ್ರೇಲಿ ದಾಳಿಗಳಲ್ಲಿ ಏಳು ಜನರು ಸಾವನ್ನಪ್ಪಿದ್ದಾರೆ. ಹೆಜ್ಬುಲ್ಲಾದ ಹಿರಿಯ ಕಮಾಂಡರ್‌ನನ್ನು ಹೊಡೆದುರುಳಿಸಿರುವುದಾಗಿ ಇಸ್ರೇಲಿ ಸೇನೆ ತಿಳಿಸಿದೆ.ಇರಾನ್ ಬೆಂಬಲಿತ ಹೆಜ್ಬುಲ್ಲಾ ವಿರುದ್ಧ ಇಸ್ರೇಲ್ ನಡೆಸುತ್ತಿರುವ ಕಾರ್ಯಾಚರಣೆಯಿಂದಾಗಿ ಲೆಬನಾನ್‌ನಲ್ಲಿ 1,200 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಒಂದು ಮಿಲಿಯನ್‌ಗಿಂತಲೂ ಹೆಚ್ಚು ಜನರು ಸ್ಥಳಾಂತರಗೊಂಡಿದ್ದಾರೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.ಷೇರು ಪೇಟೆಯಲ್ಲಿ ಚೇತರಿಕೆ: ಕಳೆದೊಂದು ತಿಂಗಳಿನಿಂದ ನಡೆಯುತ್ತಿರುವ ಯುದ್ದದಿಂದ ಜಾಗತಿಕ ಷೇರುಪೇಟೆಯಲ್ಲಿ ಸಾಕಷ್ಟು ಪರಿಣಾಮ ಬೀರಿದ್ದು, ಇದೀಗ ಯುದ್ಧ ಅಂತ್ಯದ ಕುರಿತು ಮಾತುಗಳು ಇಂದು ಜಾಗತಿಕ ಷೇರುಪೇಟೆಯಲ್ಲಿ ಚೇತರಿಕೆಗೆ ಕಾರಣವಾಗಿದೆ.ಬುಧವಾರ ಆರಂಭಿಕ ವಹಿವಾಟಿನಲ್ಲಿ ಜಪಾನ್‌ನ ನಿಕ್ಕಿ ಶೇ. ಮೂರಕ್ಕಿಂತ ಹೆಚ್ಚು ಏರಿಕೆ ಕಂಡರೆ, ದಕ್ಷಿಣ ಕೊರಿಯಾದ ಕೋಸ್ಪಿ ಶೇ. ಐದರಷ್ಟು ಏರಿಕೆ ಕಂಡಿದೆ.

Leave a Reply

Your email address will not be published. Required fields are marked *

error: Content is protected !!