ಉದಯವಾಹಿನಿ, ಬೆಂಗಳೂರು: ಹಳೆಯ ವಾಹನಗಳಿಗೆ ಹೆಚ್ಎಸ್ಆರ್‌ಪಿ ಅಳವಡಿಕೆ ಕುರಿತು ಕರ್ನಾಟಕ ಸಾರಿಗೆ ಇಲಾಖೆ ಸ್ಪಷ್ಟನೆ ನೀಡಿದೆ. 2019ರ ಎಪ್ರಿಲ್ 1ಕ್ಕಿಂತ ಮುಂಚೆ ನೋಂದಾಯಿಸಲ್ಪಟ್ಟ ವಾಹನಗಳಿಗೆ ಹೆಚ್ಎಸ್ಆರ್‌ಪಿ ಕಡ್ಡಾಯವಲ್ಲ ಎಂಬ ಸುದ್ದಿ ಸತ್ಯಕ್ಕೆ ದೂರವಾದದ್ದು ಎಂದು ಎಂದು ಸಾರಿಗೆ ಇಲಾಖೆ ತಿಳಿಸಿದೆ.
2019ರ ಎಪ್ರಿಲ್ 1ಕ್ಕಿಂತಲೂ ಮೊದಲು ನೋಂದಾಯಿಸಲ್ಪಟ್ಟಿರುವ ಎಲ್ಲಾ ವಾಹನಗಳಿಗೆ ಹೆಚ್ಎಸ್ಆರ್‌ಪಿ ಅಳವಡಿಕೆ ಕಡ್ಡಾಯವಾಗಿದೆ ಎಂದು ಇಲಾಖೆ ದೃಢಪಡಿಸಿದೆ.1989ರ ಮೋಟಾರು ವಾಹನ ನಿಯಮ 50ರಡಿ ಕೇಂದ್ರ ಸರ್ಕಾರವು 2018ರ ಡಿಸೆಂಬರ್ 4ರಂದು ಅಧಿಸೂಚನೆ ಹೊರಡಿಸಿ, 2019ರ ಎಪ್ರಿಲ್ 1ರ ಮುಂಚೆ ನೋಂದಾಯಿಸಲ್ಪಟ್ಟ ಎಲ್ಲಾ ವಾಹನಗಳಿಗೆ ಹೆಚ್ಎಸ್ಆರ್‌ಪಿ ಅಳವಡಿಕೆ ಕಡ್ಡಾಯಗೊಳಿಸಿತ್ತು. ಅದರಂತೆ, ಕರ್ನಾಟಕ ಸರ್ಕಾರವು 2023ರ ಆಗಸ್ಟ್ 17ರಂದು ರಾಜ್ಯ ಅಧಿಸೂಚನೆ ಹೊರಡಿಸಿ, ಇದೇ ನಿಯಮವನ್ನು ಜಾರಿಗೆ ತಂದಿದೆ. ಕರ್ನಾಟಕ ಉಚ್ಚ ನ್ಯಾಯಾಲಯವು ಈ ಪ್ರಕರಣದಲ್ಲಿ ರಾಜ್ಯವು ತುರ್ತು ಕ್ರಮ ಕೈಗೊಳ್ಳಬಾರದು ಎಂದು ತಾತ್ಕಾಲಿಕ ಆದೇಶ ನೀಡಿದ್ದರೂ, ಹೆಚ್ಎಸ್ಆರ್‌ಪಿ ಅಳವಡಿಕೆಗೆ ಸಂಬಂಧಿಸಿದ ಅಧಿಸೂಚನೆಗೆ ಯಾವುದೇ ತಡೆಯಾಜ್ಞೆ ಇಲ್ಲ. ಸಾರ್ವಜನಿಕರು ತಮ್ಮ ವಾಹನಗಳಿಗೆ ಹೆಚ್ಎಸ್ಆರ್‌ಪಿ ಅಳವಡಿಸುವುದು ಕಡ್ಡಾಯವಾಗಿದೆ.
