ಉದಯವಾಹಿನಿ, ಭರತ್‌ಪುರ(ರಾಜಸ್ಥಾನ): ಭಾರತದಲ್ಲಿ ಹನುಮಂತನಿಗೆ ಸಂಬಂಧಿಸಿದಂತೆ ಲಕ್ಷಾಂತರ ದೇವಾಲಯಗಳಿದ್ದು, ಅವುಗಳ ಬಗ್ಗೆ ಅಷ್ಟೇ ಪ್ರಮಾಣದ ಆಸಕ್ತಿದಾಯಕ ಕಥೆಗಳಿವೆ. ಈ ಪೈಕಿ ರಾಜಸ್ಥಾನದ ಭರತ್‌ಪುರದ ಸೇವಾರ್ ಪ್ರದೇಶದಲ್ಲಿರುವ ಮಾರುತಿ ದೇವಾಲಯವೂ ಒಂದು.
ಸೇವಾರ್ ರೈಲ್ವೆ ನಿಲ್ದಾಣದ ಸಮೀಪದಲ್ಲೇ ಈ ಪುಟ್ಟ ದೇವಸ್ಥಾನವಿದೆ. ಇದರ ಮುಂದೆ ಹಾದುಹೋಗುವ ಪ್ರತಿ ರೈಲು ಹಾರ್ನ್ (ಸೈರನ್) ಹಾಕಿಕೊಂಡೇ ಮುಂದಕ್ಕೆ ಹೋಗುತ್ತದೆ. ಹಾಗಾಗಿ, ದೇವಸ್ಥಾನವನ್ನು ‘ರೈಲ್ ವಾಲೆ ಹನುಮಾನ್’ ಎಂದೇ ಕರೆಯುತ್ತಾರೆ. ದೇವಸ್ಥಾನ ಬರುತ್ತಿದ್ದಂತೆ ರೈಲು ಚಾಲಕರು (ಲೋಕೋಪೈಲಟ್) ಗೌರವದ ಸಂಕೇತವಾಗಿ ಹಾರ್ನ್ ಹಾಕಿ ಹನುಮಂತನಿಗೆ ಭಕ್ತಿ ಅರ್ಪಿಸುತ್ತಾರೆ. ಪುರಾತನ ದೇವಾಲಯ ಇದಾಗಿದ್ದು, ಮಂಗಳವಾರ ಮತ್ತು ಶನಿವಾರದಂದು ಸುತ್ತಮುತ್ತಲಿನ ಅನೇಕ ಭಕ್ತರು ವಿಶೇಷ ಪೂಜೆ ಸಲ್ಲಿಸುತ್ತಾರೆ. ಅಲ್ಲದೇ ಹರಕೆ ಕೂಡ ಕಟ್ಟಿಕೊಳ್ಳುತ್ತಾರೆ.
ಸೈರನ್ ಹಾಕಲು ಕಾರಣವೇನು?: ಹಲವು ವರ್ಷಗಳ ಹಿಂದೆ, ಈ ಮಾರ್ಗದಲ್ಲಿ ರೈಲ್ವೆ ಹಳಿ ನಿರ್ಮಿಸುವಾಗ ಹನುಮಾನ್ ಮೂರ್ತಿ ಸ್ಥಳಾಂತರಿಸಲು ಪ್ರಯತ್ನಿಸಲಾಯಿತು. ಆದರೆ, ಪದೇ ಪದೇ ಈ ಕೆಲಸಕ್ಕೆ ಅಡ್ಡಿಯಾದಾಗ ಬೇರೆ ದಾರಿ ಕಾಣದ ಅಧಿಕಾರಿಗಳು ಹಳಿಗಳನ್ನೇ ಬೇರೆಡೆ ತಿರುಗಿಸಬೇಕಾಯಿತು. ಅಂದಿನಿಂದ, ಈ ದೇವಾಲಯ ನಂಬಿಕೆ, ಪವಾಡ ಮತ್ತು ಸಂಪ್ರದಾಯದ ವಿಶಿಷ್ಟ ಸಂಕೇತವಾಗಿದೆ. ಇಲ್ಲಿ ಸ್ಥಾಪಿಸಲಾದ ಹನುಮಂತನ ಪ್ರತಿಮೆ ಬಹಳ ಪ್ರಾಚೀನವಾದದ್ದು, ನೆಲದಿಂದ ಸ್ವಯಂ ಉದ್ಭವ ಮೂರ್ತಿಯಾಗಿದೆ. ಈ ಪ್ರದೇಶದಲ್ಲಿ ರೈಲು ಹಳಿಗಳನ್ನು ಹಾಕುವ ಕೆಲಸ ಪ್ರಾರಂಭವಾದಾಗ, ಅಧಿಕಾರಿಗಳು ಮೂರ್ತಿಯನ್ನು ತೆಗೆದುಹಾಕಲು ಪ್ರಯತ್ನಿಸಿದರು. ಆದರೆ, ಪ್ರತಿ ಬಾರಿಯೂ ಕೆಲಸಕ್ಕೆ ಅಡ್ಡಿಯಾಯಿತು. ಹಲವು ಪ್ರಯತ್ನಗಳ ಹೊರತಾಗಿಯೂ, ಪ್ರತಿಮೆಯನ್ನು ತೆಗೆಯಲು ಸಾಧ್ಯವಾಗಲಿಲ್ಲ. ರೈಲ್ವೆ ಅಧಿಕಾರಿಗಳು ಕೊನೆಗೆ ಪ್ರತಿಮೆಯನ್ನು ತೆಗೆಯುವ ಆಲೋಚನೆ ಕೈಬಿಟ್ಟು ರೈಲು ಹಳಿಗಳನ್ನು ಬೇರೆಡೆಗೆ ತಿರುಗಿಸಿದರು. ಆ ದಿನದಿಂದ ದೇವಾಲಯದ ಪವಾಡ ಜನಪ್ರಿಯವಾಯಿತು. ಇಲ್ಲಿ ಹಾದುಹೋಗುವ ಪ್ರತಿಯೊಂದು ರೈಲು ಹಾರ್ನ್ ಹಾಕಿ ಮುಂದಕ್ಕೆ ಚಲಿಸುತ್ತವೆ. ಇದನ್ನು ಹನುಮಂತನಿಗೆ ಭಕ್ತಿ ವ್ಯಕ್ತಪಡಿಸುವ ಸಾಧನವೆಂದು ಪರಿಗಣಿಸಲಾಗಿದೆ. ಜನರ ಬಾಯಲ್ಲಿ ರೈಲ್ ವಾಲೆ ಹನುಮಾನ್ ಜಿ ದೇವಾಲಯ ಅಂತಲೇ ಉಳಿದುಕೊಂಡಿದೆ” ಎನ್ನುತ್ತಾರೆ ಅರ್ಚಕ ಅನೂಪ್ ಕೃಷ್ಣ ಶಾಸ್ತ್ರಿ.
ಭಕ್ತರಾದ ಪಂಕಜ್ ಮಾಲಿ ಅವರು ಮಾತನಾಡಿ, “ರೈಲು ಹಾರ್ನ್ ಬಾರಿಸದೆ ಹಾದುಹೋಗಲು ಪ್ರಯತ್ನಿಸಿದರೆ, ಅದು ತಾಂತ್ರಿಕ ದೋಷ ಅಥವಾ ಇನ್ನಾವುದೇ ಸಮಸ್ಯೆ ಎದುರಿಸುವ ಸಾಧ್ಯತೆ ಇರುತ್ತದೆ. ಇಂತಹ ಘಟನೆಗಳು ನಡೆದಿವೆ ಎಂದು ನಮ್ಮ ಹಿರಿಯರು ಹೇಳುತ್ತಾರೆ. ಹಾಗಾಗಿ ಎಲ್ಲ ರೈಲುಗಳು ಭಕ್ತಿ ರೂಪವಾಗಿ ಹಾರ್ನ್ ಹಾಕಿ ಮುಂದಕ್ಕೆ ಚಲಿಸುತ್ತವೆ” ಎಂದು ಹೇಳಿದರು.
