ಉದಯವಾಹಿನಿ, ಜಮ್ಮು: ಜಮ್ಮು ಮತ್ತು ಶ್ರೀನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ (ಎನ್‌ಹೆಚ್-44) ಸೋಮವಾರ ನಸುಕಿನ ಜಾವ ಭಾರಿ ಭೂಕುಸಿತ ಉಂಟಾಗಿದೆ. ಪರಿಣಾಮ ಸದ್ಯಕ್ಕೆ ಹೆದ್ದಾರಿಯಲ್ಲಿ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ನೂರಾರು ವಾಹನ ಸವಾರರು ಸಿಲುಕಿಕೊಂಡಿದ್ದು, ಅವರ ರಕ್ಷಣಾ ಕಾರ್ಯ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇಂದು ಬೆಳಗಿನ ಜಾವ 3 ಗಂಟೆ ಸುಮಾರಿಗೆ ರಾಂಬನ್ ಜಿಲ್ಲೆಯ ಕರೋಲ್ ಪುಲ್ ಮತ್ತು ಚಂದ್ರಕೋಟ್ ನಡುವೆ ಭಾರಿ ಗಾತ್ರದ ಕಲ್ಲುಗಳು ಮತ್ತು ಮಣ್ಣು ಕುಸಿದಿದ್ದು, ಹೆದ್ದಾರಿಯ ಎರಡೂ ಬದಿಗಳು ಸಂಪೂರ್ಣವಾಗಿ ಮುಚ್ಚಲ್ಪಟ್ಟಿವೆ. ಜಮ್ಮುವಿನಿಂದ ಶ್ರೀನಗರ ಮತ್ತು ಶ್ರೀನಗರದಿಂದ ಜಮ್ಮುವಿಗೆ ಬರುವ ಎಲ್ಲಾ ವಾಹನಗಳನ್ನು ದಾರಿಯಲ್ಲೇ ನಿಲ್ಲಿಸಲಾಗಿದೆ. ಸದ್ಯ ಯಾವುದೇ ಸಂಚಾರಕ್ಕೆ ಅವಕಾಶವಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಹರಿದಾಡುವ ಸುದ್ದಿಗಳನ್ನು ನಂಬಬೇಡಿ. ಪ್ರಯಾಣಿಕರು ತಮ್ಮ ಪ್ರಯಾಣಕ್ಕೂ ಮುನ್ನ ಸಂಬಂಧಪಟ್ಟ ಅಧಿಕಾರಿಗಳು ನೀಡುವ ಇತ್ತೀಚಿನ ಮಾಹಿತಿಯನ್ನು ಪಡೆಯುವಂತೆ ಅಧಿಕಾರಿಗಳು ಸಾರ್ವಜನಿಕರಿಗೆ ಸೂಚನೆ ನೀಡಿದ್ದಾರೆ.ಮಣ್ಣು ತೆರವು ಕಾರ್ಯಾಚರಣೆ ನಡೆಯುತ್ತಿದೆ. ಸಂಬಂಧ ಇಲಾಖೆಯ ಅಧಿಕಾರಿಗಳು ಸ್ಥಳದಲ್ಲಿದ್ದು ಪರಿಶೀಲಿಸುತ್ತಿದ್ದಾರೆ. ಆದರೂ, ನಿರಂತರ ಬಂಡೆಗಳು ಬೀಳುತ್ತಿರುವುದರಿಂದ ಮಣ್ಣು ತೆರವು ಕಾರ್ಯಾಚರಣೆಯ ಮೇಲೆ ಪರಿಣಾಮ ಬೀರುತ್ತಿದೆ. ಪರಿಸ್ಥಿತಿ ಸಾಮಾನ್ಯ ಸ್ಥಿತಿಗೆ ಬರುವವರೆಗೆ ಅನಗತ್ಯ ಪ್ರಯಾಣವನ್ನು ತಪ್ಪಿಸುವಂತೆ ಸಂಚಾರ ಅಧಿಕಾರಿಗಳು ಪ್ರಯಾಣಿಕರಿಗೆ ಮನವಿ ಮಾಡಿದ್ದಾರೆ.

ಭೂಕುಸಿತದ ಪರಿಣಾಮ ಹೆದ್ದಾರಿಯಲ್ಲಿ (NH-44) ಕರೋಲ್ ಸೇತುವೆ ಮತ್ತು ಚಂದರ್ ಕೋಟ್ ನಡುವಿನ ರಸ್ತೆಯನ್ನು ಮುಚ್ಚಲ್ಪಟ್ಟಿವೆ. ತೆರವು ಕಾರ್ಯ ಪ್ರಗತಿಯಲ್ಲಿದೆ ಎಂದು ಜಮ್ಮು ಮತ್ತು ಕಾಶ್ಮೀರ ಸಂಚಾರ ಪೊಲೀಸರು ಅಧಿಕೃತ ಎಕ್ಸ್​ ಖಾತೆಯಲ್ಲಿ ಪೋಸ್ಟ್​ ಮಾಡಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ ರಾಂಬನ್‌ ಉಪ ಸಂಚಾರ ನಿರೀಕ್ಷಕ (ಡಿಟಿಐ) ವಿನಯ್ ಗುಪ್ತಾ ಮಾತನಾಡಿ, “ಮಧ್ಯಾಹ್ನ 12:30ರ ಸುಮಾರಿಗೆ ಪುನಃ ಭಾರಿ ಭೂಕುಸಿತ ಸಂಭವಿಸಿದ್ದು, ಹೆದ್ದಾರಿಯಲ್ಲಿ ದೊಡ್ಡ ಅಡಚಣೆ ಉಂಟಾಗಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಹೆದ್ದಾರಿಯನ್ನು ಆದಷ್ಟು ಬೇಗ ಪ್ರಯಾಣಿಕರ ಪ್ರಯಾಣಕ್ಕೆ ಅನುವು ಮಾಡಲು ಪ್ರಯತ್ನಿಸುತ್ತಿದೆ. ಸ್ಥಳದಲ್ಲಿ ಭಾರಿ ಯಂತ್ರೋಪಕರಣಗಳು ಮಣ್ಣು ತೆರವು ಕಾರ್ಯಾಚರಣೆಯಲ್ಲಿ ತೊಡಗಿವೆ. ದಯವಿಟ್ಟು ಯಾವುದೇ ವದಂತಿಗಳಿಗೆ ಗಮನ ಕೊಡಬೇಡಿ. ಕಾರ್ಯಾಚರಣೆ ಬಳಿಕ ಪ್ರಯಾಣಿಕರು ಅಧಿಕಾರಿಗಳು ನೀಡುವ ಮಾಹಿತಿಯನ್ನು ಪಡೆದುಕೊಂಡ ಬಳಿಕವೇ ಪ್ರಯಾಣಿಸಬೇಕು. ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಮಾಹಿತಿ ನೀಡಲಾಗುವುದು. ಸಾಧ್ಯವಾದಷ್ಟು ರಾತ್ರಿ ಪ್ರಯಾಣ ಮಾಡದಿರಿ” ಎಂದು ಮನವಿ ಮಾಡಿದರು.

Leave a Reply

Your email address will not be published. Required fields are marked *

error: Content is protected !!