ಉದಯವಾಹಿನಿ, ಬೇಸಿಗೆಯಲ್ಲಿ ಬಾಯಾರಿಕೆ ತಣಿಸಿಕೊಳ್ಳುವುದಕ್ಕೆ ಒಳ್ಳೆಯ ಪೇಯಗಳ ಬಗ್ಗೆ ಹೇಳಿದರೂ ಬಾಯಾರಿಕೆ ಹೆಚ್ಚುತ್ತದೆ, ಅಂಥ ಬಿಸಿಲು ಹೊರಗೆ! ಅದರಲ್ಲೂ ಮನೆಯಿಂದ ಹೊರಗೆ ತಿರುಗಾಟದಲ್ಲಿದ್ದಾಗ, ಕೈಯಲ್ಲಿರುವ ನೀರೂ ಖಾಲಿಯಾದರೆ, ಬೇಸಿಗೆಯಲ್ಲಿ ಬೇರೆ ಶಾಪವೇ ಬೇಕಿಲ್ಲ. ದೇಹದ ನವರಂಧ್ರಗಳಿಂದ ಬೆವರಿಳಿಯುತ್ತಿರುವಾಗ ಯಾರಾದರೂ ಪುಣ್ಯಾತ್ಮರು ದೊಡ್ಡದೊಂದು ಗ್ಲಾಸ್ ತಂಪಾದ, ಸಿಹಿಯಾದ ಕಬ್ಬಿನ ಹಾಲು ತಂದುಕೊಟ್ಟರೆ? ಅವರ ಜನ್ಮ ಸವೆದರೂ ಮುಗಿಯದಷ್ಟು ಹರಸುತ್ತೇವೆ ಅವರನ್ನು. ಆ ಹೊತ್ತಿನ ದಾಹ ತಣಿಸುವುದಂತೂ ಸರಿ, ಅದಲ್ಲದೆ ಇನ್ನೇನೇನು ಲಾಭಗಳಿವೆ ಕಬ್ಬಿನ ಹಾಲು ಕುಡಿಯುವುದರಿಂದ ಎಂಬುದನ್ನು ತಿಳಿಯಬಹುದಲ್ಲ.
ಪ್ರತಿರೋಧ ಶಕ್ತಿ ಹೆಚ್ಚಳ: ಹೆಚ್ಚೇನು ಫ್ಯಾನ್ಸಿ ಮಾಡದ ಶುದ್ಧ ಕಬ್ಬಿನ ಹಾಲು ಕೆಲವು ಸಮಸ್ಯೆಗಳಿಗೆ ನೈಸರ್ಗಿಕ ಪರಿಹಾರ ಆಗಬಲ್ಲದು. ದೇಹದ ರೋಗ ನಿರೋಧಕ ಶಕ್ತಿಯನ್ನು ಚುರುಕು ಮಾಡಿ, ಸೋಂಕುಗಳಿಂದ ಕಾಪಾಡಬಲ್ಲದು. ಅದರಲ್ಲೂ ಈ ರಸದಲ್ಲಿರುವ ಎಲೆಕ್ಟ್ರೋಲೈಟ್ ಗಳಿಂದಾಗಿ ದಣಿದ, ಆಯಾಸಗೊಂಡ ದೇಹಕ್ಕೆ ಸಂಜೀವಿನಿ ಎನಿಸಬಲ್ಲದು. ಕಬ್ಬಿನ ರಸದಲ್ಲಿರುವ ಕಬ್ಬಿಣ, ಮೆಗ್ನೀಶಿಯಂ, ಕ್ಯಾಲ್ಶಿಯಂ ಮತ್ತು ಇತೆ ಸೂಕ್ಷ್ಮ ಪೋಷಕಾಂಶ ಗಳಿಂದಾಗಿ, ದೇಹದ ಪ್ರೊಟೀನ್ ಹೀರಿಕೊಳ್ಳುವ ಸಾಮರ್ಥ್ಯವೂ ಹೆಚ್ಚಿ, ಸಾಮಾನ್ಯ ಶೀತ-ಜ್ವರಗಳ ಬಾಧೆ ಕಡಿಮೆಯಾಗುತ್ತದೆ.
ಪಚನಕಾರಿ: ನಮ್ಮ ಜೀರ್ಣಾಂಗಗಳ ಹಿತ ಕಾಪಾಡುವಲ್ಲೂ ಕಬ್ಬಿನ ರಸದ್ದು ಶ್ಲಾಘನೀಯ ಕೆಲಸ. ಹೊಟ್ಟೆಯ ಪಿಎಚ್ ಮಟ್ಟವನ್ನು ಕಾಪಾಡಿಕೊಂಡು, ಆಹಾರ ಪಚನವಾಗುವುದಕ್ಕೆ ಬೇಕಾದ ಜೀರ್ಣ ರಸಗಳ ಬಿಡುಗಡೆಗೆ ನೆರವಾಗುತ್ತದೆ. ಇದರಿಂದಾಗಿ ಹೊಟ್ಟೆಯನ್ನು ಆಗಾಗ ಕಾಡುವ ಅಸಿಡಿಟಿ, ಹುಳಿತೇಗು ಮುಂತಾದ ಸಮಸ್ಯೆಗಳು ದೂರ ಉಳಿಯುತ್ತವೆ. ಕೆಲವರು ಇನ್ನೊಂದು ಹೆಜ್ಜೆ ಮುಂದೆ ಹೋಗಿ, ಕಬ್ಬಿನ ಹಾಲಿಗೆ ಶುಂಠಿ ರಸವನ್ನೂ ಸೇರಿಸಿಕೊಂಡು ಕುಡಿಯುವುದನ್ನು ಕಾಣಬಹುದು.ಮಧುಮೇಹ ನಿಯಂತ್ರಣ: ಹೌದೇಹೌದು! ಇಷ್ಟೊಂದು ಸಿಹಿಯಾದ ಪೇಯವನ್ನು ಮಧುಮೇಹಿಗಳು ಕುಡಿಯಬಹುದೇ, ಕುಡಿದರೆ ಆರೋಗ್ಯ ಏನಾದೀತು ಎಂಬ ಅನುಮಾನ ಬರುವುದು ಸಹಜವೇ. ಆದರೆ ಇದರ ಗ್ಲೈಸೆಮಿಕ್ ಇಂಡೆಕ್ಸ್ ಕಡಿಮೆಯೇ ಇದ್ದು, ರಕ್ತದಲ್ಲಿ ಸಕ್ಕರೆ ಅಂಶ ಏರುವಂತೆ ಮಾಡುವುದಿಲ್ಲ. ಹಾಗಾಗಿ ಮಧುಮೇಹಿಗಳೂ ಇದನ್ನು ಮಿತ ಪ್ರಮಾಣದಲ್ಲಿ ಕುಡಿಯಬಹುದು.
