ಉದಯವಾಹಿನಿ, ಹೈದರಾಬಾದ್​: ಕ್ಷೇತ್ರಗಳ ಪುನರ್ವಿಂಗಡಣೆಯ ಬಗ್ಗೆ ತೆಲಂಗಾಣದಾದ್ಯಂತ ತೀವ್ರ ರಾಜಕೀಯ ಚರ್ಚೆಗಳು ಆರಂಭವಾಗಿವೆ. ಗ್ರೇಟರ್ ಹೈದರಾಬಾದ್ ವ್ಯಾಪ್ತಿಯಲ್ಲಿ ವಿಧಾನಸಭಾ ಸ್ಥಾನಗಳ ಸಂಖ್ಯೆ ಪ್ರಸ್ತುತ ಇರುವ 28 ರಿಂದ 41 ಕ್ಕೆ ಏರಬಹುದು ಎಂದು ಅಂದಾಜಿಸಲಾಗಿದೆ. 2011 ರ ಜನಗಣತಿಯನ್ನು ಆಧರಿಸಿ ಈ ಪ್ರಕ್ರಿಯೆ ನಡೆಯಲಿದೆ ಎಂಬ ಕೇಂದ್ರ ಸರ್ಕಾರದ ಸೂಚನೆಯ ಮಧ್ಯೆ ಈ ಬೆಳವಣಿಗೆ ನಿರೀಕ್ಷಿಸಲಾಗಿದೆ.
ನಗರೀಕರಣ ಮತ್ತು ಜನಸಂಖ್ಯೆ ತ್ವರಿತ ಬೆಳವಣಿಗೆಯಿಂದಾಗಿ ಹೈದರಾಬಾದ್, ರಂಗಾರೆಡ್ಡಿ, ಮೆಡ್ಚಲ್-ಮಲ್ಕಜ್‌ಗಿರಿ ಜಿಲ್ಲೆಯಲ್ಲಿ ಕ್ಷೇತ್ರಗಳ ಸಂಖ್ಯೆಯಲ್ಲಿ ಅತ್ಯಧಿಕ ಹೆಚ್ಚಳವಾಗುವ ನಿರೀಕ್ಷೆಯಿದೆ. ರಾಜಕೀಯ ವಿಶ್ಲೇಷಕರ ಪ್ರಕಾರ, ಹೈದರಾಬಾದ್ ಜಿಲ್ಲೆ ಮಾತ್ರವೇ ಸುಮಾರು 7 ಹೊಸ ವಿಧಾನಸಭಾ ಕ್ಷೇತ್ರಗಳನ್ನು ಪಡೆಯಬಹುದು ಎಂದು ಅಂದಾಜಿಸಿದ್ದಾರೆ. ಇದರ ಜೊತೆಗೆ ಲೋಕಸಭಾ ಸ್ಥಾನಗಳ ಸಂಖ್ಯೆಯಲ್ಲಿಯೂ ಏರಿಕೆಯಾಗಬಹುದು.

2004 ರಿಂದ, ಹೈದರಾಬಾದ್‌ ನಗರದ ವಿಸ್ತರಣೆ ವೇಗವಾಗಿದೆ. ಉಪನಗರಗಳು ಮುಖ್ಯ ನಗರದಲ್ಲಿ ಸೇರಿಕೊಂಡಿವೆ. ಹೊರವಲಯದಲ್ಲಿರುವ ಹಳ್ಳಿಗಳು ಪ್ರಮುಖ ವಸತಿ ಮತ್ತು ವಾಣಿಜ್ಯ ಕೇಂದ್ರಗಳಾಗಿ ವಿಕಸನಗೊಂಡಿವೆ. ಇದು ಜನಸಂಖ್ಯೆಯಲ್ಲಿ ತೀವ್ರ ಏರಿಕೆಗೆ ಕಾರಣವಾಗಿದೆ. ಪ್ರಸ್ತುತ ಜನಸಂಖ್ಯೆಯು 1.34 ಕೋಟಿ ಎಂದು ಅಂದಾಜಿಸಲಾಗಿದೆ. 2011 ರ ಜನಗಣತಿಯಲ್ಲಿ ಈ ಜನಸಂಖ್ಯೆಯು 89.5 ಲಕ್ಷವಾಗಿತ್ತು.
ಹೊಸ ಕ್ಷೇತ್ರಗಳು ಶೀಘ್ರದಲ್ಲೇ ಸೇರ್ಪಡೆ: ಪ್ರಸ್ತುತ, ಹೈದರಾಬಾದ್ ಜಿಲ್ಲೆಯಲ್ಲಿ 14 ವಿಧಾನಸಭಾ ಕ್ಷೇತ್ರಗಳಿವೆ. ಹಳೆಯ ನಗರ ಪ್ರದೇಶಗಳಾದ ಬಹದ್ದೂರ್‌ಪುರ, ಚಂದ್ರಾಯಣಗುಟ್ಟ, ಚಾರ್​​ಮಿನಾರ್, ಕಾರ್ವಾನ್, ಯಾಕುತ್‌ಪುರ ಮತ್ತು ಮಲಕ್‌ಪೇಟೆ ವಿಧಾನಸಭಾ ಕ್ಷೇತ್ರಗಳ ಜೊತೆಗೆ ಕ್ಷೇತ್ರ ಪುನರ್​​ವಿಂಗಡಣೆಯ ಬಳಿಕ ಅಬಿಡ್ಸ್ (ಕೋಟಿ) ಮತ್ತು ಚಾದರ್ಘಾಟ್‌ಗಳು ಹೊಸದಾಗಿ ಸೇರ್ಪಡೆಯಾಗುವ ಸಾಧ್ಯತೆ ಇದೆ.

