ಉದಯವಾಹಿನಿ, ಸಾಗರ್ದಿಘಿ(ಪಶ್ಚಿಮ ಬಂಗಾಳ): ಪಶ್ಚಿಮ ಬಂಗಾಳದಲ್ಲಿ ವಿಧಾನಸಭಾ ಚುನಾವಣೆ ರದ್ದುಗೊಳಿಸಿ, ರಾಷ್ಟ್ರಪತಿ ಆಳ್ವಿಕೆ ಹೇರಲು ಬಿಜೆಪಿ ಯೋಜನೆ ರೂಪಿಸಿದೆ ಎಂದು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಆರೋಪಿಸಿದರು.
ಮುರ್ಷಿದಾಬಾದ್ ಜಿಲ್ಲೆಯಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಚುನಾವಣಾ ಆಯೋಗ ಎಸ್‌ಐಆರ್ ಕಾರ್ಯದಲ್ಲಿ ತೊಡಗಿರುವ ನ್ಯಾಯಾಂಗ ಅಧಿಕಾರಿಗಳನ್ನು ರಕ್ಷಿಸುವಲ್ಲಿ ವಿಫಲವಾಗಿದೆ ಎಂದು ಟೀಕಿಸಿದರು.
ವಿಧಾನಸಭಾ ಚುನಾವಣೆ ಘೋಷಣೆಯಾದ ನಂತರ ಚುನಾವಣಾ ಆಯೋಗ ನಾಗರಿಕ ಮತ್ತು ಪೊಲೀಸ್ ಆಡಳಿತದಲ್ಲಿ ತನ್ನದೇ ಆದ ಅಧಿಕಾರಿಗಳನ್ನು ನಿಯೋಜಿಸಿದ್ದು, ಆಯೋಗ ಕಾನೂನು ಮತ್ತು ಸುವ್ಯವಸ್ಥೆಯನ್ನು ನಿಯಂತ್ರಿಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ನನ್ನ ಎಲ್ಲಾ ಅಧಿಕಾರಗಳನ್ನು ಕಸಿದುಕೊಳ್ಳಲಾಗಿದೆ. ಈ ರೀತಿಯ ಚುನಾವಣಾ ಆಯೋಗವನ್ನು ನಾನು ಎಂದಿಗೂ ನೋಡಿಲ್ಲ. ಬಂಗಾಳದಲ್ಲಿ ವಿಧಾನಸಭಾ ಚುನಾವಣೆಯನ್ನು ರದ್ದುಗೊಳಿಸಿ ರಾಷ್ಟ್ರಪತಿ ಆಳ್ವಿಕೆ ಹೇರುವುದು ಬಿಜೆಪಿಯ ಯೋಜನೆ ಎಂದು ಟೀಕಿಸಿದ್ದಾರೆ.
ಮಾಲ್ಡಾದಲ್ಲಿ ನಡೆದ ಘಟನೆ ಬಿಜೆಪಿಯ ಗೇಮ್ ಪ್ಲಾನ್ ಎಂದು ಆರೋಪಿಸಿದ ಅವರು, ಮತದಾರರ ಪಟ್ಟಿಯಿಂದ ಹೆಸರುಗಳನ್ನು ಅಳಿಸಿ ಹಾಕಿದ್ದಕ್ಕಾಗಿ ಬುಧವಾರ ನಡೆದ ಪ್ರತಿಭಟನಾಕಾರರು ಹಲವಾರು ಗಂಟೆಗಳ ಕಾಲ ಘೇರಾವ್ ಮಾಡಿದ ನಂತರ, ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್)ಯಲ್ಲಿ ತೊಡಗಿದ್ದ ಏಳು ನ್ಯಾಯಾಂಗ ಅಧಿಕಾರಿಗಳನ್ನು ಭದ್ರತಾ ಪಡೆಗಳು 9 ಗಂಟೆಗಳ ಬಳಿಕ ರಕ್ಷಿಸಿದರು ಎಂದು ನಿನ್ನೆ ನಡೆದ ಘಟನೆಯನ್ನು ಮಮತಾ ಉಲ್ಲೇಖಿಸಿದರು.
ಚುನಾವಣಾ ಆಯೋಗ ಕಾನೂನು ಮತ್ತು ಸುವ್ಯವಸ್ಥೆ ನಿಯಂತ್ರಿಸಲು ಬಯಸುತ್ತಿದೆ. ಆದರೆ, ಅವರು ವಿಫಲರಾಗಿದ್ದಾರೆ. ನ್ಯಾಯಾಂಗ ಅಧಿಕಾರಿಗಳಿಗೆ ರಕ್ಷಣೆ ನೀಡುವಲ್ಲಿ ವಿಫಲರಾಗಿದ್ದಾರೆ. ರಾಜ್ಯದಲ್ಲಿ ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ನ್ಯಾಯಾಂಗ ಅಧಿಕಾರಿಗಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳುವುದು ಚುನಾವಣಾ ಆಯೋಗದ ಜವಾಬ್ದಾರಿ ಎಂದಿದ್ದಾರೆ.
ಮಮತಾ ಕ್ಷೇತ್ರದಲ್ಲಿ ಅಮಿತ್ ಶಾ ರೋಡ್ ಶೋ: ಮಮತಾ ಬ್ಯಾನರ್ಜಿ ಕ್ಷೇತ್ರ ಭವಾನಿಪುರದಲ್ಲಿ ಬೃಹತ್ ರೋಡ್ ಶೋ ನಡೆಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಂಗಾಳದ ಜನರು ಬದಲಾವಣೆ ಬಯಸುತ್ತಿದ್ದಾರೆ. ಮೋದಿ ನೇತೃತ್ವದಲ್ಲಿ ಬಿಜೆಪಿ ಸರ್ಕಾರ ರಚನೆಯಾಗಬೇಕು. ಬಂಗಾಳ ಮತ್ತು ದೇಶಾದ್ಯಂತ ಪ್ರತಿಯೊಬ್ಬ ಒಳನುಸುಳುಕೋರನನ್ನೂ ಹೊರಹಾಕಬೇಕು ಎಂದರು.
ಇಂದು ಬಂಗಾಳ ಸಂಕಷ್ಟದಲ್ಲಿದೆ. ಟಿಎಂಸಿ ಕಾರ್ಯಕರ್ತರ ಗೂಂಡಾಗಿರಿಯಿಂದ ಮಹಿಳೆಯರಿಗೆ ಭದ್ರತೆ ಇಲ್ಲದಂತಾಗಿದೆ. ಒಳನುಸುಳುಕೋರರ ಸಂಖ್ಯೆ ಅನಿಯಂತ್ರಿತವಾಗಿದೆ. ಭ್ರಷ್ಟಾಚಾರದಿಂದ ಜನರು ಸಂಕಷ್ಟಕ್ಕೆ ಒಳಗಾಗುತ್ತಿದ್ದಾರೆ ಎಂದು ಟಿಎಂಸಿ ವಿರುದ್ಧ ಹರಿಹಾಯ್ದರು.
