ಉದಯವಾಹಿನಿ, ಇಸ್ಲಾಮಾಬಾದ್: ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಟೌನ್ಸಾದಲ್ಲಿ ಸಿರಿಂಜ್ ಮರುಬಳಕೆಯಿಂದ 331 ಮಕ್ಕಳಿಗೆ ಎಚ್‌ಐವಿ (HIV) ಸೋಂಕು‌ ತಗಲಿದೆ. ಈ ಪ್ರಕರಣ ಬೆಳಕಿಗೆ ಬಂದ ಮೇಲೆ ಅಧಿಕಾರಿಗಳು ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ. ಆದರೆ ಇದರ ಬಳಿಕವು ಕೂಡ ಆಸ್ಪತ್ರೆಯಲ್ಲಿ ನಿರ್ಲಕ್ಷ್ಯವಹಿಸಲಾಗಿದೆ ಎನ್ನುವ ಆರೋಪಗಳು ಕೇಳಿ ಬರುತ್ತಿವೆ. ಪಾಕಿಸ್ತಾನದ ತಹಸಿಲ್ ಪ್ರಧಾನ ಕಚೇರಿ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದ ಘಟನೆಗೆ ಸಂಬಂಧಿಸಿ ತನಿಖೆ ನಡೆಸುವುದಾಗಿ ಅಧಿಕಾರಿಗಳು ತಿಳಿಸಿದ್ದು, ಅನಂತರವೂ ಆಸ್ಪತ್ರೆಯಲ್ಲಿ ಅಸುರಕ್ಷಿತ ವೈದ್ಯಕೀಯ ಪದ್ಧತಿಗಳನ್ನು ಅನುಸರಿಸುವುದನ್ನು ಮುಂದುವರಿಸಲಾಗಿದೆ ಎಂದು ಅನೇಕ ಕುಟುಂಬಗಳು ದೂರಿವೆ.

ಟೌನ್ಸಾದ ತಹಸಿಲ್ ಪ್ರಧಾನ ಕಚೇರಿ (ಟಿಎಚ್‌ಕ್ಯೂ) ಆಸ್ಪತ್ರೆಯಲ್ಲಿ ಅಸುರಕ್ಷಿತ ವಿಧಾನದಲ್ಲಿ ಚಿಕಿತ್ಸೆ ನೀಡುವುದನ್ನು ಮುಂದುವರಿಸಲಾಗಿದೆ. ನೂರಾರು ಮಕ್ಕಳಿಗೆ ವೈರಸ್ ತಗಲಿರುವುದು ಆತಂಕಕ್ಕೆ ಕಾರಣವಾಗಿದೆ. ಎಚ್‌ಐವಿ ಸೋಂಕಿನಿಂದ ಇತ್ತೀಚೆಗೆ ಸಾವನ್ನಪ್ಪಿದ ಎಂಟು ವರ್ಷದ ಮೊಹಮ್ಮದ್ ಅಮೀನ್ ಕೊನೆಯ ದಿನಗಳಲ್ಲಿ ತೀವ್ರ ನೋವು ಮತ್ತು ನಿರಂತರ ಜ್ವರದಿಂದ ಬಳಲುತ್ತಿದ್ದನು. ಆತನ ಸಹೋದರಿಯಲ್ಲೂ ಕೂಡ ಇದೇ ರೀತಿಯ ಲಕ್ಷಣಗಳು ಕಂಡು ಬಂದಿವೆ. ಕಲುಷಿತ ಸಿರಿಂಜ್‌ಗಳಿಂದ ಆಸ್ಪತ್ರೆಯಲ್ಲಿ ದಿನದಲ್ಲಿ ಕನಿಷ್ಠ ಇಬ್ಬರು ಮಕ್ಕಳಿಗೆ ಎಚ್‌ಐವಿ ಸೋಂಕು ತಗಲುತ್ತದೆ ಎಂದು ಅವರ ಕುಟುಂಬ ತಿಳಿಸಿದೆ.
ತನಿಖಾ ವರದಿಯ ಪ್ರಕಾರ 2024ರ ನವೆಂಬರ್ ನಿಂದ 2025ರ ಅಕ್ಟೋಬರ್ ಮಧ್ಯೆ ಟೌನ್ಸಾದಲ್ಲಿ ಸುಮಾರು 331 ಮಕ್ಕಳಿಗೆ ಎಚ್‌ಐವಿ ಸೋಂಕು ತಗಲಿದೆ. ಪರೀಕ್ಷಿಸಲಾದ 97 ಪೀಡಿತ ಕುಟುಂಬಗಳಲ್ಲಿ ಕೇವಲ ನಾಲ್ಕು ತಾಯಂದಿರು ಮಾತ್ರ ಎಚ್‌ಐವಿ ಸೋಂಕಿತರಾಗಿರುವುದು ತಿಳಿದುಬಂದಿದೆ.

Leave a Reply

Your email address will not be published. Required fields are marked *

error: Content is protected !!