ಉದಯವಾಹಿನಿ, ಎಲೂರು (ಆಂಧ್ರ ಪ್ರದೇಶ): ಸಾಮಾನ್ಯವಾಗಿ ಎಳನೀರು ಮತ್ತು ತಾಜಾ ಹಣ್ಣಿನ ಜ್ಯೂಸ್ ಸೇವನೆ ವೇಳೆಯಲ್ಲಿ ದೈಹಿಕ ಆರೋಗ್ಯದ ಜೊತೆಗೆ ಪರಿಸರದ ಆರೋಗ್ಯದ ಕುರಿತು ಅನೇಕ ಜನರು ಕಾಳಜಿವಹಿಸುತ್ತಾರೆ. ಅದರಲ್ಲೂ ನಾವು ಬಳಕೆ ಮಾಡುವ ಪ್ಲಾಸ್ಟಿಕ್ ಸ್ಟ್ರಾಗಳು ಪ್ರಕೃತಿಗೆ ಹಾನಿ ಮಾಡುವ ಸಾಧ್ಯತೆ ಹೆಚ್ಚಿದೆ. ಇದೇ ಕಾರಣದಿಂದಾಗಿ ಇದಕ್ಕೆ ಸುಸ್ಥಿರ ಪರಿಹಾರ ಹುಡುಕುವ ನಿಟ್ಟಿನಲ್ಲಿ ಆಂಧ್ರ ಪ್ರದೇಶದ ಯುವ ಅವಿಷ್ಕಾರ ಯಶಸ್ವಿಯಾಗಿದ್ದಾರೆ. ಇದಕ್ಕಾಗಿ ಅವರು ಪ್ಲಾಸ್ಟಿಕ್ ಬದಲಾಗಿ, ಪರಿಸರ ಸ್ನೇಹಿಯಾದ ಪರ್ಯಾಯ ಸ್ಟ್ರಾಗಳನ್ನು ಅಭಿವೃದ್ಧಿಪಡಿಸಿದ್ದಾರೆ.
ಎಲೂರು ಜಿಲ್ಲೆಯ ಅವಕುರು ಗ್ರಾಮ ಮೂಲದ ವದ್ದಿ ಅಜಯ್ ಕುಮಾರ್ ಗ್ರಾಸಿಪ್ ಎಂಬ ಸ್ಟಾರ್ಟ್ ಅಪ್ ಹುಟ್ಟು ಹಾಕಿದ್ದಾರೆ. ಇದರ ಮುಖ್ಯ ಉದ್ದೇಶ ಜೈವಿಕ ವಿಘಟನೀಯ ಸ್ಟ್ರಾಗಳು ಅಂದರೆ, ಸುಲಭವಾಗಿ ಮಣ್ಣಿನಲ್ಲಿ ಕರಗಬಹುದಾದ ಸ್ಟ್ರಾಗಳು. ಇವುಗಳನ್ನು ನೈಸರ್ಗಿಕ ಹುಲ್ಲಿನಿಂದ ತಯಾರಿಸಲಾಗಿದೆ. ಇಂಜಿನಿಯರಿಂಗ್ ಪದವೀಧರರಾಗಿರುವ ಅಜಯ್, ದಶಕಗಳ ಡೇಟಾ ಸೈಂಟಿಸ್ಟ್ ಆಗಿ ಕೆಲಸ ನಿರ್ವಹಣೆ ಮಾಡಿದ್ದಾರೆ. ಇದಾದ ಬಳಿಕ ಅವರು ಸುಸ್ಥಿರ ಅವಿಷ್ಕಾರದತ್ತ ತಮ್ಮ ಗಮನವನ್ನು ಹರಿಸಿದ್ದಾರೆ. ಆರಂಭದಲ್ಲಿ 7 ಲಕ್ಷ ಹೂಡಿಕೆಯೊಂದಿಗೆ ಉದ್ಯಮ ಆರಂಭಿಸಿದ ಅವರು, ವಿಶೇಷ ತಳಿಯ ಹುಲ್ಲುಗಳ ಬೆಳೆದು ಅವುಗಳಿಂದ ಸ್ಟ್ರಾ ಉತ್ಪಾದನೆ ಮಾಡುತ್ತಾರೆ.