ಹೆಚ್ಎಸ್ಆರ್‌ಪಿ ಎಂಬುದು ವಾಹನಗಳಿಗೆ ಅಳವಡಿಸುವ ವಿಶೇಷ ರೀತಿಯ ನಂಬರ್ ಪ್ಲೇಟ್. ಇವು ಸಾಮಾನ್ಯ ಫಲಕಗಳಿಗಿಂತ ಹೆಚ್ಚು ಸುರಕ್ಷಿತವಾಗಿದ್ದು, ನಕಲಿ ಫಲಕಗಳನ್ನು ತಡೆಯಲು ಹಾಗೂ ವಾಹನಗಳ ಗುರುತಿನ ಖಚಿತತೆ ಹೆಚ್ಚಿಸಲು ವಿನ್ಯಾಸಗೊಳಿಸಲಾಗಿದೆ. ಈ ಫಲಕಗಳಲ್ಲಿ ಲೇಸರ್ ಕೋಡ್, ಕ್ರೋಮ್-ಬೇಸ್ ಹೋಲೋಗ್ರಾಮ್, ಶಾಶ್ವತ ಅಳವಡಿಕೆ ವ್ಯವಸ್ಥೆ ಇರುತ್ತದೆ. ಇದರಿಂದ ಫಲಕವನ್ನು ಸುಲಭವಾಗಿ ತೆಗೆದು ಹಾಕಲು ಸಾಧ್ಯವಿಲ್ಲ. ಪ್ರತಿಯೊಂದು ಫಲಕಕ್ಕೂ ವಿಶಿಷ್ಟ ಗುರುತಿನ ಸಂಖ್ಯೆ ಇರುತ್ತದೆ. ಇವುಗಳ ಅಳವಡಿಕೆ ಮೂಲಕ ರಸ್ತೆ ಸುರಕ್ಷತೆ ಹೆಚ್ಚುವುದು, ವಾಹನ ಕಳ್ಳತನ ತಡೆಯುವುದು ಹಾಗೂ ಟ್ರಾಫಿಕ್ ನಿಯಂತ್ರಣ ವ್ಯವಸ್ಥೆ ಸುಧಾರಿಸುವುದು ಸರ್ಕಾರದ ಉದ್ದೇಶವಾಗಿದೆ. ಆದ್ದರಿಂದ, ಹೊಸದಾಗಲಿ ಹಳೆಯದಾಗಲಿ ಎಲ್ಲಾ ವಾಹನಗಳಿಗೆ ಹೆಚ್ಎಸ್ಆರ್‌ಪಿ ಅಳವಡಿಕೆ ಕಡ್ಡಾಯವಾಗಿದೆ. ನಿಮ್ಮ ಬಳಿ ಇರುವ ವಾಹನದ ನಂಬರ್ ಪ್ಲೇಟ್ ಮೇಲೆ ಸ್ಟಿಕ್ಕರ್ ರೀತಿಯ ನಂಬರ್ ಪ್ಲೇಟ್ ಇಲ್ಲದಿದ್ದರೆ ಈ ಹೈ-ಸೆಕ್ಯೂರಿಟಿ ರಿಜಿಸ್ಟ್ರೇಶನ್ ಪ್ಲೇಟ್ ಹಾಕಬೇಕಾಗುತ್ತೆ. ಅಲ್ಯೂಮಿನಿಯಂ ಲೋಹದಿಂದ ತಯಾರಾದ ಪ್ಲೇಟ್ ಇದಾಗಿರುತ್ತದೆ. ಈ ಪ್ಲೇಟ್‌ಗಳಲ್ಲಿ ಇಂಗ್ಲಿಷ್ ಅಕ್ಷರಗಳು ಹಾಗೂ ನಂಬರ್‌ಗಳು ಉಬ್ಬಿಕೊಂಡಿರುವ ರೀತಿ ಅಚ್ಚಾಗಿರುತ್ತೆ. ಈ ಪ್ಲೇಟ್ ಅಳವಡಿಸುವಾಗ ಎರಡು ಲಾಕ್ ಪಿನ್‌ಗಳನ್ನು ಅಳವಡಿಸಿಲಾಗುತ್ತದೆ. ಪೇಪರ್‌ಗಳ ಸ್ಟೆಪ್ಲರ್ ಪಿನ್ ಮಾಡುವಾಗ ಪಂಚ್ ಮಾಡುವ ರೀತಿ ಈ ಪ್ಲೇಟ್ ಅನ್ನು ವಾಹನಕ್ಕೆ ಅಂಟಿಸಿರುತ್ತಾರೆ.
