ಉದಯವಾಹಿನಿ, ಉನಾ (ಹಿಮಾಚಲ ಪ್ರದೇಶ): ಮಾಜಿ ಯೋಧನೊಬ್ಬ ತನ್ನ ತೋಟದಿಂದ ಪೇರಲ ಹಣ್ಣು ಕಿತ್ತ ಆರು ವರ್ಷದ ಬಾಲಕಿಯನ್ನು ಹಿಡಿದು ತನ್ನ ಮನೆಯ ಮೆಟ್ಟಿಲಿನ ಕಂಬಿಗೆ ಹಗ್ಗದಿಂದ ಬಿಗಿದು ಹಿಂಸಿಸಿದ್ದಾನೆ. ಹಿಮಾಚಲ ಪ್ರದೇಶದ ಉನಾ ಜಿಲ್ಲೆಯ ಬಹ್ದ್ಲಾ ಗ್ರಾಮದಲ್ಲಿ ಭಾನುವಾರ ಈ ಅಮಾನವೀಯ ಘಟನೆ ನಡೆದಿದೆ. ಪೊಲೀಸ್ ಅಧಿಕಾರಿಗಳು ಇದನ್ನು ದೃಢಪಡಿಸಿದ್ದಾರೆ.
ಬಾಲಕಿ ಅಳುವುದನ್ನು ಗಮನಿಸಿದ ದಾರಿಹೋಕ ಯುವಕರು ಮೊಬೈಲ್ ಫೋನ್‌ನಲ್ಲಿ ದೃಶ್ಯವನ್ನು ಚಿತ್ರೀಕರಿಸಿದ್ದು, ವಿಡಿಯೋ ವ್ಯಾಪಕವಾಗಿ ವೈರಲ್ ಆಗಿದೆ. ನಂತರ ಬಾಲಕಿಯನ್ನು ರಕ್ಷಿಸಲಾಗಿದ್ದು, ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ತನ್ನ ಮನೆಯ ಮೆಟ್ಟಿಲುಗಳಿಗೆ ಕಟ್ಟಿಹಾಕಿ, ಬಾಲಕಿ ಮೇಲೆ ಹಲ್ಲೆ ನಡೆಸಿದ ಗಂಭೀರ ಆರೋಪ ಮಾಜಿ ಸೈನಿಕನ ಮೇಲಿದೆ. ಆರೋಪಿಯನ್ನು ಇಂದು (ಸೋಮವಾರ) ಪೊಲೀಸರು ಮತ್ತು ಮಕ್ಕಳ ಕಲ್ಯಾಣ ಸಮಿತಿ ವಿಚಾರಣೆಗೆ ಕರೆಸಿದೆ. ಅಧಿಕಾರಿ ತನ್ನ ಕ್ರಮಕ್ಕೆ ಕ್ಷಮೆ ಕೇಳುತ್ತಿರುವ ಮತ್ತೊಂದು ವಿಡಿಯೋ ಇಂದು ಹೊರಬಿದ್ದಿದೆ.
ದುಷ್ಕೃತ್ಯದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ತನಿಖೆ ಕೈಗೊಂಡಿದ್ದಾರೆ.
ಮರ್ಚೆಂಟ್ ನೇವಿ ಕ್ಯಾಪ್ಟನ್ ರೋಹಿತ್ ಜಸ್ವಾಲ್ ಎಂಬವರು ಬಾಲಕಿಯನ್ನು ಮನೆಯೊಳಗಿನ ಮೆಟ್ಟಿಲುಗಳಿಗೆ ಕಟ್ಟಿಹಾಕಿರುವುದನ್ನು ನೋಡಿ ತಕ್ಷಣ ಮಧ್ಯಪ್ರವೇಶಿಸಿದಾಗ ಘಟನೆ ಬೆಳಕಿಗೆ ಬಂದಿದೆ.
ಜಸ್ವಾಲ್ ಅವರು ಬಾಲಕಿಯನ್ನು ಬಿಡುಗಡೆ ಮಾಡುವಂತೆ ಮಾಜಿ ಸೈನಿಕನನ್ನು ಕೇಳಿಕೊಂಡಿದ್ದಾರೆ. ಆದರೆ ಆತ ನಿರಾಕರಿಸಿದ್ದಾನೆ. ನಂತರ, ಕೆಲವು ಯುವಕರು ಬಾಲಕಿಯನ್ನು ಮನೆಯಲ್ಲಿ ಕಟ್ಟಿಹಾಕಿರುವುದನ್ನು ವಿಡಿಯೋ ರೆಕಾರ್ಡ್ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಇನ್ನೊಂದೆಡೆ, ತನ್ನ ತೋಟದಿಂದ ಪೇರಲ ಕದ್ದಿದ್ದಕ್ಕಾಗಿ ಶಿಕ್ಷೆ ನೀಡಿದ್ದೇನೆ ಎಂದು ಮಾಜಿ ಯೋಧ ಸಮರ್ಥನೆ ನೀಡುತ್ತಿರುವುದನ್ನು ಗಮನಿಸಬಹುದು. ಬಾಲಕಿ ಅಳುತ್ತಾ, ನನ್ನನ್ನು ರಕ್ಷಿಸಿ ಎಂದು ಪರಿಪರಿಯಾಗಿ ವಿಡಿಯೋ ಚಿತ್ರೀಕರಿಸುತ್ತಿರುವ ದಾರಿಹೋಕನಲ್ಲಿ ಬೇಡಿಕೊಳ್ಳುತ್ತಿರುವುದನ್ನೂ ಕಾಣಬಹುದು.
ನಂತರ ಜಸ್ವಾಲ್ ಆರೋಪಿಯಿಂದ ಬಾಲಕಿಯನ್ನು ರಕ್ಷಿಸಿ, ಸುರಕ್ಷಿತವಾಗಿ ಆಕೆಯ ಮನೆಗೆ ಕರೆದೊಯ್ದಿದ್ದಾರೆ. ಇದೇ ವೇಳೆ ತಕ್ಷಣವೇ ಪೊಲೀಸರು ಮತ್ತು ಮಕ್ಕಳ ಸಹಾಯವಾಣಿಗೂ ಮಾಹಿತಿ ನೀಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಮಕ್ಕಳ ಸಹಾಯವಾಣಿ ತಂಡ ಸ್ಥಳಕ್ಕೆ ಬಂದಾಗ, ಮಾಜಿ ಯೋಧ ತಕ್ಷಣ ತನ್ನ ಕೃತ್ಯಕ್ಕೆ ಕ್ಷಮೆ ಕೇಳಿದ್ದಾನೆ.
ಈ ವಿಷಯವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಲಾಗಿದೆ. ಉಪ ಆಯುಕ್ತ (ಡಿಸಿ) ಜತಿನ್ ಲಾಲ್ ಮತ್ತು ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಸಚಿನ್ ಹಿರೇಮಠ್ ಅವರು ಶೀಘ್ರವಾಗಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ನಿರ್ದೇಶನ ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್) ಮತ್ತು ಬಾಲ ನ್ಯಾಯ (ಮಕ್ಕಳ ಆರೈಕೆ ಮತ್ತು ರಕ್ಷಣೆ) ಕಾಯ್ದೆಯ ಸಂಬಂಧಿತ ಕಂಗಳಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಈ ಕುರಿತು ಸಂಪೂರ್ಣ ತನಿಖೆ ನಡೆಯುತ್ತಿದೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಸ್‌ಪಿ ಹೇಳಿದ್ದಾರೆ.
