ಉದಯವಾಹಿನಿ, ಅಲ್ವಾರ್(ರಾಜಸ್ಥಾನ): ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಯಲ್ಲಿ ದಾಖಲಾಗಿರುವ ತನ್ನ ತಾಯಿಯನ್ನು ನೋಡಿಕೊಳ್ಳುವಾಗ ಆರೋಗ್ಯಕರ ಆಹಾರ ಸಿಗುವ ಬಗ್ಗೆ ರಾಜ್‌ಪಾಲ್ (ಹೆಸರು ಬದಲಾಯಿಸಲಾಗಿದೆ) ಚಿಂತಿತರಾಗಿದ್ದರು. “ನನ್ನ ಬಳಿಯಿರುವ ಸ್ವಲ್ಪ ಹಣದಿಂದ ನಿಭಾಯಿಸಬೇಕೆಂದು ನಾನು ಭಾವಿಸಿದ್ದೆ. ಆದರೆ ಕೆಲವು ಸ್ವಯಂಸೇವಕರು ರೋಗಿಯನ್ನು ನೋಡಿಕೊಳ್ಳಲು ಇರುವ ಕುಟುಂಬಸ್ಥರಿಗೆ ಆಹಾರವನ್ನು ವಿತರಿಸುವುದನ್ನು ನಾನು ನೋಡಿದೆ. ರುಚಿಕರವಾದ ಮತ್ತು ಪೌಷ್ಟಿಕವಾದ ಆಹಾರ ನನಗೆ ಈಗ ಆಸ್ಪತ್ರೆ ಆವರಣದಲ್ಲಿ ಸಿಗುತ್ತದೆ ಎನ್ನುತ್ತಾರೆ ರಾಜ್‌ಪಾಲ್.
ರೋಗಿಯ ಕುಟುಂಬಸ್ಥೆ ಸೌಮ್ಯ (ಹೆಸರು ಬದಲಾಯಿಸಲಾಗಿದೆ) ಮಾತನಾಡಿ, ಆಸ್ಪತ್ರೆಯಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡುವ ಪ್ರತಿಯೊಬ್ಬರೂ ದಿನಕ್ಕೆ ಒಂದು ಬಾರಿಯಾದರೂ ಉತ್ತಮ ಊಟವನ್ನು ಮಾಡುವಂತೆ ನೋಡಿಕೊಳ್ಳುತ್ತಿರುವ ಸ್ವಯಂಸೇವಕರ ಕಾರ್ಯವನ್ನು ಶ್ಲಾಘಿಸಿದರು.
ರಾಜ್‌ಪಾಲ್ ಅಥವಾ ಸೌಮ್ಯ ಅವರು ಮಾತ್ರವಲ್ಲ, ಬೀದಿಗಳಲ್ಲಿ ಮತ್ತು ಆಸ್ಪತ್ರೆ ಆವರಣದಲ್ಲಿರುವ ನೂರಾರು ಮಂದಿ ಸ್ವಯಂಸೇವಕರು ಉಚಿತವಾಗಿ ವಿತರಿಸುವ ಆಹಾರವನ್ನು ಅವಲಂಬಿಸಿದ್ದಾರೆ. ಸ್ವಯಂಸೇವಕರ ಈ ಸೇವೆ ಸುಮಾರು 600 ದಿನಗಳಿಂದ ಸತತವಾಗಿ ನಡೆಯುತ್ತಿದೆ. 022ರ ವರೆಗೆ ಸ್ವಯಂಸೇವಕರ ಗುಂಪು ಪ್ರಾಣಿ ಪಕ್ಷಿಗಳಿಗೆ ಆಹಾರ ಮತ್ತು ನೀರನ್ನು ನೀಡುವ ಜವಾಬ್ದಾರಿಯನ್ನು ಸ್ವತಃ ವಹಿಸಿಕೊಂಡಿತ್ತು. ಆದರೆ ಕ್ರಮೇಣ ಆ ಪ್ರಯತ್ನವು ಸಮುದಾಯ ಸೇವೆಯಾಗಿ ವಿಸ್ತರಿಸಿತು. 2023ರಲ್ಲಿ ಗುಂಪು ಅಲ್ವಾರ್‌ನ ಬೀದಿಗಳಲ್ಲಿ ಆಹಾರ ತಯಾರಿಸಿ ಮತ್ತು ವಿತರಿಸಲು ಪ್ರಾರಂಭಿಸಿದರು. ಅದರೆ ಆರಂಭದಲ್ಲಿ, ವಾರಕ್ಕೊಮ್ಮೆ ಊಟವನ್ನು ತಯಾರಿಸಲಾಗುತ್ತಿತ್ತು. ಇದು ಸುಮಾರು 50 ವಾರಗಳವರೆಗೆ ಮುಂದುವರೆಯಿತು. ಆದರೆ ಬೇಡಿಕೆ ಹೆಚ್ಚಾದಂತೆ, ವಾರಕ್ಕೆ ಎರಡು ಬಾರಿ ಆಹಾರ ವಿತರಿಸಲಾಗುತ್ತಿತ್ತು ಮತ್ತು ಅಂತಿಮವಾಗಿ ಪ್ರತಿ ದಿನ ವಿತರಿಸಲು ಆರಂಭಿಸಲಾಯಿತು. ಇಂದು, ದಿನಕ್ಕೆ ಎರಡು ಬಾರಿ ಬೆಳಗ್ಗೆ 11.30ರ ಸುಮಾರಿಗೆ ಮತ್ತು ಸಂಜೆ 7 ಗಂಟೆಗೆ ಆಹಾರ ವಿತರಿಸಲಾಗುತ್ತಿದೆ.
