ಉದಯವಾಹಿನಿ, ನವದೆಹಲಿ: ದೇಶದ ರಾಜಧಾನಿಯಲ್ಲಿ ಎಲ್‌ಪಿಜಿ ನಿರಂತರ ಕೊರತೆಯು ಕಾರ್ಮಿಕರ ಬೃಹತ್ ಪಲಾಯನಕ್ಕೆ ಕಾರಣವಾಗಿದೆ. ಈ ಕಾರ್ಮಿಕರು ಇತರ ನಗರಗಳಿಗೆ ಅಥವಾ ತಮ್ಮ ಸ್ವಗ್ರಾಮಗಳಿಗೆ ವಲಸೆ ಹೋಗುತ್ತಿದ್ದಾರೆ.ಮುಖ್ಯ ಸಮಸ್ಯೆ ಏನೆಂದರೆ, ಅವರು ತಮ್ಮ ವಸತಿ ಪ್ರದೇಶಗಳಲ್ಲಿ ಅಡುಗೆ ಮಾಡಿಕೊಂಡು ತಿನ್ನಲು ಸಾಧ್ಯವಾಗುತ್ತಿಲ್ಲ. ಗ್ಯಾಸ್ ಕೊರತೆಯಿಂದಾಗಿ ಸಾಮಾನ್ಯ ಜನರಿಗೆ ಅಡುಗೆ ಮಾಡುವ ಹಲವು ಸಣ್ಣ ತಿಂಡಿ – ಊಟದ ಹೋಟೆಲ್‌ಗಳು ಮುಚ್ಚುವಂತಾಗಿದೆ. ದೆಹಲಿಯಿಂದ ಹೊರಡುತ್ತಿರುವ ಅನೇಕರು ಹೇಳುವಂತೆ, ಬ್ಲಾಕ್​ ಮಾರ್ಕೆಟ್​ ನಲ್ಲಿಗ್ಯಾಸ್ ಬೆಲೆ ಅತ್ಯಂತ ಹೆಚ್ಚಾಗಿದೆ. ಇದು ಸಣ್ಣ ಹೋಟೆಲ್​ – ಅಂಗಡಿಗಳ ಜನರನ್ನು ಸಂಕಷ್ಟಕ್ಕೆ ದೂಡಿದೆ.
ಈ ಅಡುಗೆ ಗ್ಯಾಸ್ ಕೊರತೆಗೆ ಇರಾನ್-ಇಸ್ರೇಲ್-ಅಮೆರಿಕ ನಡುವಿನ ಯುದ್ಧವೇ ಮುಖ್ಯ ಕಾರಣ ಎಂದು ಹೇಳಲಾಗುತ್ತಿದೆ. ಗ್ಯಾಸ್ ಏಜೆನ್ಸಿಗಳ ಹೊರಗೆ ದೀರ್ಘ ಸರತಿ ಸಾಲುಗಳು ಸಾಮಾನ್ಯವಾಗಿ ಕಂಡುಬರುತ್ತಿವೆ. ಈಗ ದೆಹಲಿಯಿಂದ ಕಾರ್ಮಿಕ ವರ್ಗವು ವಲಸೆ ಹೋಗುತ್ತಿದೆ. ಬಹುತೇಕ ಕಾರ್ಮಿಕರು ಸಣ್ಣ ಗ್ಯಾಸ್ ಸಿಲಿಂಡರ್‌ಗಳಲ್ಲಿ ಅಡುಗೆ ಮಾಡುತ್ತಾರೆ ಮತ್ತು ಅವುಗಳನ್ನು ರೀಫಿಲ್ ಮಾಡಿಸುತ್ತಾರೆ.

