ಉದಯವಾಹಿನಿ, ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಬುಧವಾರ ತಡರಾತ್ರಿ ನಡೆದ ಸಾಂಪ್ರದಾಯಿಕ, ಪ್ರಸಿದ್ಧ ಕರಗ ಉತ್ಸವವನ್ನು ಸಾವಿರಾರು ಭಕ್ತರು ಕಣ್ತುಂಬಿಕೊಂಡರು. ಸತತ 16ನೇ ಬಾರಿಗೆ ಅರ್ಚಕ ಎ.ಜ್ಞಾನೇಂದ್ರ ಕರಗವನ್ನು ಹೊತ್ತಿದ್ದು, ಹುಣ್ಣಿಮೆ ಬೆಳಕಲ್ಲಿ ಹೂವಿನ ಕರಗ ಕಂಗೊಳಿಸಿದೆ.
ಅರ್ಚಕ ಎ.ಜ್ಞಾನೇಂದ್ರ ಪೂರ್ವ ಪೂಜಾಕ್ರಮಗಳನ್ನು ಪೂರೈಸಿ, ತಿಗಳರಪೇಟೆಯಲ್ಲಿರುವ ಧರ್ಮರಾಯಸ್ವಾಮಿ ದೇವಸ್ಥಾನಕ್ಕೆ ಬಂದು ಧಾರ್ಮಿಕ ವಿಧಿವಿಧಾನಗಳನ್ನು ಮುಗಿಸಿದ ಬಳಿಕ ಮಲ್ಲಿಗೆ ಹೂವಿನಿಂದ ಅಲಂಕಾರಗೊಂಡಿದ್ದ ದ್ರೌಪದಿದೇವಿ ಕರಗ ಉತ್ಸವವನ್ನು ಹೊತ್ತು ದೇವಸ್ಥಾನದಿಂದ ಹೊರಬಂದರು. ವೀರಕುಮಾರರ ಉದ್ಘೋಷ, ಭಕ್ತರ ಗೋವಿಂದ ನಾಮಸ್ಮರಣೆ, ಮಲ್ಲಿಗೆ ಹೂವಿನ ಸಮರ್ಪಣೆಯೊಂದಿಗೆ ನಗರದ ಪೇಟೆಗಳ ಮುಖ್ಯರಸ್ತೆ, ಗಲ್ಲಿಗಳಲ್ಲಿ ಮೆರವಣಿಗೆ ಸಾಗಿತು.
ಮಲ್ಲಿಗೆ ಹೂಗಳಿಂದ ಅಲಂಕೃತಗೊಂಡ ದ್ರೌಪದಮ್ಮನ ಕರಗ ಭಕ್ತಿಯ ಕೇಂದ್ರಬಿಂದುವಾಗಿದ್ದು, ಖಡ್ಗ ಹಿಡಿದ ವೀರಕುಮಾರರ ಅಬ್ಬರದ ಮಧ್ಯೆ ಕರಗ ಮೆರವಣಿಗೆ ರಾತ್ರಿಯಿಡೀ ಸಂಭ್ರಮ ಸಡಗರದಿಂದ ಸಾಗಿತು. ನಗರದ ವಿವಿಧ ಭಾಗಗಳಲ್ಲಿ ನಡೆದ ರಥಗಳ ಮೆರವಣಿಗೆಯ ವೈಭವವನ್ನು ಸಾವಿರಾರು ಭಕ್ತರು ಕಣ್ತುಂಬಿಕೊಂಡರು.

Leave a Reply

Your email address will not be published. Required fields are marked *

error: Content is protected !!