ಉದಯವಾಹಿನಿ, ನವದೆಹಲಿ: ರಾಜ್ಯಸಭೆಯಲ್ಲಿ ಪಕ್ಷದ ಉಪ ನಾಯಕನ ಸ್ಥಾನದಿಂದ ತೆಗೆದು ಹಾಕಿದ ಒಂದು ದಿನದ ನಂತರ ಆಮ್ ಆದ್ಮಿ(ಎಎಪಿ) ಸಂಸದ ರಾಘವ್ ಚಡ್ಡಾ ಅವರು ಇಂದು ವಿಡಿಯೋ ಮೂಲಕ ಮಾತನಾಡಿ, ನನ್ನನ್ನು ಮೌನಗೊಳಿಸಲಾಗಿದೆ, ಆದರೆ, ನಾನು ಸೋತಿಲ್ಲ ಎಂದು ಹೇಳಿದ್ದಾರೆ.
ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅವರು ನನಗೆ ಅವಕಾಶ ಸಿಕ್ಕಾಗಲೆಲ್ಲ ನಾನು ಸಂಸತ್ತಿನಲ್ಲಿ ಜನರಿಗೆ ಸಂಬಂಧಿಸಿದ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತುತ್ತೇನೆ. ಅದರಲ್ಲಿ ಹೆಚ್ಚಾಗಿ ಕಡೆಗಣಿಸಲ್ಪಡುವ ವಿಷಯಗಳು ಸೇರಿವೆ. ಜನರ ಸಮಸ್ಯೆಗಳ ಬಗ್ಗೆ ಮಾತನಾಡುವುದು ಅಪರಾಧವೇ? ನಾನೇನಾದರೂ ಅಪರಾಧ ಮಾಡಿದ್ದೇನೆಯೇ? ಎಂದಿರುವ ಚಡ್ಡಾ, ತಮ್ಮ ಪಕ್ಷದ ವಿರುದ್ಧವೂ ವಾಗ್ದಾಳಿ ನಡೆಸಿದರು. ರಾಜ್ಯಸಭೆಯಲ್ಲಿ ನನಗೆ ಮಾತನಾಡಲು ಅವಕಾಶ ನೀಡಬಾರದು ಎಂದು ಎಎಪಿ ಸಂಸತ್ತಿಗೆ ತಿಳಿಸಿದೆ. ನನ್ನ ಮೌನವನ್ನು ಸೋಲೆಂದು ಪರಿಗಣಿಸಬೇಡಿ ಎಂದು ನಾನು ಅವರಿಗೆ ಹೇಳಲು ಇಚ್ಚಿಸುತ್ತೇನೆ ಎಂದು ಚಡ್ಡಾ ಟೀಕಾಪ್ರಹಾರ ಮಾಡಿದರು. ಜನಸಾಮಾನ್ಯರಿಗೆ ಪ್ರಯೋಜನವಾಗುವ ಹಲವು ವಿಷಯಗಳನ್ನು ನಾನು ಎತ್ತಿದ್ದೇನೆ. ಅದು ಆಮ್ ಆದ್ಮಿ ಪಕ್ಷಕ್ಕೆ ಹೇಗೆ ಹಾನಿ ಮಾಡಿದೆ?. ಹೀಗಾಗಿ, ಯಾರೇ ಆದರೂ ನನ್ನನ್ನು ಮಾತನಾಡದಂತೆ ತಡೆಯಲು ಬಯಸುವುದೇಕೆ? ಎಂದು ಕೇಳಿದ್ದಾರೆ.
ರಾಜ್ಯಸಭೆಯಲ್ಲಿ ಪಕ್ಷದ ಉಪ ನಾಯಕ ಚಡ್ಡಾ ಅವರನ್ನು ತೆಗೆದು ಹಾಕುವಂತೆ ತಿಳಿಸಿ ಎಎಪಿ, ನಿನ್ನೆ ರಾಜ್ಯಸಭಾ ಕಾರ್ಯದರ್ಶಿಗೆ ಪತ್ರ ಬರೆದಿತ್ತು. ಅಲ್ಲದೇ ಈ ಹುದ್ದೆಗೆ ಪಕ್ಷದ ಪಂಜಾಬ್ ಸಂಸದ ಅಶೋಕ್ ಮಿತ್ತಲ್ ಅವರನ್ನು ನೇಮಕ ಮಾಡಿದೆ.
ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರ ಆಪ್ತರು ಎಂದೇ ಪರಿಗಣಿಸಲ್ಪಟ್ಟ ಮತ್ತು ದೇಶದ ಕಿರಿಯ ಸಂಸದರಲ್ಲಿ ಒಬ್ಬರಾದ ಚಡ್ಡಾ, ಪಕ್ಷದ ವ್ಯವಹಾರಗಳಲ್ಲಿ ವಿಶೇಷವಾಗಿ ಪಂಜಾಬ್‌ ಮತ್ತು ದೆಹಲಿಯಲ್ಲಿ ಎಎಪಿಯ ಅಧಿಕಾರವಧಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಚಡ್ಡಾ ಅವರು ದೆಹಲಿ ಮತ್ತು ಪಂಜಾಬ್ ರಾಜಕೀಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರೂ, ಇತ್ತೀಚಿನ ಮೌನ ಮತ್ತು ಪಕ್ಷದ ಪ್ರಮುಖ ಕಾರ್ಯಕ್ರಮಗಳಿಗೆ ಗೈರುಹಾಜರಿಯು ಅವರ ಮತ್ತು ಪಕ್ಷದ ನಡುವೆ ಎಲ್ಲವೂ ಸರಿಯಿಲ್ಲ ಎಂಬ ಊಹಾಪೋಹಗಳಿಗೆ ಕಾರಣವಾಗಿದೆ. ದೇಶದ ಅತ್ಯಂತ ಕಿರಿಯ ಸಂಸದರಲ್ಲಿ ಒಬ್ಬರಾದ ಚಡ್ಡಾ, ಪಂಜಾಬ್‌ ಮತ್ತು ದೆಹಲಿಯಲ್ಲಿ ಪಕ್ಷದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಆದರೆ, ಇತ್ತೀಚಿನ ದಿನಗಳಲ್ಲಿ ಇದು ಉಲ್ಟಾ ಆಗಿದೆ.

ಕೇಜ್ರಿವಾಲ್​ ಜೊತೆ ಮುನಿಸು? : ದೆಹಲಿ ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಆಗಿನ ದೆಹಲಿ ಮುಖ್ಯಮಂತ್ರಿಯಾಗಿದ್ದ ಅರವಿಂದ್​ ಕೇಜ್ರಿವಾಲ್ ಅವರನ್ನು ಬಂಧಿಸಿದಾಗ ಚಡ್ಡಾ ವೈದ್ಯಕೀಯ ಕಾರಣಗಳಿಗಾಗಿ ವಿದೇಶದಲ್ಲಿದ್ದರು. ಕೇಜ್ರಿವಾಲ್ ಸುಮಾರು 6 ತಿಂಗಳು ಜೈಲಲ್ಲಿದ್ದರೂ ಒಮ್ಮೆಯೂ ಭೇಟಿಯಾಗಿರಲಿಲ್ಲ. ಕೇಜ್ರಿವಾಲ್​ ಬಿಡುಗಡೆಯಾದ ಹಲವು ದಿನಗಳ ನಂತರ ಅವರನ್ನು ಭೇಟಿಯಾಗಿದ್ದರು.

Leave a Reply

Your email address will not be published. Required fields are marked *

error: Content is protected !!