ಉದಯವಾಹಿನಿ, ಪುಣೆ (ಮಹಾರಾಷ್ಟ್ರ): ಭಾರಿ ಮಳೆ ಸುರಿದಿದೆ. ಅಕಾಲಿಕ ಮಳೆಯಿಂದ ನಗರದ ಹಲವು ರಸ್ತೆಗಳು ಜಲಾವೃತಗೊಂಡಿವೆ. ಸುಮಾರು ಎರಡು ಗಂಟೆಗಳ ಕಾಲ ಸುರಿದ ಭಾರಿ ಮಳೆಯಿಂದಾಗಿ, ಹಲವು ರಸ್ತೆಗಳು ನದಿಯಂತಹ ಸ್ಥಿತಿಯಲ್ಲಿದ್ದವು. ಹಲವೆಡೆ ಮರಗಳು ಉರುಳಿ ಬಿದ್ದ ಘಟನೆಗಳು ನಡೆದಿವೆ. ಮರ ಬಿದ್ದು ಮಹಿಳೆಯೊಬ್ಬರು ಸಾವನ್ನಪ್ಪಿದ್ದಾರೆ.
ನಗರದಲ್ಲಿ ಸುರಿದ ಅಕಾಲಿಕ ಮಳೆ ಭಾರಿ ಹಾನಿ ಸೃಷ್ಟಿಸಿದ್ದು, ಈ ಗಂಭೀರ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ಮೇಯರ್ ಮಂಜುಷಾ ನಾಗಪುರೆ ಅವರು ಅಗತ್ಯ ಕ್ರಮಗಳನ್ನು ತಕ್ಷಣವೇ ಜಾರಿಗೆ ತರುವಂತೆ ಆಡಳಿತಕ್ಕೆ ಆದೇಶಿಸಿದ್ದಾರೆ. ನಗರದ ವಿವಿಧ ಭಾಗಗಳಲ್ಲಿ ನೀರು ನಿಲ್ಲುವುದು, ಮರಗಳು ಬೀಳುವುದು ಮತ್ತು ಸಂಚಾರಕ್ಕೆ ಅಡ್ಡಿಯಾಗುವಂತಹ ಸಮಸ್ಯೆಗಳು ಉದ್ಭವಿಸಿವೆ. ಈ ಹಿನ್ನೆಲೆಯಲ್ಲಿ, ಮೇಯರ್ ಮಂಜುಷಾ ನಾಗಪುರೆ ಅವರು ಸಂಬಂಧಪಟ್ಟ ಅಧಿಕಾರಿಗಳಿಗೆ ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ಅವಲೋಕಿಸಿ ನಾಗರಿಕರಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸುವಂತೆ ನಿರ್ದೇಶನ ನೀಡಿದ್ದಾರೆ.
ಆಸ್ಪತ್ರೆಗೆ ನುಗ್ಗಿದ ನೀರು: ಅಕಾಲಿಕ ಮಳೆಯಿಂದಾಗಿ ಪುಣೆ ನಗರದ ಹಲವು ರಸ್ತೆಗಳಲ್ಲಿ ನೀರು ನಿಂತಿದ್ದು, ಸಂಚಾರ ದಟ್ಟಣೆ ಉಂಟಾಗಿ ಹಲವು ವಾಹನಗಳು ಸ್ಥಗಿತಗೊಂಡಿವೆ. ಪುಣೆಯ ಅಲ್ಕಾ ಚೌಕ್‌ನಲ್ಲಿರುವ ಆಸ್ಪತ್ರೆಗೆ ನೀರು ನುಗ್ಗಿದ ಘಟನೆ ನಡೆದಿದೆ. ಗುಡುಗು, ಮಿಂಚು ಮತ್ತು ಭಾರಿ ಗಾಳಿಯೊಂದಿಗೆ ಮಳೆಯಾಗಿದ್ದು, ವ್ಯಾಪಕ ಹಾನಿ ಉಂಟು ಮಾಡಿದೆ. ಪುಣೆಯ ಸಿಂಹಗಡ್ ರಸ್ತೆಯ ನವಶ್ಯ ಮಾರುತಿ ಬಳಿ, ಹೂವಿನ ಮಾರಾಟ ಮಾಡುತ್ತಿದ್ದ ರಂಜನಾ ನವನಾಥ್ ಗಿರಿ ಎಂಬ ವೃದ್ಧ ಮಹಿಳೆಯೊಬ್ಬರ ಮೇಲೆ ಮರ ಬಿದ್ದು ಪ್ರಾಣ ಕಳೆದುಕೊಂಡಿದ್ದಾರೆ. ಈ ಘಟನೆಗೆ ಅಧಿಕಾರಿಗಲೇ ಕಾರಣ ಎಂದು ಸ್ಥಳೀಯ ಕಾರ್ಪೊರೇಟರ್ ಸೂರಜ್ ಲೋಖಂಡೆ ಆರೋಪಿಸಿದ್ದಾರೆ.
ನಗರದಲ್ಲಿ ಹಲವಾರು ಮರಗಳು ಉರುಳಿ ಬಿದ್ದ ಅಥವಾ ಬುಡಸಮೇತ ಉರುಳಿದ ಘಟನೆಗಳು ನಡೆದಿವೆ. ಕೆಲವು ಪ್ರದೇಶಗಳಲ್ಲಿ ಆಲಿಕಲ್ಲು ಮಳೆಯೂ ಬಿದ್ದಿದೆ. ಧಯಾರಿ, ಸಿಂಹಗಡ್ ರಸ್ತೆ, ಖರಡಿ, ಬಾಲಾಜಿನಗರ, ಹಡಪ್ಸರ್, ಲೋಹೆಗಾಂವ್, ಬಿಬ್ವೆವಾಡಿ, ಸದಾಶಿವ ಪೇಠ್ ಮತ್ತು ಕೊಥ್ರುಡ್‌ನಲ್ಲಿ ಭಾರಿ ಮಳೆಯಾಗಿದೆ.