ದೆಹಲಿಯ ಹಜರತ್ ನಿಜಾಮುದ್ದೀನ್ ರೈಲ್ವೆ ನಿಲ್ದಾಣದಲ್ಲಿ ಅನೇಕರು ತಮ್ಮ ಗ್ರಾಮಗಳಿಗೆ ಹಿಂತಿರುಗುತ್ತಿರುವ ದೃಶ್ಯ ಕಂಡು ಬಂತು. ಇವರೆಲ್ಲರ ಮೊಗದಲ್ಲಿ ತುಂಬಾ ದುಃಖ ಇತ್ತು. ಈ ಬಗ್ಗೆ ಮಾತನಾಡಿರುವ ಸೂರಜ್ ಸಿಂಗ್, ನಾವು ಮಧ್ಯಪ್ರದೇಶದ ನಮ್ಮ ಗ್ರಾಮಕ್ಕೆ ಹೋಗುತ್ತಿದ್ದೇವೆ, ಏಕೆಂದರೆ ದೆಹಲಿಯಲ್ಲಿ ಗೃಹ ಬಳಕೆಯ ಗ್ಯಾಸ್ ಸಿಗುತ್ತಿಲ್ಲ. ಬ್ಲ್ಯಾಕ್​​​​​​​​ ನಲ್ಲಿ ಸಿಲಿಂಡರ್​ ರೀಫಿಲ್ ಮಾಡಿಸಲು ಹೋದರೆ, ಹಿಂದೆ ಕೆಜಿಗೆ ರೂ. 100 ಇದ್ದ ಗ್ಯಾಸ್ ಈಗ ರೂ. 200 ಆಗಿದೆ. ಅದೂ ಸುಲಭವಾಗಿ ಸಿಗುತ್ತಿಲ್ಲ. ಮನೆಯಲ್ಲಿ ಏನು ಅಡುಗೆ ಮಾಡುವುದು? ಮಕ್ಕಳು ಏನು ತಿನ್ನುವುದು? ಎಂಬ ಪ್ರಶ್ನೆಯಿದೆ ಎಂದು ಅವರು ಹೇಳಿದರು. ಆದ್ದರಿಂದ ಅವರ ಸಂಪೂರ್ಣ ಕುಟುಂಬವೇ ಸ್ವಗ್ರಾಮಕ್ಕೆ ಹೊರಟಿದೆ.

ಇನ್ನೊಬ್ಬ ಪ್ರಯಾಣಿಕ ಹಿಮಾಂಶು ತಮ್ಮ ಅಳಲು ತೋಡಿಕೊಂಡಿದ್ದು, ನನ್ನ ಸಹೋದರಿಯ ಮದುವೆಯಿದೆ, ಆದರೆ ಅಗತ್ಯ ಸಂಖ್ಯೆಯಲ್ಲಿ ಸಿಲಿಂಡರ್‌ಗಳು ಸಿಗುತ್ತಿಲ್ಲ. ಹೀಗಾಗಿ ಅನಿವಾರ್ಯವಾಗಿ ಊರಿಗೆ ಹೋಗುತ್ತಿದ್ದೇವೆ ಎಂದರು.

ಆಟೋ ಚಾಲಕ ಲಲ್ಲನ್ ಸಿಂಗ್​ ಮಾತನಾಡಿ, ಪ್ರತಿದಿನ ನಾನು 5 ರಿಂದ 6 ಪ್ರಯಾಣಿಕರನ್ನು ಅವರ ಮನೆಗೆ ಬಿಡುತ್ತಿದ್ದೇನೆ. ಎಲ್‌ಪಿಜಿ ಲಭ್ಯತೆಯ ಸಮಸ್ಯೆಯಿಂದಾಗಿ ಅವರು ಹೋಗುತ್ತಿದ್ದಾರೆ. ಗ್ಯಾಸ್ ಸಿಲಿಂಡರ್‌ಗಳು ತುಂಬಾ ದುಬಾರಿಯಾಗಿವೆ, ಸಾಮಾನ್ಯ ಜನರಿಗೆ ತಲುಪುವುದೇ ಇಲ್ಲ ಎಂದರು. ಜನರು ಕೆಜಿಗೆ ರೂ. 400 ವರೆಗೂ ಖರ್ಚು ಮಾಡಬೇಕಾಗುತ್ತಿದೆ ಎಂದು ಅವರು ತಿಳಿಸಿದರು. ಇಂತಹ ಪರಿಸ್ಥಿತಿಯಲ್ಲಿ ಜನರು ಗ್ರಾಮಕ್ಕೆ ಹಿಂತಿರುಗುವುದನ್ನೇ ಆದ್ಯತೆ ನೀಡುತ್ತಿದ್ದಾರೆ.ಹಜರತ್ ನಿಜಾಮುದ್ದೀನ್, ಆನಂದ್ ವಿಹಾರ್, ನವದೆಹಲಿ ಮತ್ತು ಹಳೆಯ ದೆಹಲಿ ರೈಲ್ವೆ ನಿಲ್ದಾಣಗಳಿಂದಲೂ ಜನರು ಹೀಗೆ ಹೊರಡುತ್ತಿರುವುದು ಕಂಡುಬರುತ್ತಿದೆ ಎಂದು ಇದೇ ವೇಳೆ ತಿಳಿಸಿದರು.

Leave a Reply

Your email address will not be published. Required fields are marked *

error: Content is protected !!