
ಉದಯವಾಹಿನಿ, ಇದೀಗ ಗೋಡಂಬಿ (Cashews) ಅಥವಾ ಗೇರುಬೀಜದ ಋತು. ಕರಾವಳಿ ಮತ್ತು ಮಲೆನಾಡಿನ ಹಲವಾರು ಕಡೆಗಳಲ್ಲಿ ಇಡೀ ಗುಡ್ಡಗಳೇ ಗೇರುಹಣ್ಣಿನ ಮರಗಳಿಂದ ತುಂಬಿ ಹೋಗಿರುವ ಸ್ಥಳಗಳು ಇನ್ನೂ ಇರಬಹುದು. ಭಾರತೀಯ ಅಡುಗೆಮನೆಗಳಲ್ಲಿ ಸಿಹಿ ಮತ್ತು ಖಾರ ತಿನಿಸುಗಳಿಗೆ ರುಚಿಗೆಂದೇ ಹಾಕುವ ಮುಖ್ಯ ವಸ್ತುಗಳಲ್ಲಿ ಗೋಡಂಬಿ ಅಥವಾ ಗೇರುಬೀಜ ಸಹ ಒಂದು. ಯಾವುದೇ ಬಗೆಯ ಅಡುಗೆಯ ರುಚಿ ಹೆಚ್ಚಿಸಬಲ್ಲ ಈ ಬೀಜಗಳ ಅಭಿಮಾನಿ ಬಳಗ ಇರುವಂತೆಯೇ ವಿರೋಧಿ ಬಳಗವೂ ಸಾಕಷ್ಟು ದೊಡ್ಡದೇ ಇದೆ. ಕಂಡ ಅಡುಗೆಗೆಲ್ಲಾ ಬಳಸುವುದೇ ಅಲ್ಲದೇ, ಸುಮ್ಮನೆ ಮೆಲ್ಲುವವರೂ ಸಾಕಷ್ಟು ಮಂದಿಯಿದ್ದಾರೆ. ಆದರೆ ಇದರಿಂದ ಅಲರ್ಜಿ ಹೆಚ್ಚುತ್ತದೆ, ತೂಕ ಏರುತ್ತದೆ, ಆರೋಗ್ಯಕ್ಕೆ ಹಿತವಲ್ಲ- ಇತ್ಯಾದಿ ಆರೋಪಗಳನ್ನು ಮಾಡುವವರೂ ಇಲ್ಲದಿಲ್ಲ. ಆದರೆ ಆಹಾರ ತಜ್ಞರ ಪ್ರಕಾರ, ಹಿತ-ಮಿತವಾಗಿ ಸೇವನೆ ಮಾಡುವುದರಿಂದ ಗೋಡಂಬಿ ಆರೋಗ್ಯಕ್ಕೆ ಲಾಭವನ್ನೇ ತರುತ್ತದೆ ಹೊರತು ತೊಂದರೆಯನ್ನಲ್ಲ. ಏನೀ ಗೊಂದಲಗಳು? ನೋಡೋಣ.
ಗೋಡಂಬಿಗಳು ತೂಕ ಹೆಚ್ಚಿಸುತ್ತವೆಯೇ?: ಹಾಗೇನಿಲ್ಲ. ಆದರೆ ಇದು ಹೆಚ್ಚಿನ ಕ್ಯಾಲರಿ ಹೊಂದಿರುವ ಆಹಾರ ಎಂಬುದರಲ್ಲಿ ಎರಡು ಮಾತಿಲ್ಲ. ಸುಮಾರು 100 ಗ್ರಾಂ ಗೋಡಂಬಿಯಲ್ಲಿ ಸುಮಾರು 550 ಕ್ಯಾಲರಿಗಳಿರುತ್ತವೆ. ಹಾಗಾಗಿ ಗೋಡಂಬಿ ಮಾತ್ರವೇ ಅಲ್ಲ, ಎಲ್ಲಾ ಬೀಜಗಳೂ ಕ್ಯಾಲರಿಯಲ್ಲಿ ಹೆಚ್ಚು ತೂಗುವುದರಿಂದ ಅವುಗಳನ್ನು ಅತ್ಯಂತ ಮಿತವಾದ ಪ್ರಮಾಣದಲ್ಲಿ ನಿತ್ಯದ ಆಹಾರದಲ್ಲಿ ಸೇರಿಸಿಕೊಳ್ಳಬೇಕಾಗುತ್ತದೆ. ಹಾಗೆ ನೋಡಿದರೆ, ಲೆಕ್ಕಾಚಾರದಲ್ಲಿ ಗೋಡಂಬಿ ತಿನ್ನುವುದರಿಂದ ತೂಕ ಇಳಿಸಲೂ ಸಾಧ್ಯವಿದೆ. ಕಾರಣ, ಇದರಲ್ಲಿರುವ ಮೊನೊಅನ್‌ಸ್ಯಾಚುರೇಟೆಡ್ ಕೊಬ್ಬಿನಿಂದಾಗಿ ಆರೋಗ್ಯಕ್ಕೆ ಲಾಭವಿದ್ದು, ಕೊಲೆಸ್ಟ್ರಾಲ್ ಕಡಿಮೆ ಮಾಡಲು ಸಾಧ್ಯವಿದೆ. ಇದರಿಂದ ದೇಹದ ಒಟ್ಟಾರೆ ಆರೋಗ್ಯದ ಮೇಲೆ ಪೂರಕ ಪರಿಣಾಮ ಬೀರುತ್ತದೆ.
ಗೋಡಂಬಿ ಸೇವನೆಯಿಂದ ಕೊಲೆಸ್ಟ್ರಾಲ್ ನಿಯಂತ್ರಣ ಕಷ್ಟವೇ?: ಇದೂ ಪೂರ್ಣ ನಿಜವಲ್ಲ. ಸಾಮಾನ್ಯವಾಗಿ ಸಸ್ಯಜನ್ಯ ಆಹಾರ ಗಳಿಂದ ಕೊಲೆಸ್ಟ್ರಾಲ್ ಹೆಚ್ಚುವುದಿಲ್ಲ; ಇದೇನಿದ್ದರೂ ಪ್ರಾಣಿಜನ್ಯ ಆಹಾರಗಳಿಂದಲೇ ಹೆಚ್ಚು. ಆದರೊಂದು, ಗೋಡಂಬಿಯಲ್ಲಿರುವ ಫೈಟೊಸ್ಟೆರಾಲ್‌ಗಳ ರಾಸಾಯನಿಕ ವಿನ್ಯಾಸ ಕೊಲೆ ಸ್ಟ್ರಾಲ್‌ನಂತೆಯೇ ಇದೆ. ಇದರಿಂದ ದೇಹದಲ್ಲಿ ಕೊಲೆಸ್ಟ್ರಾಲ್ ಮಟ್ಟದಲ್ಲಿ ಏರಿಕೆ ಆಗುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ದಿನಕ್ಕೆ 25 ಗ್ರಾಂ ಮೀರದಂತೆ ಗೋಡಂಬಿ ತಿನ್ನುವುದರಿಂದ, ದೇಹದಲ್ಲಿ ಎಲ್‌ಡಿಎಲ್ ಕಡಿಮೆ ಮಾಡಿ, ಎಚ್‌ಡಿಎಲ್ ಏರಿಸುವ ಕೆಲಸಕ್ಕೆ ಸಹಾಯ ದೊರೆಯುತ್ತದೆ.
