ಉದಯವಾಹಿನಿ, ಮನೆಯ ಕುಂಡವೊಂದರಲ್ಲಿ ಬೆಳೆಸಿದರೆ ತನ್ನಿಂದ ತಾನೇ ಹಸಿರಾಗಿ ತೊನೆದಾಡುವಂಥ ಸೊಪ್ಪು ಪುದೀನಾ. ಯಾವುದೋ ಅಡುಗೆಗೆ, ಇನ್ಯಾವುದೋ ಔಷಧಿಗೆಲ್ಲ ಬೇಕೆಂದಾಗ ಮನೆಯಂಗಳದಲ್ಲಿ ಅಥವಾ ಬಾಲ್ಕನಿಯಲ್ಲಿ ದೊರೆಯುವಂತೆ ಮಾಡಿಕೊಳ್ಳುವುದು ಕಷ್ಟವಲ್ಲ. ಘಮಘಮಿಸುವ ಪುದೀನಾ ಎಲೆಗಳನ್ನು ಹಲವು ಔಷಧಗಳಿಗೂ ಉಪಯೋಗಿಸಲಾಗುತ್ತದೆ. ಪಲಾವ್, ಚಟ್ನಿಗಳಿಗೆ ಮಾತ್ರವಲ್ಲ ಪುದೀನಾ ಚಹಾ, ಕಾಕ್‌ಟೇಲ್ ಮತ್ತು ಕೆಲವು ಡೆಸೆರ್ಟ್‌ಗಳಿಗೂ ಬಳಕೆಯಾಗುತ್ತದೆ. ಬೇಸಗೆಯಲ್ಲಿ ತಂಪಾದ ಮಜ್ಜಿಗೆಗೆ ಪುದೀನಾ ಹಾಕಿ ಕುಡಿದರೆ ಅಡಿಯಿಂದ ಮುಡಿಯವರೆಗೆ ತಂಪಾದ ಅನುಭವವಾಗುವುದಿಲ್ಲವೇ? ಏನು ಈ ಮೂಲಿಕೆಯ ಸತ್ವಗಳು?
ಏನಿದೆ ಸತ್ವಗಳು?: ಹಲವು ರೀತಿಯ ಖನಿಜಗಳು ಮತ್ತು ಜೀವಸತ್ವಗಳಿಂದ ಪುದೀನಾ ಸಮೃದ್ಧವಾಗಿದೆ. ವಿಟಮಿನ್ ಎ ಮತ್ತು ಸಿ, ಕ್ಯಾಲ್ಶಿಯಂ, ಮೆಗ್ನೀಶಿಯಂ, ಕಬ್ಬಿಣ, ಪೊಟಾಶಿಯಂ, ಮ್ಯಾಂಗನೀಸ್‌ನಂಥ ಖನಿಜಗಳು ಇದರಲ್ಲಿ ಹೇರಳವಾಗಿವೆ. ಈ ಸತ್ವಗಳು ಜೀರ್ಣಾಂಗಗಳ ಕ್ಷಮತೆಯನ್ನು ಹೆಚ್ಚಿಸುತ್ತವೆ ಮತ್ತು ಮೆದುಳನ್ನು ಚುರುಕಾಗಿಸುತ್ತವೆ. ಜೊತೆಗೆ ಇದರಲ್ಲಿನ ಉತ್ಕರ್ಷಣ ನಿರೋಧಕಗಳು ದೇಹದಲ್ಲಿನ ಮುಕ್ತಕಣಗಳನ್ನು ನಿರ್ಬಂಧಿಸಿ, ಮಾರಕ ರೋಗಗಳ ಭೀತಿಯನ್ನು ದೂರ ಮಾಡುತ್ತವೆ.
ಮಧುಮೇಹಿಗಳಿಗೆ ಒಳ್ಳೆಯದು: ಪುದೀನಾದಲ್ಲಿರುವ ಫ್ಲೆವನಾಯ್ಡ್‌ಗಳು ಮತ್ತು ರೋಸ್ಮರಿನಿಕ್ ಆಮ್ಲವು ಉತ್ತಮ ಉತ್ಕರ್ಷಣ ನಿರೋಧಕಗಳಾಗಿವೆ. ದೇಹದಲ್ಲಿನ ಇನ್‌ಸುಲಿನ್ ಪ್ರತಿರೋಧಕತೆ ಕಡಿಮೆ ಮಾಡುವ ಸಾಧ್ಯತೆ ಈ ಅಂಶಗಳಿಗಿದೆ. ಆಹಾರ ಸೇವನೆಯ ನಂತರ ಮಧುಮೇಹಿಗಳಿಗೆ ಆಗಬಹುದಾದ ಗ್ಲೂಕೋಸ್ ಏರಿಳಿತವನ್ನು ನಿಯಂತ್ರಿಸಲು ಇದು ನೆರವಾಗುತ್ತದೆ. ವಿಟಮಿನ್ ಸಿ ಸಹ ಇರುವುದರಿಂದ ಉರಿಯೂತ ಶಮನಕ್ಕೆ ಈ ಎಲ್ಲ ಸತ್ವಗಳು ನೆರವು ನೀಡುತ್ತವೆ. ಮಧುಮೇಹಿಗಳಿಗೆ ಪೂರಕವಾದ ಅಂಶಗಳು ಇವೆಲ್ಲ. ನಾರು ಭರಪೂರ: ಉಳಿದೆಲ್ಲ ಹಸಿರು ಸೊಪ್ಪುಗಳಲ್ಲಿ ಇರುವಂತೆ ಇದರಲ್ಲೂ ನಾರಿನಂಶ ಯಥೇಚ್ಛವಾಗಿದೆ. ತೂಕ ಇಳಿಸುವವರಿಗೆ ಪುದೀನಾ ಚಹಾ, ಪುದೀನಾ ಮಜ್ಜಿಗೆಯಂಥ ಪೇಯಗಳು ಆರೋಗ್ಯಕರ ಆಯ್ಕೆಗಳು. ಮಧುಮೇಹಿಗಳಿಗೆ ಸಹ ನಾರುಭರಿತ ಆಹಾರ ಸೇವನೆಯಿಂದ ಅನುಕೂಲವಿದ್ದು, ಪುದೀನಾ ಚಟ್ಣಿಯಂಥವು ಎಲ್ಲರಿಗೂ ಆರೋಗ್ಯಕರ ಎನಿಸಿವೆ. ಬೇಸಿಗೆಯಲ್ಲಿ ಸಲಾಡ್‌ಗಳಿಗೆ ಇದನ್ನು ಸೇರಿಸುವುದರಿಂದ ರುಚಿಯನ್ನು ಸಹ ಹೆಚ್ಚಿಸಬಹುದು.