ಮುಖ್ಯ ನಗರದಲ್ಲಿರುವ ನಾಂಪಲ್ಲಿ, ಸನತ್‌ನಗರ, ಸಿಕಂದರಾಬಾದ್, ಅಂಬರ್‌ಪೇಟೆ, ಜುಬಿಲಿ ಹಿಲ್ಸ್, ಖೈರತಾಬಾದ್ ಮತ್ತು ಮುಶೀರಾಬಾದ್‌ ಕ್ಷೇತ್ರಗಳನ್ನು ಪುನರ್​​ರಚನೆಗೆ ಒಳಗಾಗಬಹುದು. ಬಂಜಾರ ಹಿಲ್ಸ್, ಹಿಮಾಯತ್‌ನಗರ, ಅಮೀರ್‌ಪೇಟೆ ಮತ್ತು ಬೇಗಂಪೆಟ್‌ಗಳು ಹೊಸದಾಗಿ ಸೇರಬಹುದು. ಇವುಗಳಲ್ಲಿ, ಬಂಜಾರ ಹಿಲ್ಸ್ ಪ್ರತ್ಯೇಕ ಕ್ಷೇತ್ರವಾಗಿ ರೂಪುಗೊಳ್ಳಬಹುದು ಎಂದು ನಿರೀಕ್ಷಿಸಲಾಗಿದೆ. ಇನ್ನೂ, ರಂಗಾರೆಡ್ಡಿ ಜಿಲ್ಲೆಯಲ್ಲಿ ಗಚಿಬೌಲಿ, ನರಸಿಂಗಿ, ಶಂಶಾಬಾದ್, ಮಣಿಕೊಂಡ, ಮಿಯಾಪುರ್ ಮತ್ತು ಚಾಂದ್​​ನಗರಗಳು ಹೊಸ ಕ್ಷೇತ್ರಗಳಾಗಿ ಹೊರಹೊಮ್ಮುವ ಸಾಧ್ಯತೆಯಿದೆ. ಈ ವಿಸ್ತರಣೆಗೆ ಅನುಗುಣವಾಗಿ ಜನನಿಬಿಡ ಸೆರಿಲಿಂಗಂಪಲ್ಲಿ ವಿಭಾಗವನ್ನು ವಿಭಜಿಸಬಹುದು. ಅದೇ ರೀತಿ, ಮೆಡ್ಚಲ್-ಮಲ್ಕಜ್‌ಗಿರಿ ಜಿಲ್ಲೆಯಲ್ಲಿ, ಕಪ್ರಾ, ಬೋಡುಪ್ಪಲ್, ಬಾಲನಗರ ಮತ್ತು ಬಚುಪಲ್ಲಿಯಂತಹ ಹೊಸ ಕ್ಷೇತ್ರಗಳು ಪ್ರಸ್ತಾವನೆಗಳಲ್ಲಿ ಸೇರಿವೆ.

Leave a Reply

Your email address will not be published. Required fields are marked *

error: Content is protected !!