ಉದಯವಾಹಿನಿ, ಬೆಂಗಳೂರು: ರಾಜ್ಯದ ಚಾರಣಿಗರ ಸುರಕ್ಷತೆಗಾಗಿ ಟ್ರೆಕ್ಕಿಂಗ್‌ಗೆ ಹೊಸ ಗೈಡ್‌ಲೈನ್ಸ್ ಬಿಡುಗಡೆ ಮಾಡಲಾಗಿದೆ.
ಟ್ರೆಕ್ಕಿಂಗ್ ಸಂಬಂಧಿಸಿದ ಎಸ್‌ಒಪಿ ಬಿಡುಗಡೆ ಮಾಡಿ ಮಾತನಾಡಿದ ಅರಣ್ಯ ಸಚಿವ ಈಶ್ವರ್ ಖಂಡ್ರೆ, ಚಾರಣಿಗರ ಮೊಬೈಲ್‌ಗೆ ಟ್ರ್ಯಾಕಿಂಗ್ ಆ್ಯಪ್ ಕಡ್ಡಾಯ. 10 ಚಾರಣಿಗರಿಗೆ ಒಬ್ಬ ಗೈಡ್ ಇರಲೇಬೇಕು. ಆನ್‌ಲೈನ್ ಮೂಲಕ ಚಾರಣದ ಬುಕ್ಕಿಂಗ್‌ಗೆ ಅವಕಾಶವಿದೆ. 10 ಮಂದಿಗೆ ಒಬ್ಬ ಗೈಡ್ ಕೊಟ್ಟ ಬಳಿಕವೇ ಚಾರಣಕ್ಕೆ ಅವಕಾಶ ನೀಡಲಾಗುವುದು ಎಂದು ತಿಳಿಸಿದರು. ರಾಜ್ಯದಲ್ಲಿ 44 ಚಾರಣ ಪಾಯಿಂಟ್‌ಗಳು ಚಾಲ್ತಿಯಲ್ಲಿವೆ. ಕೊಡಗು ತಡಿಯಾಂಡಮೊಳ್‌ನಲ್ಲಿ ಚಾರಣಕ್ಕೆ ಬಂದಿದ್ದ ಮಹಿಳೆ ನಾಪತ್ತೆಯಾಗಿದ್ದರು.
ಕಡ್ಡಾಯವಾಗಿ ಎಸ್‌ಓಪಿ ಜಾರಿಗೆ ತರಲು ಸೂಚನೆ ನೀಡಿದ್ದೇವೆ ಎಂದು ಹೇಳಿದರು. 500-1000 ಮಂದಿ ಕೂಡ ಒಂದೊಂದು ಲೊಕೇಷನ್‌ನಲ್ಲಿ ಚಾರಣಕ್ಕೆ ಹೋದ ಉದಾಹರಣೆ ವರದಿ ಆಗಿದೆ. ಕ್ಯಾರಿಂಗ್ ಕೆಪಾಸಿಟಿ ಕೂಡ ಲಿಮಿಟ್ ಮಾಡುತ್ತಿದ್ದೇವೆ. ಒಮ್ಮೆ 150 ಮಂದಿ ಮಾತ್ರ ಚಾರಣಕ್ಕೆ ಹೋಗಬೇಕು. 150 ಮಂದಿಯ ತಂಡ ಮರಳಿದ ನಂತರ ಮಾತ್ರ ಇನ್ನೊಂದು ತಂಡ ಕಳಿಸಬೇಕು. ಕಟ್ಟುನಿಟ್ಟಾಗಿ ಎಸ್‌ಒಪಿ ಜಾರಿಗೆ ತರಲಾಗುತ್ತದೆ. ಈ ನಿಯಮಗಳನ್ನು ಮೊದಲು ಪಾಲನೆ ಮಾಡುತ್ತಿರಲಿಲ್ಲ. ಈಗ ಪಾಲನೆ ಮಾಡಲೇಬೇಕು ಎಂದು ಹೇಳಿದರು.
