ಉದಯವಾಹಿನಿ, ಟೆಹರಾನ್, : ಇರಾನ್ ವಿರುದ್ಧದ ಯುದ್ಧದ ವೇಳೆ ಅಮೆರಿಕ ಮತ್ತು ಇಸ್ರೇಲ್ ಮನಬಂದಂತೆ ವಾಯು ಮತ್ತು ಕ್ಷಿಪಣಿಗಳಿಂದ ದಾಳಿ ನಡೆಸಿದೆ. ಮಿಲಿಟರಿ ನೆಲೆ, ರೈಲ್ವೇ ಹಳಿಗಳು ಸೇರಿ ನಾಗರಿಕ ಮೂಲಸೌಕರ್ಯಗಳನ್ನು ನಾಶ ಮಾಡಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಇರಾನ್‌ನ ಸಾರಿಗೆ ಮತ್ತು ಸಂವಹನ ಜಾಲಗಳನ್ನು ದುರ್ಬಲಗೊಳಿಸುವ ಬಗ್ಗೆಯೂ ಎಚ್ಚರಿಕೆ ನೀಡಿದ್ದರು. ಟ್ರಂಪ್, ಪದೇ ಪದೆ ಸೇತುವೆಗಳು, ವಿದ್ಯುತ್ ಸ್ಥಾವರಗಳು ಮತ್ತು ಇತರ ಮೂಲಸೌಕರ್ಯಗಳ ಮೇಲೆ ಬಾಂಬ್ ದಾಳಿ ಮಾಡುವುದಾಗಿ ಬೆದರಿಕೆ ಹಾಕಿದ್ದರು. ಇರಾನ್ ಅನ್ನು ಶಿಲಾಯುಗಕ್ಕೆ ಹಿಂತಿರುಗಿಸಲಾಗುವುದು ಎಂಬ ಎಚ್ಚರಿಕೆ ನೀಡಿದ್ದರು. ಅದ್ಯಾವುದನ್ನೂ ಗಣನೆಗೆ ತೆಗೆದುಕೊಳ್ಳದ ಇರಾನ್ ಇದೀಗ ದೇಶದ ಪುನರ್‌ನಿರ್ಮಾಣದ ಪಣ ತೊಟ್ಟಿದೆ.
ಅಮೆರಿಕ ಮತ್ತು ಇಸ್ರೇಲ್ ಅನ್ನು ಅಣಕಿಸುವ ಮತ್ತು ಸವಾಲು ಹಾಕುವ ಹಾಗೆ ಇರಾನ್ ಪುನರ್‌ನಿರ್ಮಾಣ ಕಾರ್ಯವನ್ನು ಸಮರೋಪಾದಿಯಲ್ಲಿನಡೆಸುತ್ತಿದೆ. ಏಪ್ರಿಲ್ 8ರಂದು ಕದನ ವಿರಾಮ ಜಾರಿಗೆ ಬಂದ ನಂತರ, ದೇಶೀಯ ಎಂಜಿನಿಯರಿಂಗ್ ತಂಡಗಳನ್ನು ಬಳಸಿಕೊಂಡು ದಾಖಲೆಯ ಸಮಯದಲ್ಲಿ ಹಲವು ಹಾನಿಗೊಳಗಾದ ರೈಲು ಮಾರ್ಗಗಳು ಮತ್ತು ಸೇತುವೆಗಳನ್ನು ಪುನಃಸ್ಥಾಪಿಸಲಾಗಿದೆ ಎಂದು ಇರಾನಿನ ಅಧಿಕಾರಿಗಳು ಹೇಳಿದ್ದಾರೆ.ಹೆಚ್ಚಿನ ಪ್ರಮಾಣದ ಪ್ರಯಾಣಿಕರು ಮತ್ತು ಸರಕುಗಳನ್ನು ಸಾಗಿಸಲು ರೈಲ್ವೆಗಳು ಪ್ರಮುಖ ಪಾತ್ರ ವಹಿಸುತ್ತಿವೆ. ಅದಕ್ಕಾಗಿಯೇ ಅವು ಬಹಳ ಹಿಂದಿನಿಂದಲೂ ಸುಲಭ ಗುರಿ ಎನಿಸಿಕೊಂಡಿವೆ. ಉದಾಹರಣೆಗೆ, ವಿಯೆಟ್ನಾಂ ಯುದ್ಧದ ಸಮಯದಲ್ಲಿ, ಚೀನಾದಿಂದ ಸರಬರಾಜು ಮಾರ್ಗಗಳನ್ನು ಕಡಿತಗೊಳಿಸಲು ಅಮೆರಿಕದ ಪಡೆಗಳು ಉತ್ತರ ವಿಯೆಟ್ನಾಂನಲ್ಲಿನ ರೈಲು ಕೇಂದ್ರಗಳ ಮೇಲೆ ಪದೇ ಪದೆ ದಾಳಿ ಮಾಡಿದವು. ವಿಯೆಟ್ನಾಂ ಸಿಬ್ಬಂದಿ ಗುಂಡಿನ ದಾಳಿಯ ಸಮಯದಲ್ಲಿ ಹಾನಿಯನ್ನು ಸರಿಪಡಿಸಿದ ರೀತಿಯಲ್ಲಿಯೇ, ಇರಾನ್ ಈಗ ತಮ್ಮ ಹಾನಿಗೊಳಗಾದ ರೈಲು ಜಾಲವನ್ನು ಪುನಃಸ್ಥಾಪಿಸುವಲ್ಲಿ ಇದೇ ರೀತಿಯ ದೃಢನಿಶ್ಚಯ ಮತ್ತು ವೇಗವನ್ನು ಪ್ರದರ್ಶಿಸುತ್ತಿವೆ.
