ಉದಯವಾಹಿನಿ, ಎರ್ನಾಕುಲಂ (ಕೇರಳ): ಕೊಚ್ಚಿ ಕರಾವಳಿಯ ಆಳ ಸಮುದ್ರದ ತೈಲ ಪರಿಶೋಧನಾ ಹಡಗಿನಲ್ಲಿ ಹಠಾತ್ ಹೃದಯಾಘಾತಕ್ಕೊಳಗಾಗಿದ್ದ ಸಿಬ್ಬಂದಿಯೊಬ್ಬರನ್ನು ಭಾರತೀಯ ನೌಕಾಪಡೆ ಪವಾಡಸದೃಶ ರೀತಿಯಲ್ಲಿ ರಕ್ಷಣೆ ಮಾಡಿದೆ.ಕೊಚ್ಚಿ ಕರಾವಳಿಯಿಂದ ಸುಮಾರು 110 ಕಿ.ಮೀ ದೂರದಲ್ಲಿರುವ ‘ಗ್ರೇಟ್‌ಡ್ರಿಲ್ ಛಾಯಾ’ ತೈಲ ಸ್ಥಾವರದಲ್ಲಿದ್ದ 42 ವರ್ಷದ ವ್ಯಕ್ತಿಯನ್ನು ನೌಕಾಪಡೆಯು ತ್ವರಿತ ಕಾರ್ಯಾಚರಣೆಯ ಮೂಲಕ ಜೀವ ಉಳಿಸಿದೆ. ಹಠಾತ್ ಹೃದಯಾಘಾತದಿಂದ ಆರೋಗ್ಯ ಸ್ಥಿತಿ ಹದಗೆಟ್ಟಿದ್ದ ಅವರನ್ನು ನೌಕಾಪಡೆಯ ನೇತೃತ್ವದಲ್ಲಿ ಚಿಕಿತ್ಸೆಗಾಗಿ ತೀರಕ್ಕೆ ತರುವ ಮೂಲಕ ಸಾವಿನ ಕದ ತಟ್ಟಿದ್ದ ಸಿಬ್ಬಂದಿಯನ್ನು ರಕ್ಷಿಸಿದೆ.
ನೌಕಾಪಡೆಯ ದಕ್ಷಿಣ ನೌಕಾ ಕಮಾಂಡ್‌ಗೆ ತೈಲ ಸ್ಥಾವರದ ಉದ್ಯೋಗಿಯೊಬ್ಬರು ಗಂಭೀರ ಹೃದಯ ಕಾಯಿಲೆಯಿಂದ ಬಳಲುತ್ತಿರುವುದಾಗಿ ಮತ್ತು ತಕ್ಷಣದ ವೈದ್ಯಕೀಯ ಆರೈಕೆಯ ಅಗತ್ಯವಿದೆ ಎಂಬ ಸಂದೇಶ ಬಂದಿತು. ಆದರೆ, ಅವರ ಜೀವ ರಕ್ಷಣೆ ಅಷ್ಟು ಸುಲಭದ್ದಾಗಿರಲಿಲ್ಲ. ಕಾರಣ ರೋಗಿಯನ್ನು ಹಡಗಿನ ಮೂಲಕ ದಡಕ್ಕೆ ತರುವುದ ಸಮಯ ದೃಷ್ಟಿಯಿಂದ ಕಷ್ಟಸಾಧ್ಯವಾಗಿತ್ತು. ಆತನ ಜೀವಕ್ಕೆ ಅಪಾಯವಿದೆ ಎಂದು ಅರಿತುಕೊಂಡ ನೌಕಾಪಡೆಯು ವಾಯು ರಕ್ಷಣಾ ಕಾರ್ಯಾಚರಣೆಯನ್ನು ನಡೆಸಲು ನಿರ್ಧರಿಸಿತು. ಒಂದು ಸಾಹಸಮಯ ಕಾರ್ಯಾಚರಣೆ: ಕೊಚ್ಚಿಯ ನೌಕಾ ವಾಯುನೆಲೆಯಾದ ಐಎನ್ಎಸ್ ಗರುಡದಿಂದ ಅತ್ಯಾಧುನಿಕ ಅಡ್ವಾನ್ಸ್ಡ್ ಲೈಟ್ ಹೆಲಿಕಾಪ್ಟರ್ (ALH) ಈ ಕಾರ್ಯಾಚರಣೆಗಾಗಿ ಹೊರಟಿತು. ವಿಶೇಷ ವೈದ್ಯಕೀಯ ತಂಡದೊಂದಿಗೆ ಹೆಲಿಕಾಪ್ಟರ್ ಪ್ರತಿಕೂಲ ಹವಾಮಾನ ಪರಿಸ್ಥಿತಿ ಮತ್ತು ಸಮುದ್ರದಲ್ಲಿನ ಸವಾಲುಗಳನ್ನು ಎದುರಿಸಿಕೊಂಡು ತನ್ನ ಗಮ್ಯಸ್ಥಾನವನ್ನು ತಲುಪಿತು. ಒಂದು ನಿಮಿಷವೂ ವ್ಯರ್ಥ ಮಾಡದೇ ತೆರಳಬೇಕಿದ್ದ ಗುರಿಯನ್ನು ತಲುಪಿದ ವೈದ್ಯಕೀಯ ಸಿಬ್ಬಂದಿ ತಕ್ಷಣ ರೋಗಿಯ ಆರೋಗ್ಯದ ಪ್ರಾಥಮಿಕ ಮೌಲ್ಯಮಾಪನ ನಡೆಸಿದರು.
