ಉದಯವಾಹಿನಿ, ಮೀರತ್(ಉತ್ತರ ಪ್ರದೇಶ): ನಕಲಿ ಮದ್ಯ ಸೇವಿಸಿ ಮೂವರು ಮೃತಪಟ್ಟಿರುವ ಘಟನೆ ಶುಕ್ರವಾರ ರಾತ್ರಿ ದೌರಾಲಾ ಕೊಟ್ವಾಲಿಯಲ್ಲಿ ನಡೆದಿದೆ. ಜಿತೇಂದ್ರ (45), ದೌಲತ್ (25) ಮತ್ತು ಬಾಬುರಾಮ್ ಮೃತರು. ಇಬ್ಬರು ನಕಲಿ ಮದ್ಯ ಸೇವಿಸಿದ ಕೆಲ ಸಮಯದಲ್ಲೇ ಮೃತಪಟ್ಟಿದ್ದರೆ, ಓರ್ವ ಚಿಕಿತ್ಸೆ ಪಡೆಯುತ್ತಿದ್ದಾಗ ಶನಿವಾರ ಸಾವನ್ನಪ್ಪಿದ್ದಾನೆ. ಮದ್ಯದ ಅಂಗಡಿ ಮತ್ತು ನಿರ್ದಿಷ್ಟ ಬ್ರ್ಯಾಂಡ್ ಬಗ್ಗೆ ಸಮಗ್ರ ವಿವರಗಳನ್ನು ಸಂಗ್ರಹಿಸುವ ಮೂಲಕ ಪೊಲೀಸ್ ತಂಡ ತನಿಖೆ ನಡೆಸುತ್ತಿದೆ.ದೌರಾಲಾ ಪಟ್ಟಣದಲ್ಲಿ ನಕಲಿ ಮದ್ಯ ಸೇವಿಸಿ ಮೂವರು ಯುವಕರು ಸಾವನ್ನಪ್ಪಿರುವ ಬಗ್ಗೆ ಮಾಹಿತಿ ಬಂದಿದೆ ಎಂದು ಸ್ಟೇಷನ್ ಹೌಸ್ ಆಫೀಸರ್ (ಎಸ್‌ಎಚ್‌ಒ) ಸುಮನ್ ಕುಮಾರ್ ಸಿಂಗ್ ಹೇಳಿದ್ದಾರೆ.
ಶುಕ್ರವಾರ ಸಂಜೆ ಪಟ್ಟಣದ ಮೂವರು ಒಟ್ಟಿಗೆ ಕುಳಿತು ಮದ್ಯ ಸೇವಿಸಿದ್ದರು ತನಿಖೆಯಿಂದ ತಿಳಿದುಬಂದಿದೆ. ಮದ್ಯ ಸೇವಿಸಿದ ಸ್ವಲ್ಪ ಸಮಯದ ನಂತರ ಮೂವರ ಆರೋಗ್ಯ ಇದ್ದಕ್ಕಿದ್ದಂತೆ ಹದಗೆಡಲು ಪ್ರಾರಂಭಿಸಿದೆ. ಮೂವರೂ ಪ್ರಜ್ಞೆ ಕಳೆದುಕೊಂಡು ಕುಸಿದು ಬಿದ್ದಿದ್ದಾರೆ. ಕುಟುಂಬಸ್ಥರು ತಕ್ಷಣವೇ ಹತ್ತಿರದ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದರು. ಅಲ್ಲಿ, ಪ್ರಥಮ ಚಿಕಿತ್ಸೆ ನೀಡಿದ ನಂತರ ವೈದ್ಯರು, ಹೆಚ್ಚಿನ ಚಿಕಿತ್ಸೆಗೆ ವೈದ್ಯಕೀಯ ಕೇಂದ್ರಕ್ಕೆ ರವಾನಿಸಿದರು. ಅಲ್ಲಿ ಜಿತೇಂದ್ರ ಮತ್ತು ದೌಲತ್ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ. ಕಳೆದ 24 ಗಂಟೆಗಳಿಂದ ವೆಂಟಿಲೇಟರ್‌ನಲ್ಲಿದ್ದ ಬಾಬುರಾಮ್ ಶನಿವಾರ ಸಾವನ್ನಪ್ಪಿದ್ದಾನೆ.
