ಉದಯವಾಹಿನಿ, ಗದಗ: ಮುದ್ರಣ ಕಾಶಿಗೂ ಯುದ್ಧದ ಕರಿನೆರಳು ಛಾಯೆ ಆವರಿಸಿದೆ. ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಏರಿಕೆಯಿಂದ ಪ್ರಿಂಟರ್ ಮತ್ತು ಪಬ್ಲಿಷರ್ಸ್ ತಲ್ಲಣಗೊಂಡಿದ್ದಾರೆ.ಜಿಲ್ಲೆಯಲ್ಲಿ ನೂರಾರು ಪ್ರಿಂಟಿಂಗ್ ಪ್ರೆಸ್‌ಗಳಿವೆ. ಜಾಗತಿಕ ಮಟ್ಟದಲ್ಲಿ ನಡೆಯುತ್ತಿರುವ ಯುದ್ಧದಿಂದ ಹಲವು ಉದ್ಯಮಗಳಂತೆ ಮುದ್ರಣಕಾಶಿಯ ಮೇಲೂ ಪರಿಣಾಮ ಬೀರಿದೆ. ಪ್ರಿಂಟಿಂಗ್ ಪ್ರೆಸ್‌ಗಳಿಗೆ ಬೇಕಾದ ಕಾಗದಗಳು, ಇಂಕ್, ಪ್ಲೇಟ್ ಸೇರಿದಂತೆ ಅನೇಕ ಪೆಟ್ರೋಲಿಯಂ ಪ್ರೊಡೆಕ್ಟ್ ಗಳ ಬೆಲೆ ಏರಿಕೆಯಾಗಿದೆ.
ಮುದ್ರಣ ಕಚ್ಚಾ ವಸ್ತುಗಳಿಗೆ ಶೇ.18 ರಷ್ಟು ಸರ್ಕಾರ ಜಿಎಸ್‌ಟಿ (GST) ವಿಧಿಸಿದೆ. ಟ್ಯಾಕ್ಸ್ ಹೊಡೆತದಿಂದ ಚೇತರಿಸಿಕೊಳ್ಳಬೇಕು ಅನ್ನುವಷ್ಟರಲ್ಲಿ ಯುದ್ಧದ ಎಫೆಕ್ಟ್‌ನಿಂದಾಗಿ ಕಚ್ಚಾ ವಸ್ತುಗಳ ಬೆಲೆ ದಿಢೀರ್ ಏರಿಕೆಯಾಗಿದೆ. ಇದು ಮುದ್ರಕರು ಹಾಗೂ ಪ್ರಕಾಶಕರಿಗೆ ಗಾಯದ ಮೇಲೆ ಬರೆ ಎಳೆದಂತಾಗುತ್ತಿದೆ ಎನ್ನುತ್ತಿದ್ದಾರೆ ಮುದ್ರಕರು. ಒಂದು ಕ್ವಿಂಟಾಲ್ ಕಾಗದಕ್ಕೆ 8 ರಿಂದ 10 ಸಾವಿರ ಹೆಚ್ಚಳವಾಗಿದೆ. ಮುಂಗಡ ಬುಕ್ಕಿಂಗ್ ಮಾಡಿದರೂ ಸಾಮಾಗ್ರಿಗಳ ವಿತರಣೆಯಾಗುತ್ತಿಲ್ಲ.ಪಂಚಾಂಗ, ಕ್ಯಾಲೆಂಡರ್, ಪಠ್ಯಪುಸ್ತಕ ಪ್ರಿಂಟ್ ಮಾಡುವ ಪ್ರಿಂಟರ್ಸ್ ಗೆ ಬೆಲೆ ಏರಿಕೆ ಅನಿವಾರ್ಯವಾಗಿದೆ.
