ಉದಯವಾಹಿನಿ, ಪಾಟ್ನಾ (ಬಿಹಾರ): ಭಾರತದ ಚುನಾವಣಾ ಆಯೋಗ, ಕಂಟ್ರೋಲರ್ ಮತ್ತು ಆಡಿಟರ್ ಜನರಲ್ (ಸಿಎಜಿ) ಮತ್ತು ಹಣಕಾಸು ಆಯೋಗದಂತಹ ಸಾಂವಿಧಾನಿಕ ಸಂಸ್ಥೆಗಳು ಸ್ವತಂತ್ರವಾಗಿರಬೇಕು” ಎಂದು ಮುಂದಿನ ವರ್ಷ ಭಾರತದ ಮೊದಲ ಮಹಿಳಾ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಆಗಬಹುದಾದ ಸುಪ್ರೀಂ ಕೋರ್ಟ್ ಹಾಲಿ ನ್ಯಾಯಮೂರ್ತಿಗಳಾದ ಬಿ.ವಿ. ನಾಗರತ್ನ ಅವರು ಹೇಳಿದ್ದಾರೆ.

“ಸಂವಿಧಾನದ ಬಲವು ಅದು ಖಾತರಿಪಡಿಸುವ ಹಕ್ಕುಗಳಲ್ಲಿ ಮಾತ್ರವಲ್ಲದೇ, ಅದರ ಸಾಂಸ್ಥಿಕ ರಚನೆಯು ಎಷ್ಟು ದೃಢವಾಗಿದೆ ಎಂಬುದರ ಮೇಲಿದೆ” ಎಂದು ಪಾಟ್ನಾದ ಚಾಣಕ್ಯ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯದಲ್ಲಿ (ಸಿಎನ್‌ಎಲ್‌ಯು) ಇಂದು (ಶನಿವಾರ) ನಡೆದ ಕಾರ್ಯಕ್ರಮದಲ್ಲಿ ಅವರು ಅಭಿಪ್ರಾಯಪಟ್ಟರು.
“ಚುನಾವಣೆಗಳು ಪಾರದರ್ಶಕವಾಗಿರಬೇಕು. ಚುನಾವಣೆಗಳನ್ನು ನಡೆಸುವವರು (ಇಸಿಐ) ಸ್ಪರ್ಧಿಸುವವರ ಮೇಲೆ ಅವಲಂಬಿತರಾಗಿದ್ದರೆ, ಪ್ರಕ್ರಿಯೆಯ ತಟಸ್ಥತೆಯ ಮೇಲೆಯೇ ಪ್ರಶ್ನೆ ಮೂಡಲಿದೆ” ಎಂದರು.

ಈ ತಿಂಗಳ ಕೊನೆಯಲ್ಲಿ ಅಸ್ಸಾಂ, ಪಶ್ಚಿಮ ಬಂಗಾಳ, ತಮಿಳುನಾಡು ಮತ್ತು ಕೇರಳ ಮತ್ತು ಕೇಂದ್ರಾಡಳಿತ ಪ್ರದೇಶವಾದ ಪುದುಚೇರಿಯಲ್ಲಿ ವಿಧಾನಸಭಾ ಚುನಾವಣೆಗಳು ನಡೆಯಲಿದ್ದು, ಚುನಾವಣೆಗೆ ಮುನ್ನ ಪಶ್ಚಿಮ ಬಂಗಾಳದಲ್ಲಿ ಹಿಂಸಾಚಾರ ನಡೆಯುತ್ತಿರುವ ನಡುವೆ ಅವರ ಈ ಹೇಳಿಕೆ ಮಹತ್ವ ಪಡೆದುಕೊಂಡಿದೆ.”ದೇಶದಲ್ಲಿ ಪ್ರಜಾಪ್ರಭುತ್ವ ಪ್ರಕ್ರಿಯೆಯ ಸಮಗ್ರತೆಯನ್ನು ಕಾಪಾಡುವ ಅಗತ್ಯವಿದೆ. ಅಧಿಕಾರ ಮತ್ತು ಆಡಳಿತ ಕಾನೂನುಬದ್ಧವಾಗಿದ್ದರೂ, ಅದು ಯಾವಾಗಲೂ ಜನರಿಗೆ ಉತ್ತರದಾಯಿಯಾಗಿರಬೇಕು” ಎಂದು ಅವರು ಪ್ರತಿಪಾದಿಸಿದರು.”ಕೇಂದ್ರ ಮತ್ತು ರಾಜ್ಯಗಳು ಮತ್ತು ರಾಜ್ಯ – ರಾಜ್ಯಗಳ ನಡುವಿನ ವಿವಾದಗಳನ್ನು ಸಾಂವಿಧಾನಿಕ ಧರ್ಮ ಮತ್ತು ಒಕ್ಕೂಟ ವ್ಯವಸ್ಥೆಯ ನಡುವೆ ಸೌಹಾರ್ದಯುತವಾಗಿ ಇತ್ಯರ್ಥಪಡಿಸಿಕೊಳ್ಳಬೇಕು. ರಾಜ್ಯಗಳು ಸಂವಿಧಾನದ ಸಮನ್ವಯ ಘಟಕಗಳೇ ಹೊರತು, ಕೇಂದ್ರಕ್ಕೆ ಅಧೀನವಾಗಿಲ್ಲ” ಎಂದು ಅವರು ಹೇಳಿದರು.ಅಧಿಕಾರದ ಉದ್ದಗಲದ ಬಗ್ಗೆ ಮಾತನಾಡಿದ ನಾಗರತ್ನ ಅವರು, “ಶಾಸಕಾಂಗ ಮತ್ತು ಕಾರ್ಯಾಂಗದ ಹೊಣೆಗಾರಿಕೆ ನ್ಯಾಯಾಂಗ ಪರಿಶೀಲನೆಗೆ ಒಳಪಟ್ಟಿರುತ್ತದೆ. ನ್ಯಾಯಾಂಗದ ಹೊಣೆಗಾರಿಕೆ ಸಾಂವಿಧಾನಿಕ ಪರಧಿಯಲ್ಲಿ ನೆಲೆಗೊಂಡಿದೆ” ಎಂದು ನ್ಯಾಯಾಧೀಶರು, ಅಧಿಕಾರಿಗಳು, ವಕೀಲರು, ಕಾನೂನು ವಿದ್ಯಾರ್ಥಿಗಳು, ಸಿಎನ್‌ಎಲ್‌ಯು ಅಧ್ಯಾಪಕರು ಮತ್ತು ಬುದ್ಧಿಜೀವಿಗಳು ಇದ್ದ ಸಭೆಯಲ್ಲಿ ಹೇಳಿದರು.

Leave a Reply

Your email address will not be published. Required fields are marked *

error: Content is protected !!