ಉದಯವಾಹಿನಿ, ತಿರುವನಂತಪುರ: ಸಿನಿಮಾ ಸೆಟ್‌ನಲ್ಲಿ ನಟಿಯೊಬ್ಬರ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿದ್ದಾರೆ ಎಂಬ ಆರೋಪ ಮೇಲೆ ಮಲಯಾಳಂ ನಿರ್ದೇಶಕ, ನಟ ರಂಜಿತ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಕೊಚ್ಚಿ ನಗರ ಪೊಲೀಸ್ ಠಾಣೆಯಲ್ಲಿ ನಟಿಯೊಬ್ಬರು ದೂರು ದಾಖಲಿಸಿದ್ದಾರೆ. ಸಿನಿಮಾ ಸಮಯದಲ್ಲಿ ರಂಜಿತ್ ತಮ್ಮನ್ನು ಕ್ಯಾರವಾನ್‌ಗೆ ಕರೆದೊಯ್ದು ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿದ್ದಾರೆ ಎಂದು ಆರೋಪಿಸಿದ್ದಾರೆ. ದೂರಿನನ್ವಯ ಪೊಲೀಸರು ರಂಜಿತ್ ಅವರನ್ನು ಮಂಗಳವಾರ (ಮಾ.31) ತಡರಾತ್ರಿ ಇಡುಕ್ಕಿ ಜಿಲ್ಲೆಯ ತೋಡುಪುಳದಲ್ಲಿ ಬಂಧಿಸಿದಿದ್ದಾರೆ. ಅದಾದ ಬಳಿಕ ಅವರನ್ನು ಕೇರಳದ ಜೆಎಫ್‌ಎಂಸಿ (ನ್ಯಾಯಾಂಗ ಪ್ರಥಮ ದರ್ಜೆ ಮ್ಯಾಜಿಸ್ಟ್ರೇಟ್) ಕೋರ್ಟ್ಗೆ ಹಾಜರುಪಡಿಸಿದ್ದು, 14 ದಿನ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ. ಬಳಿಕ ಅವರನ್ನು ಎರ್ನಾಕುಲಂ ಜೈಲಿಗೆ ಸ್ಥಳಾಂತರಿಸಲಾಗಿದೆ.
ಮ್ಯಾಜಿಸ್ಟ್ರೇಟ್ ನಿವಾಸದ ಹೊರಗೆ ಮಾಧ್ಯಮಗಳೊಂದಿಗೆ ಮಾತನಾಡಿದ ನಿರ್ದೇಶಕ ರಂಜಿತ್, ಇದು ಸುಳ್ಳು. ಈ ಪ್ರಕರಣದಲ್ಲಿ ಮಾಡಿರುವ ಆರೋಪ ಸುಳ್ಳು ಎಂದಿದ್ದಾರೆ. ಸದ್ಯ ಕೊಚ್ಚಿ ನಗರ ಪೊಲೀಸ್ ಆಯುಕ್ತರ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ ಈ ಪ್ರಕರಣದ ತನಿಖೆ ನಡೆಸುತ್ತಿದೆ. ನಿರ್ದೇಶಕ ರಂಜಿತ್ ಅವರ ವಿರುದ್ಧ ಆರೋಪ ಕೇಳಿಬಂದಿದ್ದು ಇದೇ ಮೊದಲಲ್ಲ. ಇದಕ್ಕೂ ಮುನ್ನ ಕಿರುಕುಳ ಮತ್ತು ನಿಂದನೆಯಂತಹ ಆರೋಪಗಳಲ್ಲಿ ಭಾಗಿಯಾಗಿರುವುದು ಕೇಳಿಬಂದಿತ್ತು. ಇದು ಮೂರನೇ ಪ್ರಕರಣವಾಗಿದೆ. 2024ರಲ್ಲಿ, ಬಂಗಾಳಿ ನಟಿಯೊಬ್ಬರು ಕೊಚ್ಚಿ ನಗರ ಪೊಲೀಸರಿಗೆ ದೂರು ನೀಡಿದ್ದರು. 2009ರಲ್ಲಿ ಚಿತ್ರೀಕರಣದ ಸಮಯದಲ್ಲಿ ರಂಜಿತ್ ಲೈಂಗಿಕ ಉದ್ದೇಶದಿಂದ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಆರೋಪಿಸಿದ್ದರು.