ಘಟನೆಯ ನಂತರ ಪೊಲೀಸ್ ಮತ್ತು ಆರೋಗ್ಯ ಇಲಾಖೆಯ ತಂಡಗಳನ್ನು ಕಾರ್ಯೋನ್ಮುಖಗೊಳಿಸಲಾಗಿದೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಮದ್ಯ ಖರೀದಿಸಿದ ಅಂಗಡಿ ಮತ್ತು ಅದರ ಬ್ರ್ಯಾಂಡ್ ಸೇರಿದಂತೆ ಪ್ರತಿಯೊಂದು ಆಯಾಮದಲ್ಲೂ ಪ್ರಕರಣದ ತನಿಖೆ ಮಾಡಲಾಗಿದೆ. ವಿಷಕಾರಿ ಅಥವಾ ಅವಧಿ ಮೀರಿದ ಮದ್ಯ ಎಂಬುದನ್ನು ದೃಢಪಡಿಸಲಾಗಿಲ್ಲ. ಮರಣೋತ್ತರ ಪರೀಕ್ಷೆಯ ವರದಿ ಮತ್ತು ತನಿಖಾ ವರದಿ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಎಸ್‌ಎಸ್‌ಪಿ ಅವಿನಾಶ್ ಪಾಂಡೆ ತಿಳಿಸಿದ್ದಾರೆ.
ವಿಷಪೂರಿತ ಮದ್ಯ ಸೇವಿಸಿ ಐವರು ಸಾವು: ಬಿಹಾರದ ಪೂರ್ವ ಚಂಪಾರಣ್ ಜಿಲ್ಲೆಯ ಮೋತಿಹಾರಿಯಲ್ಲಿ ಅನುಮಾನಾಸ್ಪದ ಸಾವುಗಳು ಸಂಚಲನ ಮೂಡಿಸಿವೆ. ವಿಷಪೂರಿತ ಮದ್ಯ ಸೇವಿಸಿ ಐವರು ಸಾವನ್ನಪ್ಪಿದ್ದರು. 15ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾಗಿದ್ದಾರೆ. ಆರು ಜನರು ದೃಷ್ಟಿ ಕಳೆದುಕೊಂಡಿದ್ದಾರೆ. ಎಲ್ಲ ಸಾವುಗಳು ಮದ್ಯದ ಕಾರಣದಿಂದಾಗಿ ಸಂಭವಿಸಿವೆ ಎಂದು ಮೋತಿಹಾರಿ ಎಸ್‌ಡಿಪಿಒ ಸದರ್ ದಿಲೀಪ್ ಕುಮಾರ್ ಅಧಿಕೃತವಾಗಿ ದೃಢಪಡಿಸಿದ್ದರು.ಮೃತರನ್ನು ತುರ್ಕೌಲಿಯಾ ಪೊಲೀಸ್ ಠಾಣೆ ಪ್ರದೇಶದ ನಿವಾಸಿ ಚಂದು (32), ತುರ್ಕೌಲಿಯಾ ಪೊಲೀಸ್ ಠಾಣೆ ಪ್ರದೇಶದ ನಿವಾಸಿ ಪ್ರಮೋದ್ ಯಾದವ್ (32), ಪರಿಕ್ಷನ್ ಮಾಝಿ (55) ಮತ್ತು ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದ ಹಿರಾಲಾಲ್ ಮಹಾತೋ ಎಂದು ಗುರುತಿಸಲಾಗಿದೆ. ಪ್ರಮೋದ್ ಯಾದವ್ ಅವರ ಸಹೋದರ ವಿನೋದ್ ಯಾದವ್, ತಮ್ಮ ಸಹೋದರ ಗ್ರಾಮದ ನಾಗಾ ರೈ ಅವರಿಂದ ಮದ್ಯ ಖರೀದಿಸಿದ್ದರು ಎಂದು ತಿಳಿದು ಬಂದಿದೆ.
