ಉದಯವಾಹಿನಿ, ಅಂಕಾರಾ: ಟರ್ಕಿಯ ಶಾಲೆಯೊಂದರಲ್ಲಿ 13 ವರ್ಷದ ವಿದ್ಯಾರ್ಥಿಯೊಬ್ಬ ಗುಂಡಿನ ದಾಳಿ (Shooting) ನಡೆಸಿದ ಪರಿಣಾಮ 9 ಮಂದಿ ಸಾವನ್ನಪ್ಪಿದ್ದು, 13 ಜನರು ಗಾಯಗೊಂಡಿದ್ದಾರೆ. ಎರಡು ದಿನಗಳಲ್ಲಿ ನಡೆದ ಎರಡನೇ ಗುಂಡಿನ ದಾಳಿ ಇದಾಗಿದೆ.
ಕಹ್ರನ್ಮರಸ್ ಪ್ರಾಂತ್ಯದಲ್ಲಿ ಘಟನೆ ನಡೆದಿದೆ. ಗುಂಡಿನ ದಾಳಿಯಲ್ಲಿ 9 ಮಂದಿ ಮೃತಪಟ್ಟಿದ್ದು, 13 ಮಂದಿ ಗಾಯಗೊಂಡಿದ್ದಾರೆ. ಅವರಲ್ಲಿ ಆರು ಮಂದಿ ಐಸಿಯುನಲ್ಲಿದ್ದಾರೆ. 6 ಮಂದಿ ಪೈಕಿ ಮೂವರ ಸ್ಥಿತಿ ಗಂಭೀರವಾಗಿದೆ ಎಂದು ಆಂತರಿಕ ಸಚಿವ ಮುಸ್ತಫಾ ಸಿಫ್ಟ್ಸಿ ತಿಳಿಸಿದ್ದಾರೆ. ಗುಂಡಿನ ದಾಳಿಯಿಂದ ತಪ್ಪಿಸಿಕೊಳ್ಳುವ ಸಲುವಾಗಿ ವಿದ್ಯಾರ್ಥಿಗಳು ಶಾಲೆಯ ಮೊದಲನೇ ಮಹಡಿಯಿಂದ ಕೆಳಗೆ ಜಿಗಿದಿದ್ದಾರೆ. ಇದನ್ನೂ ಓದಿ: ಈಗ ಅಧಿಕೃತ – ಕರ್ನಾಟಕದಲ್ಲಿ ಇನ್ಮುಂದೆ ಇವಿಎಂ ಬದಲು ಬ್ಯಾಲೆಟ್‌ ಪೇಪರ್‌
8ನೇ ತರಗತಿ ವಿದ್ಯಾರ್ಥಿಯೊಬ್ಬ ತನ್ನ ತಂದೆಗೆ ಸೇರಿದ ಬಂದೂಕುಗಳೊಂದಿಗೆ ಶಾಲೆಗೆ ಬಂದಿದ್ದು, ಗುಂಡಿನ ದಾಳಿ ನಡೆಸಿದ್ದಾನೆ. ದಾಳಿಯಲ್ಲಿ ದಾಳಿಕೋರ ಸಹ ಸಾವನ್ನಪ್ಪಿದ್ದಾನೆ ಎಂದು ಕಹ್ರನ್ಮರಸ್ ಪ್ರಾಂತೀಯ ಗವರ್ನರ್ ಮುಖೆರೆಮ್ ಉನ್ಲುಯರ್ ಹೇಳಿದ್ದಾರೆ. ದಾಳಿಕೋರ ಮಾಜಿ ಪೊಲೀಸ್ ಅಧಿಕಾರಿಯೊಬ್ಬರ ಪುತ್ರನಾಗಿದ್ದು, ಆತನ ಬಳಿ ಐದು ಬಂದೂಕುಗಳು ಮತ್ತು ಏಳು ಮ್ಯಾಗಜೀನ್‌ಗಳಿತ್ತು. ದಾಳಿಕೋರ ಕೂಡ ಗುಂಡು ತಗುಲಿ ಸಾವನ್ನಪ್ಪಿದ್ದಾನೆ. ಇದು ಆತ್ಮಹತ್ಯೆಯೋ ಅಥವಾ ದಾಳಿಯ ಸಮಯದಲ್ಲಿ ನಡೆದ ಅವಘಢವೋ ಎಂಬುದು ಇನ್ನೂ ಖಚಿತವಾಗಿಲ್ಲ ಎಂದು ಉನ್ಲುಯರ್ ಮಾಹಿತಿ ನೀಡಿದ್ದಾರೆ.

ಸ್ಯಾನ್ಲಿಯುರ್ಫಾ ಪ್ರಾಂತ್ಯದ ಸಿವೆರೆಕ್ ಜಿಲ್ಲೆಯ ಪ್ರೌಢಶಾಲೆಯಲ್ಲಿ ಮಂಗಳವಾರ ಮಾಜಿ ವಿದ್ಯಾರ್ಥಿಯೊಬ್ಬ ಬಂದೂಕಿನಿಂದ ಗುಂಡು ಹಾರಿಸಿದ ಪರಿಣಾಮ 16 ಮಂದಿ ಗಾಯಗೊಂಡಿದ್ದರು. ಇದಾಗಿ ಒಂದು ದಿನದ ನಂತರ ಈ ಗುಂಡಿನ ದಾಳಿ ನಡೆದಿದೆ.

Leave a Reply

Your email address will not be published. Required fields are marked *

error: Content is protected !!