ಉದಯವಾಹಿನಿ, ಮಡಿಕೇರಿ: ಕೊಡಗಿನ ತಡಿಯಂಡಮೋಳ್ ಬೆಟ್ಟಕ್ಕೆ ಟ್ರೆಕ್ಕಿಂಗ್‌ಗೆ ತೆರಳಿದ್ದ ಕೇರಳದ ಮಹಿಳೆ ಶರಣ್ಯ (36) ನಾಪತ್ತೆ ಪ್ರಕರಣ ಸಂಬಂಧ 4ನೇ ದಿನವೂ ಶೋಧ ಕಾರ್ಯ ಮುಂದುವರಿದಿದೆ.
ಮಡಿಕೇರಿ ತಾಲ್ಲೂಕಿನ ಯವಕಪಾಡಿ ಗ್ರಾಮದ ಹೋಂಸ್ಟೇಯಲ್ಲಿ ತಂಗಿದ್ದ ಕೇರಳದ ಶರಣ್ಯ ಒಬ್ಬಂಟಿಯಾಗಿ ಟ್ರೆಕ್ಕಿಂಗ್‌ಗೆ ಬಂದಿದ್ದರೆಂದು ಪೋಲೀಸರು ತಿಳಿಸಿದ್ದಾರೆ. ಆನ್‌ಲೈನ್‌ನಲ್ಲಿ ಟಿಕೆಟ್ ಬುಕ್ಕಿಂಗ್ ಮಾಡಿಕೊಂಡಿದ್ದ ಶರಣ್ಯ ಚಾರಣಕ್ಕೆ ಒಬ್ಬರೇ ಬಂದಿದ್ದರು, ಒಬ್ಬರೇ ಹೋಗುವುದಾಗಿಯೂ ಹೇಳಿದ್ದರು. ಆದ್ರೆ ಈ ವ್ಯಾಪ್ತಿಯಲ್ಲಿ ಕಾಡಾನೆಗಳ ಹಾವಳಿ ಇರುವುದರಿಂದ ಬೇರೆ ಪ್ರವಾಸಿಗರ ಜೊತೆಯಲ್ಲಿ ಕಳುಹಿಸಲಾಗಿತ್ತು. ಬೆಟ್ಟಕ್ಕೆ ತೆರಳಿದ್ದ ಇತರ ಪ್ರವಾಸಿಗರು ಹಿಂತಿರುಗಿ ಬಂದರೂ ಶರಣ್ಯ ಹಿಂತಿರುಗಿ ಬಾರದ ಕಾರಣ ಅರಣ್ಯ ಇಲಾಖೆ ಸಿಬ್ಬಂದಿಗೆ ಸ್ಥಳೀಯರು ವಿಷಯ ತಿಳಿಸಿದ್ದರು. ಆ ದಿನ ಸಂಜೆ ಸ್ಥಳೀಯರು ಕುಡಿಯರ ಮುತ್ತಪ್ಪ ನೇತೃತ್ವದಲ್ಲಿ ಅರಣ್ಯ ಇಲಾಖೆ ಪೊಲೀಸ್ ಸಿಬ್ಬಂದಿ ಜೊತೆಗೂಡಿ ತಡರಾತ್ರಿಯವರೆಗೂ ಹುಡುಕಾಟ ನಡೆದ್ದರು. ಇಂದು ಶೋಧ ಕಾರ್ಯ ನಾಲ್ಕನೇ ದಿನಕ್ಕೆ ಕಾಲಿಟ್ಟಿದ್ದು, ಈವರೆಗೆ ಶರಣ್ಯ ಸುಳಿವು ಪತ್ತೆಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
