ಉದಯವಾಹಿನಿ, ಇಸ್ಲಾಮಾಬಾದ್‌: ಪಾಕಿಸ್ತಾನದ ಲಾಹೋರ್‌ನಲ್ಲಿ ಲಷ್ಕರ್-ಎ-ತೊಯ್ಬಾ ಭಯೋತ್ಪಾದಕ ಸಂಘಟನೆಯ ಸಹ-ಸಂಸ್ಥಾಪಕ ಅಮೀರ್ ಹಮ್ಜಾ ಮೇಲೆ ಗುಂಡಿನ ದಾಳಿ ನಡೆದಿದೆ. ಲಾಹೋರ್‌ನ ರಸ್ತೆಯೊಂದರಲ್ಲಿ ನ್ಯೂಸ್ ಚಾನೆಲ್ ಕಚೇರಿಯ ಹೊರಗೆ ಅಪರಿಚಿತ ಬಂದೂಕುಧಾರಿಗಳು ಮೋಟಾರ್ ಬೈಕ್‌ನಲ್ಲಿ ಬಂದು ಅಮೀರ್ ಹಮ್ಜಾನನ್ನು ಗುರಿಯಾಗಿಸಿಕೊಂಡು ಗುಂಡಿನ ದಾಳಿ ನಡೆಸಿದ್ದಾರೆ.ಹಮ್ಜಾ ಸ್ಥಳೀಯ ನ್ಯೂಸ್ ಚಾನೆಲ್ ಕಚೇರಿಯಿಂದ ತನ್ನ ಮನೆಗೆ ಕಾರಿನಲ್ಲಿ ಹಿಂತಿರುಗುತ್ತಿದ್ದಾಗ, ಮೋಟಾರ್ ಬೈಕ್‌ನಲ್ಲಿ ಬಂದ ಇಬ್ಬರು ಅಪರಿಚಿತ ಬಂದೂಕುಧಾರಿಗಳು ಆತನ ಕಾರನ್ನು ತಡೆದು ನಿಲ್ಲಿಸಿದ್ದಾರೆ.
ದಾಳಿಕೋರರು ಕಾರಿನ ಕಿಟಕಿಗಳ ಮೇಲೆ ಬಹಳ ಹತ್ತಿರದಿಂದ ಶೂಟ್‌ ಮಾಡಿದ್ದಾರೆ. ದಾಳಿಯಲ್ಲಿ ಕಾರಿನ ಗಾಜುಗಳು ಪುಡಿಯಾಗಿದ್ದು ಹಮ್ಜಾನ ತೋಳು ಮತ್ತು ಭುಜಕ್ಕೆ ಗುಂಡು ತಗುಲಿದೆ ಎಂದು ವರದಿಯಾಗಿದೆ. ದಾಳಿಯ ನಂತರ ಹಮ್ಜಾನ ಸ್ಥಿತಿ ಗಂಭೀರವಾಗಿದ್ದು, ಆತನನ್ನು ಲಾಹೋರ್‌ನ ಆಸ್ಪತ್ರೆಗೆ ದಾಖಲಿಸಿ ಐಸಿಯುನಲ್ಲಿ (ICU) ಚಿಕಿತ್ಸೆ ನೀಡಲಾಗುತ್ತಿದೆ. ಸ್ಥಳೀಯ ಪೊಲೀಸರು ಪ್ರದೇಶವನ್ನು ಸುತ್ತುವರಿದು ತನಿಖೆ ಆರಂಭಿಸಿದ್ದಾರೆ. ದಾಳಿ ನಡೆದಾಗ ಕಾರಿನಲ್ಲಿ ಹಮ್ಜಾನ ಜೊತೆಗೆ ಪಾಕಿಸ್ತಾನದ ನಿವೃತ್ತ ನ್ಯಾಯಾಧೀಶ ನಜೀರ್ ಅಹ್ಮದ್ ಘಾಜಿ ಅವರೂ ಇದ್ದರು ಎಂದು ವರದಿಯಾಗಿದೆ.

Leave a Reply

Your email address will not be published. Required fields are marked *

error: Content is protected !!