ಉಪಕ್ರಮಕ್ಕಾಗಿ ಕೃತಕ ಕೊಳ ನಿರ್ಮಿಸಿದ್ದು, ಅದರಲ್ಲಿ ನಿಯಂತ್ರಣ ಪರಿಸ್ಥಿತಿಯಲ್ಲಿ ಹುಲ್ಲುಗಳನ್ನು ಬೆಳೆಯಲಾಗುತ್ತಿದೆ. ಈ ಹುಲ್ಲುಗಳು ವರ್ಷಕ್ಕೆ ಒಂದೂವರೆ ಮೀಟರ್ ಉದ್ದ ಬೆಳೆಯುತ್ತದೆ. ಇದು ನೈಸರ್ಗಿಕವಾಗಿ ಟೊಳ್ಳಾದ ರಚನೆಯನ್ನು ಹೊಂದಿದ್ದು, ಸ್ಟ್ರಾ ಬಳಕೆಗೆ ಸೂಕ್ತವಾಗಿದೆ. ಕೊಯ್ಲು ಮಾಡಿದ ನಂತರ ಹುಲ್ಲನ್ನು ಶುದ್ಧ ನೀರಿನಿಂದ ಸ್ವಚ್ಛಗೊಳಿಸುವ, ನಂತರ ನೈರ್ಮಲ್ಯ ಮತ್ತು ಬಳಕೆಯ ಸುಲಭತೆಯನ್ನು ಖಚಿತಪಡಿಸಿಕೊಳ್ಳಲು ಕ್ರಿಮಿನಾಶಕ ಮತ್ತು ಒಣಗಿಸುವ ಮೂಲಕ ಎಚ್ಚರಿಕೆಯಿಂದ ಸಂಸ್ಕರಿಸಲಾಗುತ್ತದೆ.ಈ ಪ್ರಕ್ರಿಯೆ ಕುರಿತು ಮಾತನಾಡಿರುವ ಅಜಯ್, ಹೊಂದಾಣಿಕೆಯ ಪರಿಸ್ಥಿತಿಯ ಹೊರತಾಗಿ ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡುವ ಉದ್ದೇಶವನ್ನು ನಾನು ಹೊಂದಿದ್ದೆ. ನಿಸರ್ಗವೇ ಇದಕ್ಕೆ ನನಗೆ ಪರಿಹಾರ ನೀಡಿತು. ಇದನ್ನು ನಾವು ಎಚ್ಚರಿಕೆಯಿಂದ ಬಳಸಬೇಕಿದೆ ಎಂದರು.
ಈ ಅವಿಷ್ಕಾರವೂ ಕೇವಲ ಪರಿಸರ ಸ್ನೇಹಿ ಮಾತ್ರವಲ್ಲ, ಕಡಿಮೆ ವೆಚ್ಚದಾಯಕವೂ ಆಗಿದೆ. ಒಂದು ಎಕರೆ ಪ್ರದೇಶದಲ್ಲಿ 3 ಲಕ್ಷ ಸ್ಟ್ರಾಗಳನ್ನು ಉತ್ಪಾದಿಸಬಹುದಾಗಿದೆ. ಇದು ಪರಿಸರ ಸ್ನೇಹಿ ಮತ್ತು ಆರ್ಥಿಕ ಪ್ರಯೋಜನಕಾರಿಯಾಗಿದೆ. ಸುಸ್ಥಿರ ಜೀವನದ ಕುರಿತು ಅರಿವಿನೊಂದಿಗೆ ಈ ಉಪಕ್ರಮ ಉತ್ತೇಜಿಸಬೇಕಿದೆ. ಇದು ಪ್ಲಾಸ್ಟಿಕ್ ಸ್ಟ್ರಾ ತ್ಯಾಜ್ಯ ಕಡಿಮೆ ಮಾಡುವಲ್ಲಿ ಪ್ರಮುಖವಾಗಿದೆ.ಅಜಯ್ ಗ್ರಾಸಿಪ್ ಇಂದು ನೈಸರ್ಗಿಕ ಆಧಾರಿತ ಪರಿಹಾರವನ್ನು ಕಂಡುಕೊಳ್ಳುವ ಪರಿಸರವನ್ನು ರಕ್ಷಿಸುವ ಜೊತೆಗೆ ಜೀವನೋಪಾಯಕ್ಕೆ ಅವಕಾಶವನ್ನು ಒದಗಿಸುವಲ್ಲಿ ಪ್ರಮುಖ ಪಾತ್ರವಹಿಸಿದೆ.
