
ಉದಯವಾಹಿನಿ, ನವದೆಹಲಿ: ಮಹಿಳಾ ಮೀಸಲಾತಿಯಲ್ಲಿ ಮುಸ್ಲಿಮ್ ಮಹಿಳೆಯರಿಗೂ ಮೀಸಲಾತಿ ನೀಡಬೇಕೆಂದು ಸಮಾಜವಾದಿ ಪಕ್ಷ ಆಗ್ರಹಿಸಿದೆ. ಲೋಕಸಭೆಯಲ್ಲಿ ನಡೆದ ಚರ್ಚೆಯ ವೇಳೆ ಎಸ್‌ಪಿ ಸಂಸದ ಧರ್ಮೇಂದ್ರ ಯಾದವ್ ಅವರು ಮಹಿಳಾ ಮೀಸಲಾತಿಯಲ್ಲಿ ಮುಸ್ಲಿಂ ಮಹಿಳೆಯರಿಗೂ ಪ್ರತ್ಯೇಕ ಕೋಟಾ ಇರಬೇಕು ಎಂದು ಒತ್ತಾಯಿಸಿದರು. ಇದಕ್ಕೆ ಉತ್ತರಿಸಿದ ಗೃಹ ಸಚಿವ ಅಮಿತ್ ಶಾ, ಭಾರತದ ಸಂವಿಧಾನವು ಧರ್ಮದ ಆಧಾರದ ಮೇಲೆ ಮೀಸಲಾತಿ ನೀಡಲು ಅನುಮತಿಸುವುದಿಲ್ಲ. ಮುಸ್ಲಿಮರಿಗೆ ಅಂತಹ ಮೀಸಲಾತಿ ನೀಡುವುದು ಅಸಂವಿಧಾನಿಕ ಎಂದು ಹೇಳಿದರು.
ಈ ವೇಳೆ ಎಸ್‌ಪಿ ಮುಖ್ಯಸ್ಥ ಅಖಿಲೇಶ್ ಯಾದವ್ ಅವರು, ದೇಶದ ಒಟ್ಟು ಜನಸಂಖ್ಯೆಯಲ್ಲಿ ಮುಸ್ಲಿಂ ಮಹಿಳೆಯರು ಅರ್ಧದಷ್ಟು ಭಾಗವಾಗಿಲ್ಲವೇ? ಅವರಿಗೆ ಯಾಕೆ ಪ್ರತ್ಯೇಕ ಮೀಸಲಾತಿ ಇಲ್ಲ ಎಂದು ಪ್ರಶ್ನಿಸಿದರು.
ಈ ಪ್ರಶ್ನೆಗೆ ಧರ್ಮದ ಆಧಾರದ ಮೇಲೆ ಮುಸ್ಲಿಮರಿಗೆ ಯಾವುದೇ ರೀತಿಯ ಮೀಸಲಾತಿ ನೀಡುವುದು ಭಾರತದ ಸಂವಿಧಾನಕ್ಕೆ ವಿರುದ್ಧವಾಗಿದೆ ಎಂದು ಅಮಿತ್ ಶಾ(Amit Shah) ಸ್ಪಷ್ಟಪಡಿಸಿದರು. ಅಮಿತ್ ಶಾ ಉತ್ತರಕ್ಕೆ ಸಮಾಜವಾದಿ ಪಕ್ಷದ ಸಂಸದರು ಮುಸ್ಲಿಂ ಮಹಿಳೆಯರಿಗೆ ಪ್ರತ್ಯೇಕ ಕೋಟಾ ಇರಬೇಕು ಎಂದು ಒತ್ತಾಯಿಸಿದಾಗ, ವಿರೋಧ ಪಕ್ಷಗಳು ಕೇವಲ ಓಲೈಕೆ ರಾಜಕಾರಣಕ್ಕಾಗಿ ಈ ಬೇಡಿಕೆಯನ್ನು ಇಡುತ್ತಿವೆ. ಎಸ್‌ಪಿಗೆ ಅಷ್ಟೊಂದು ಆಸಕ್ತಿಯಿದ್ದರೆ ತನ್ನ ಪಾಲಿನ ಎಲ್ಲಾ ಚುನಾವಣಾ ಟಿಕೆಟ್‌ಗಳನ್ನು ಮುಸ್ಲಿಂ ಮಹಿಳೆಯರಿಗೇ ನೀಡಲಿ, ಅದಕ್ಕೆ ನಮ್ಮ ಅಭ್ಯಂತರವಿಲ್ಲ ಎಂದು ತಿರುಗೇಟು ನೀಡಿದರು. ಈ ಸಂದರ್ಭದಲ್ಲಿ ಈಗ ನಾವು ನಡೆಸುತ್ತಿರುವುದು ಮನೆ ಮನೆ ಗಣತಿ ಇದರಲ್ಲಿ ಜಾತಿ ಗಣತಿ ನಡೆಯುವುದಿಲ್ಲ. 2027 ರ ಜನಗಣತಿಯು ಜಾತಿ ಆಧಾರಿತ ಗಣತಿಯನ್ನೂ ಒಳಗೊಂಡಿರುತ್ತದೆ ಅಮಿತ್ ಶಾ ಅವರು ಸಂಸತ್ತಿಗೆ ಭರವಸೆ ನೀಡಿದರು. ಲೋಕಸಭೆಯಲ್ಲಿ ಸಂವಿಧಾನದ 131ನೇ ತಿದ್ದುಪಡಿ ಮಸೂದೆ (ಮಹಿಳಾ ಮೀಸಲಾತಿ), ಕ್ಷೇತ್ರ ಮರು ವಿಂಗಡಣೆ ಮಸೂದೆ ಮತ್ತು ಕೇಂದ್ರಾಡಳಿತ ಪ್ರದೇಶಗಳ ಕಾನೂನು ತಿದ್ದುಪಡಿ ಮಸೂದೆಗಳನ್ನು ಮಂಡನೆಯಾಗಿದ್ದು ಸರ್ಕಾರ ಮತ್ತು ವಿರೋಧ ಪಕ್ಷಗಳ ಸಂಸದರ ಮಧ್ಯೆ ಭಾರೀ ಚರ್ಚೆ ನಡೆಯುತ್ತಿದೆ.
